More

    ಗ್ರಾಪಂಗೆ ಬೆಂಕಿ ಹಚ್ಚಿಸಿದ್ದ ಸೂತ್ರಧಾರಿ ಅರೆಸ್ಟ್, ಕನ್ನಮಂಗಲ ಪಂಚಾಯಿತಿ ಕಡತನಾಶ ಪ್ರಕರಣ, ವಾಟರ್‌ಮನ್ ಜತೆಗೂಡಿ ಡೇಟಾ ಆಪರೇಟರ್ ಕೃತ್ಯ ಆರೋಪ

    ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ಕನ್ನಮಂಗಲ ಪಂಚಾಯಿತಿ ಕಟ್ಟಡಕ್ಕೆ ಬೆಂಕಿ ಹಚ್ಚಿಸಿದ್ದ ಸೂತ್ರಧಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಗರಣ ಮುಚ್ಚಿಹಾಕಲು ಕಡತಗಳನ್ನೇ ನಾಶಪಡಿಸುವ ಉದ್ದೇಶದಿಂದ ಆಕಸ್ಮಿಕ ಅನಾಹುತ ಎಂಬಂತೆ ಬಿಂಬಿಸಲು ಹೊರಟಿದ್ದ ಡೇಟಾ ಆಪರೇಟರ್ ಅನುರಾಧಾ ಇದೀಗ ಪೊಲೀಸರ ವಶದಲ್ಲಿದ್ದಾರೆ.

    ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾದ ಮತ್ತೊಬ್ಬ ಆರೋಪಿ ಅದೇ ಪಂಚಾಯಿತಿ ವಾಟರ್‌ಮನ್ ವೆಂಕಟೇಶ್ ಎಂಬುವವರು ನೀಡಿದ ಮಾಹಿತಿ ಮೇರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತಲೆಮರೆಸಿಕೊಂಡಿದ್ದ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಒಂದು ವಾರ ತರಬೇತಿ: ಪಂಚಾಯಿತಿಯಲ್ಲಿ ಕಡತ ನಾಶಮಾಡಲು ನಿರ್ಧರಿಸಿದ ಡೇಟಾ ಆಪರೇಟರ್ ಕೃತ್ಯಕ್ಕೆ ವಾಟರ್‌ಮನ್‌ನನ್ನು ಬಳಸಿಕೊಂಡಿದ್ದರು. 1 ವಾರ ಕಡತ ನಾಶಪಡಿಸುವ ಬಗ್ಗೆ ತರಬೇತಿ ನೀಡಲಾಗಿತ್ತು. ಒಂದು ವೇಳೆ ಪೊಲೀಸರಿಗೆ ಸಿಕ್ಕಿಹಾಕಿಕೊಂಡರೆ ಏನೆಲ್ಲ ಸಬೂಬು ಹೇಳಿ ತಪ್ಪಿಸಿಕೊಳ್ಳಬಹುದು ಎಂಬ ಬಗ್ಗೆ ಗಿಣಿಪಾಠ ಹೇಳಿಕೊಡಲಾಗಿತ್ತು. ದ್ವಿಚಕ್ರ ವಾಹನದಲ್ಲಿ ವಾಟರ್‌ಮನ್ ಜತೆಗೂಡಿ ರಾತ್ರಿ ವೇಳೆ ಪಂಚಾಯಿತಿ ಸುತ್ತಮುತ್ತಲಿನ ಪರಿಸ್ಥಿತಿ ಅವಲೋಕಿಸಿ ರಾತ್ರಿ ವೇಳೆಯೆ ಕೃತ್ಯ ಎಸಗಿ ಆಕಸ್ಮಿಕ ಅನಾಹುತ ಎಂದು ಬಿಂಬಿಸುವ ಸಂಚು ರೂಪಿಸಲಾಗಿತ್ತು ಎಂಬುದರ ಬಗ್ಗೆ ಆರೋಪಿ ವಾಟರ್‌ಮನ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಅನುಮಾನದ ಮೇರೆಗೆ ಈ ಮೊದಲೇ ವಾಟರ್‌ಮನ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದ್ದು, ಸತ್ಯಾಂಶ ಹೊರಬಂದಿದೆ.

    ಅಪಹರಣ: ಕೃತ್ಯಕ್ಕೆ ಹಿಂದೇಟು ಹಾಕಿದ್ದ ವಾಟರ್‌ಮನ್‌ಗೆ ಡೇಟಾ ಆಪರೇಟರ್ ಜೀವ ಬೆದರಿಕೆ ಹಾಕಿದ್ದರು. ಸಹಕರಿಸದಿದ್ದರೆ ಕುಟುಂಬದವರೊಂದಿಗೆ ನಿನ್ನನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದರು. ಅದಕ್ಕೂ ಹಿಂದೇಟು ಹಾಕಿದ್ದಾಗ ಆತನನ್ನು ಅಪಹರಣ ಮಾಡಿಸಿ ಉತ್ತರ ಪ್ರದೇಶದ ವಾರಾಣಸಿಯ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ ಬೆದರಿಸಲಾಗಿತ್ತು. ಕಡೆಗೆ ಕೃತ್ಯ ನಡೆಸಲು ಬಲವಂತದ ಒಪ್ಪಿಗೆ ಪಡೆಯಲಾಗಿತ್ತು ಎಂಬುದು ಅರೋಪಿ ನೀಡಿರುವ ಹೇಳಿಕೆಯಲ್ಲಿ ತಿಳಿದುಬಂದಿದೆ.

    ವಾಟರ್‌ಮನ್ ಡ್ರಾಮಾ: ರಾತ್ರಿ ಬೆಂಕಿ ಹಚ್ಚಿದ ವಾಟರ್‌ಮನ್ ಬೆಳಗಿನ ಜಾವ ತಾನೇ ಊರಿನವರನ್ನೆಲ್ಲ ಕರೆದು ಬೆಂಕಿ ಬಿದ್ದಿದೆ ಎಂದು ಬೊಬ್ಬೆ ಹಾಕಿದ್ದ, ಅಲ್ಲದೆ ಗ್ರಾಮಸ್ಥರೊಂದಿಗೆ ಸೇರಿ ಬೆಂಕಿ ನಂದಿಸುವ ನಾಟಕ ಮಾಡಿದ್ದ. ಪೊಲೀಸರ ತನಿಖೆ ವೇಳೆಯೂ ನಾನೇ ಮೊದಲು ಬೆಂಕಿ ನೋಡಿದ್ದು, ಜನರ ಜತೆ ಸೇರಿ ಬೆಂಕಿ ಆರಿಸಿದ್ದೆ ಎಂದು ಹೇಳಿ ಅಮಾಯಕನಂತೆ ವರ್ತಿಸಿದ್ದ. ಈ ವೇಳೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

    ಏನಿದು ಪ್ರಕರಣ: ಕನ್ನಮಂಗಲ ಪಂಚಾಯಿತಿಯಲ್ಲಿ 10 ವರ್ಷದಿಂದ ಡೆಟಾ ಆಪರೇಟರ್ ಆಗಿದ್ದ ಅನುರಾಧಾ ಕಂದಾಯ ವಸೂಲಿ ವೇಳೆ ನಕಲಿ ಬಿಲ್ ನೀಡಿ ಪಂಚಾಯಿತಿಗೆ ಕೋಟ್ಯಂತರ ರೂ. ವಂಚಿಸಿದ್ದರು. ಇದರೊಂದಿಗೆ ಸರ್ಕಾರಿ ಭೂಮಿಗೆ ನಕಲಿ ಖಾತೆ ಸೇರಿ ಇನ್ನಿತರ ವಂಚನೆಗಳ ಮೂಲಕ ಭ್ರಷ್ಟಾಚಾರ ನಡೆಸಲಾಗಿತ್ತು. ದೇವನಹಳ್ಳಿ ವ್ಯಾಪ್ತಿಯ ಜಮೀನಿಗೆ ಸಂಬಂಧಿಸಿದಂತೆ ಖಾಸಗಿಯವರೊಂದಿಗೆ ಶಾಮೀಲಾಗಿ ಬೇರೆಯವರ ಮಾಲೀಕತ್ವದ ಜಮೀನನ್ನು ಮತ್ತೊಬ್ಬರಿಗೆ ಖಾತೆ ಮಾಡಿಕೊಡಲು ಮುಂದಾಗಿದ್ದರು. ಈ ವಿಷಯ ಬಹಿರಂಗವಾಗಿ ಆರೋಪಿ ವಿರುದ್ಧ ಜಿಪಂ ತನಿಖೆಗೆ ಆದೇಶಿಸಿತ್ತು. ಇದೇ ವೇಳೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಮತ್ತಷ್ಟು ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶ ಮಾಡಲು ಕಡತಗಳಿಗೆ ಬೆಂಕಿ ಹಚ್ಚುವ ಹುನ್ನಾರ ನಡೆಸಲಾಗಿತ್ತು.

    ಹಲವರಿಗೆ ಬಂಧನ ಭೀತಿ: ಕೋಟ್ಯಂತರ ರೂ. ಭ್ರಷ್ಟಾಚಾರ ಪ್ರಕರಣ ಸಂಬಂಧ ಮತ್ತಷ್ಟು ಮಂದಿಯ ಮೇಲೆ ನ್ಯಾಯಾಂಗದ ತೂಗುಗತ್ತಿ ತೂಗುತ್ತಿದೆ. ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆಯ ಮೇಲೆ ಮತ್ತಷ್ಟು ಮಂದಿಯ ವಿಚಾರಣೆ ನಡೆಯುತ್ತಿದ್ದು ಹಲವರಲ್ಲಿ ಡವಡವ ಶುರುವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಗಳಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು.
    ಸಿ.ಕೆ.ಬಾಬು, ಡಿಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts