More

    ಗ್ರಾಪಂಗಳಲ್ಲಿ ಹಾಲಿ ಸದಸ್ಯರನ್ನೇ ಮುಂದುವರಿಸಿ

    ಶಿವಮೊಗ್ಗ: ಅವಧಿ ಮುಗಿಯಲಿರುವ ಗ್ರಾಪಂಗಳಲ್ಲಿ ಸದಸ್ಯರ ನಾಮನಿರ್ದೇಶನ ಬದಲಿಗೆ ಅವಧಿ ಪೂರ್ಣಗೊಳ್ಳುತ್ತಿರುವ ಸದಸ್ಯರನ್ನೇ ಮುಂದುವರಿಸಬೇಕು ಇಲ್ಲವೇ ಶೀಘ್ರ ಚುನಾವಣೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದರು.

    ಈ ಹಿಂದೆ ಒಂದು ಬಾರಿ ಅಧಿಕಾರಾವಧಿ ಮುಕ್ತಾಯವಾದ ಬಳಿಕ ಚುನಾವಣೆ ನಡೆಯುವವರೆಗೆ ಒಂದು ವರ್ಷ ಕಾಲ ಹಿಂದಿನ ಸದಸ್ಯರನ್ನೇ ಮುಂದುವರಿಸಿರುವ ನಿದರ್ಶನವಿದೆ. ಈಗಲೂ ಅದೇ ಮಾರ್ಗ ಅನುಸರಿಸಬಹುದು. ಆದರೆ ಸರ್ಕಾರ ಆಡಳಿತ ಸಮಿತಿ ನಾಮನಿರ್ದೇಶನ ಮಾಡುವ ಹಠಕ್ಕೆ ಬಿದ್ದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

    ರಾಜ್ಯದ 6,025 ಗ್ರಾಪಂಗಳಲ್ಲಿ ಸುಮಾರು 96 ಸಾವಿರ ಸದಸ್ಯರಿದ್ದಾರೆ. ಜೂನ್​ನಿಂದ ಆಗಸ್ಟ್ ಅಂತ್ಯದವರೆಗೆ ಹಂತ ಹಂತವಾಗಿ ಈ ಗ್ರಾಪಂಗಳ ಅಧಿಕಾರಾವಧಿ ಮುಕ್ತಾಯವಾಗಲಿದೆ. ಇದುವರೆಗೆ ಅವಧಿ ಮುಕ್ತಾಯಕ್ಕೆ ಮುನ್ನವೇ ಚುನಾವಣೆ ನಡೆಸಿ ಸಕಾಲಕ್ಕೆ ಹೊಸ ಸದಸ್ಯರು ಅಧಿಕಾರ ವಹಿಸಿಕೊಳ್ಳುತ್ತಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಡಿಸಿಗೆ ಪತ್ರ ಬರೆದ ಆಯೋಗ:

    ಕರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಿ, ಮೀಸಲಾತಿ ನಿಗದಿಪಡಿಸಿ ಗ್ರಾಪಂಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಲ್ಲ ಡಿಸಿಗಳಿಗೆ ಪತ್ರ ಬರೆದು ಅಭಿಪ್ರಾಯ ಕೋರಿದೆ ಎಂದು ಆರ್.ಪ್ರಸನ್ನಕುಮಾರ್ ತಿಳಿಸಿದರು.

    ಡಿಸಿಗಳು ಯಾವ ಅನಿಸಿಕೆ ವ್ಯಕ್ತಪಡಿಸಲಿದ್ದಾರೆಂಬುದು ಗೊತ್ತಿಲ್ಲ. ಆದರೆ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು. ಅವೈಜ್ಞಾನಿಕವಾಗಿ ನಾಮನಿರ್ದೇಶನ ಮಾಡುವುದು ಸರಿಯಲ್ಲ ಎಂದು ಹೇಳಿದರು. ಜಿಪಂ ಸದಸ್ಯ ಕಲಗೋಡು ರತ್ನಾಕರ್, ಶಿವಮೊಗ್ಗ ತಾಪಂ ಸದಸ್ಯ ಮಂಜುನಾಥ್, ಮಂಡಘಟ್ಟ ಗ್ರಾಪಂ ಅಧ್ಯಕ್ಷ ರಾಮಚಂದ್ರ, ಪ್ರಮುಖರಾದ ಓಂಪ್ರಕಾಶ್ ತೇಲ್ಕರ್, ಶಿವಾನಂದ, ದೇವಿಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

    ಜಿಪಂ ಅಧ್ಯಕ್ಷ ಸ್ಥಾನ ಶೀಘ್ರ ತೀರ್ವನ: ಶಿವಮೊಗ್ಗ ಜಿಪಂ ಅಧ್ಯಕ್ಷರನ್ನು ಬದಲಾಯಿಸುವ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ನಾಯಕರಿಗೆ ವಾಸ್ತವ ಸ್ಥಿತಿ ವಿವರಿಸಿ, ಅವರ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ತಿಳಿಸಿದರು. ಜಿಪಂನಲ್ಲಿ ಅತಂತ್ರ ಸ್ಥಿತಿ ನಿರ್ವಣವಾದ ಕಾರಣ ಬಿಜೆಪಿಯನ್ನು ದೂರವಿಡುವ ಉದ್ದೇಶದಿಂದ ಜೆಡಿಎಸ್​ಗೆ ಬೆಂಬಲ ನೀಡಲಾಯಿತು. 4 ವರ್ಷ ಜೆಡಿಎಸ್​ಗೆ ಅಧ್ಯಕ್ಷ ಸ್ಥಾನ, ಕೊನೆಯ ಒಂದು ವರ್ಷ ಪಕ್ಷೇತರರಾದ ವೇದಾ ವಿಜಯಕುಮಾರ್​ಗೆ ಅಧ್ಯಕ್ಷ ಸ್ಥಾನ ನೀಡುವ ಮಾತುಕತೆ ನಡೆದಿತ್ತು. ಆದರೆ ಅಧ್ಯಕ್ಷರು ರಾಜೀನಾಮೆ ನೀಡದ ಕಾರಣ ಗೊಂದಲ ಉಂಟಾಗಿದೆ ಎಂದರು. ಅಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಅಷ್ಟೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಿಶ್ವಾಸ ನಿಲುವಳಿ ಸೂಚನೆಗೆ ಗೆಲುವು ಪಡೆಯಲು ಬಿಜೆಪಿಯ 6 ಸದಸ್ಯರ ಬೆಂಬಲವೂ ಬೇಕು. ಹೀಗಾಗಿ ಈಗಲೇ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts