More

    ಗ್ರಾಪಂಗಳಲ್ಲಿ ಪತಿ, ಮಕ್ಕಳ ಅಧಿಪತ್ಯ!

    ಬೆಳಗಾವಿ: ಸಮಾನತೆ, ಸಬಲೀಕರಣಕ್ಕಾಗಿ ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಾತಿ ಮೂಲಕ ಕಲ್ಪಿಸಿಕೊಡಲಾಗಿದೆ. ಕೆಲ ಗ್ರಾಪಂಗಳಲ್ಲಿ ಮಹಿಳೆಯರು ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಬಹುತೇಕ ಗ್ರಾಪಂಗಳಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷೆ ಗದ್ದುಗೆ ಏರಿರುವ ಮಹಿಳೆಯರು ನಾಮಕಾವಾಸ್ತೆ ಎನ್ನುವಂತಾಗಿದ್ದು, ಅವರ ಗಂಡ ಅಥವಾ ಮಕ್ಕಳೇ ಅಧಿಕಾರ ಚಲಾಯಿಸುತ್ತಿದ್ದಾರೆ.

    ಜಿಲ್ಲೆಯ 498 ಗ್ರಾಪಂಗಳಲ್ಲಿ ಒಟ್ಟು 8,405 ಸದಸ್ಯರ ಪೈಕಿ 4,429 ಮಹಿಳಾ ಸದಸ್ಯರೇ ಇದ್ದಾರೆ. ಇದರಲ್ಲಿ ಸುಮಾರು 180 ಗ್ರಾಪಂಗಳಲ್ಲಿ ಮಹಿಳಾ ಮತ್ತು ಜಾತಿ ಮೀಸಲು ಅನ್ವಯ ಸದಸ್ಯೆಯರೇ ಗ್ರಾಪಂಗಳ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಬಹುತೇಹ ಗ್ರಾಪಂಗಳಲ್ಲಿ ಅವರ ಗಂಡ, ಮಕ್ಕಳ ಅಧಿಪತ್ಯವೇ ಜೋರಾಗಿದೆ. ಇದರಿಂದಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಂಘರ್ಷಕ್ಕೂ ಕಾರಣವಾಗುತ್ತಿದೆ.

    ಶೇ. 33 ಮೀಸಲಾತಿ: ಪಂಚಾಯತ್‌ರಾಜ್ ಕಾಯ್ದೆಯಡಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಪ್ರತಿ ಜಿಲ್ಲೆಯಲ್ಲೂ ಶೇ. 33 ಮೀಸಲಾತಿ ಮಹಿಳೆಯರಿಗೆ ಕಾಯ್ದಿರಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಆಯ್ಕೆಗೊಂಡಿರುವ ಮಹಿಳಾ ಸದಸ್ಯರಿಗೆ ಮಾಹಿತಿ ಕೊರತೆ, ಹಿಂಜರಿಕೆ ಇನ್ನಿತರ ಕಾರಣಗಳಿಂದ ಗ್ರಾಪಂಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಸದಸ್ಯೆಯರ ಪತಿ ಇಲ್ಲವೇ ಮಕ್ಕಳು, ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿದ್ದಾರೆ. ಇದು ಇನ್ನುಳಿದ ಸದಸ್ಯರ ಆಕ್ರೋಶಕ್ಕೂ ಕಾರಣವಾಗಿದೆ.
    ಮನೆ, ಕೂಲಿ ಕೆಲಸ: ಸವದತ್ತಿ, ರಾಮದುರ್ಗ, ಗೋಕಾಕ, ಮೂಡಲಗಿ, ಬೆಳಗಾವಿ, ಹುಕ್ಕೇರಿ, ಅಥಣಿ, ರಾಯಬಾಗ ತಾಲೂಕು ವ್ಯಾಪ್ತಿಯ ಗ್ರಾಪಂಗಳಲ್ಲಿ ಅಧ್ಯಕ್ಷೆಯರು ಸಾಮಾನ್ಯ ಸಭೆಗೆ ಮಾತ್ರ ಗ್ರಾಪಂಗಳಿಗೆ ಆಗಮಿಸುತ್ತಾರೆ. ಇನ್ನುಳಿದ ದಿನಗಳಲ್ಲಿ ಮನೆ ಕೆಲಸ, ಕೂಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ವಿವಿಧ ವಸತಿ ಯೋಜನೆಯಲ್ಲಿ ಜಿಲ್ಲೆಗೆ 12,450 ಮನೆ ಮಂಜೂರು ಆಗಿದೆ. ಆದರೆ, ಆ ಮನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವೂ ಅಧ್ಯಕ್ಷೆ, ಉಪಾಧ್ಯಕ್ಷೆಯರಿಗೆ ಇಲ್ಲದಂತಾಗಿದೆ.

    ಅಧಿಕಾರಿಗಳಿಗೇ ನಿರ್ದೇಶನ!: ಅಧ್ಯಕ್ಷೆಯ ಅಥವಾ ಉಪಾಧ್ಯಕ್ಷೆಯ ಪತಿ ಎನ್ನುವುದನ್ನು ಬಿಟ್ಟರೆ, ಗ್ರಾಪಂನಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೂ ಇವರೇ ಎಲ್ಲ ಕೆಲಸ, ಕಾರ್ಯಗಳನ್ನೂ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳ ಮೇಲೂ ಪ್ರಭಾವ ಬೀರುತ್ತಿರುವುದಷ್ಟೇ ಅಲ್ಲದೆ, ಅಧಿಕಾರಿಗಳಿಗೇ ನಿರ್ದೇಶನ ನೀಡುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ತಮ್ಮ ಹಿಂಬಾಲಕರ ಮೂಲಕ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ನಡೆಸುತ್ತಿರುವುದೂ ಸಾಮಾನ್ಯ ಎಂಬಂತಾಗಿದೆ ಎಂದು ಜಿಪಂ, ತಾಪಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಗ್ರಾಪಂ ನಿಧಿ-2 ಖಜಾನೆ ಖಾಲಿ!
    ಗ್ರಾಪಂಗಳಲ್ಲಿ ಕಂದಾಯ, ನೀರು ಸೇರಿದಂತೆ ವಿವಿಧ ಆಸ್ತಿ ಮೂಲಗಳಿಂದ ಗ್ರಾಪಂಗಳಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ, ನಿಧಿ-2ಕ್ಕೆ ಜಮಾ ಆಗುತ್ತದೆ. ಈ ತೆರಿಗೆ ಹಣವನ್ನು ಗ್ರಾಪಂನಲ್ಲಿ ಸಿಬ್ಬಂದಿ ವೇತನ, ಕಚೇರಿ ಖರ್ಚು-ವೆಚ್ಚ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ, ಗ್ರಾಪಂಗಳಲ್ಲಿ ಸದಸ್ಯೆಯರ ಪತಿ, ಮಕ್ಕಳು ಸೇರಿಕೊಂಡು ಚರಂಡಿ ಸ್ವಚ್ಛತೆ ಹೆಸರಿನಲ್ಲಿ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಪಂಗಳ ಮಾಜಿ ಸದಸ್ಯರಾದ ಭೀಮಶಿ ಅರಕೇರಿ, ರಾಹುಲ ಮೇತ್ರಿ ಇತರರು ದೂರಿದ್ದಾರೆ.

    ಗ್ರಾಪಂಗಳಲ್ಲಿ ಸದಸ್ಯೆಯರ ಬದಲಾಗಿ ಅವರ ಕುಟುಂಬದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು.
    | ಎಚ್.ವಿ.ದರ್ಶನ, ಜಿಪಂ ಸಿಇಒ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts