More

    ಗೌತಮಪುರದಲ್ಲಿ ಹಗಲುದುರ್ಗಿ ಉತ್ಸವ; ಹಸು, ಎತ್ತುಗಳಿಗೆ ಉರುಸಲು ಎರಚುವ ಸಂಪ್ರದಾಯ; ರೋಗಗಳಿಂದ ಕಾಪಾಡಲು ಗೋಕಲ್ಲಿಗೆ ಪೂಜೆ

    ಆನಂದಪುರ: ದೀಪಾವಳಿ ಹಬ್ಬದ ಬಲಿಪಾಡ್ಯಮಿ ಆಚರಣೆಯನ್ನು ಒಂದೊಂದು ಕಡೆ ಒಂದೊಂದು ರೀತಿ ಆಚರಿಸಲಾಗುತ್ತದೆ. ಕೆಲವರು ಗೋಪೂಜೆ ಮಾಡಿದರೆ, ಕೊಟ್ಟಿಗೆ ಬಳಿ ಬಲೀಂದ್ರನನ್ನು ಇಟ್ಟು ಪೂಜಿಸುತ್ತಾರೆ. ಆದರೆ ಗೌತಮಪುರದಲ್ಲಿ ವಿಶಿಷ್ಟ ಆಚರಣೆಯೊಂದು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ.
    ಬಲಿಪಾಡ್ಯಮಿ ಹಬ್ಬದ ದಿನ ಬೆಳಗ್ಗೆ ಗೋಪೂಜೆ ಮಾಡಿ ಹಸುಗಳನ್ನು ಮೇವಿಗೆ ಕಳುಹಿಸಿ ಸಂಜೆ ಮನೆಗೆ ವಾಪಸ್ ಬರುವಾಗ ಉರುಸಲು ಪ್ರೋಕ್ಷಣೆ ಮಾಡಿ ಹಗಲುದುರ್ಗಿ ಉತ್ಸವ ನಡೆಸುವ ವಿಶಿಷ್ಟ ಪದ್ಧತಿಯಿದೆ. ಇದರ ವೀಕ್ಷಣೆಗೆ ನೂರಾರು ಜನ ಸೇರುತ್ತಾರೆ.
    ಅನ್ನದಲ್ಲಿ ಹಂದಿಯ ರಕ್ತವನ್ನು ಮಿಶ್ರಣ ಮಾಡಿ ಜಾನುವಾರುಗಳಿಗೆ ಪ್ರೋಕ್ಷಣೆ ಮಾಡಲಾಗುತ್ತದೆ. ಇದುವೇ ಹಗಲುದುರ್ಗಿ ಉತ್ಸವ. ವರ್ಷವಿಡೀ ಜಾನುವಾರುಗಳ ರಕ್ಷಣೆಗೆ ದೇವರಲ್ಲಿ ಪ್ರಾರ್ಥಿಸುವ ಸಂಪ್ರದಾಯ.
    ಗೌತಮಪುರ-ತ್ಯಾಗರ್ತಿ ಸಂಪರ್ಕ ರಸ್ತೆಯ ಸ್ವಲ್ಪ ದೂರದಲ್ಲಿ ಹಗಲುದುರ್ಗಿ ಮತ್ತು ಮಾರಿಕಲ್ಲು ಭೂತರಾಯನ ನೆಲೆಯಿದೆ. ಈ ಸ್ಥಳದಲ್ಲಿ ಮಾರಿಕಲ್ಲು ಭೂತರಾಯ ದೇವರ ಶಿಲಾ ಕಲ್ಲುಗಳಿವೆ. ಹಗಲುದುರ್ಗಿ ಶಿಲೆಯದಾಗಿದ್ದು ಸುಮಾರು 8 ಅಡಿ ಎತ್ತರವಾಗಿದೆ. ಈ ದೇವರನ್ನು ಗೋಕಲ್ಲು ಎಂದೂ ಸಹ ಕರೆಯುತ್ತಾರೆ.
    ಉತ್ಸವದ ಆರಂಭದಲ್ಲಿ ಗೋಕಲ್ಲಿನ ದೇವರಿಗೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ನೈವೇದ್ಯ ಮಾಡಲಾಗುತ್ತದೆ. ಮಾರಿಕಲ್ಲು ಭೂತರಾಯ ವಿಗ್ರಹ 5 ಅಡಿ ಎತ್ತರದ ಜಂಬಿಟ್ಟಿಗೆಯ ಕಲ್ಲಿನದಾಗಿದೆ. ನರಕ ಚತುರ್ದಶಿಯಂದು ಈ ಶಕ್ತಿ ಸ್ಥಳದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ. ಬಲಿಪಾಡ್ಯಮಿ ದಿನ ಬೆಳಗ್ಗೆ ದೇವರ ಕಲ್ಲುಗಳನ್ನು ತೊಳೆದು, ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಬಲಿಪಾಡ್ಯಮಿ ದಿನ ಸಂಜೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವರ ಕಟ್ಟೆ ಮೇಲೆ ನೆಟ್ಟಿರುವ ತ್ರಿಶೂಲಕ್ಕೆ ಕೋಳಿಯನ್ನು ಚುಚ್ಚಿ ಬಲಿ ನೀಡಲಾಗುತ್ತದೆ. ದೇವರ ಎದುರು ಹಂದಿಯ ರಕ್ತವನ್ನು ತೆಗೆದು ಅನ್ನದೊಂದಿಗೆ ಬೆರೆಸಿ ಉರುಸಲು ಸಿದ್ಧಮಾಡಲಾಗುತ್ತದೆ. ಈ ಬಲಿ ಪೂಜೆ ನಡೆಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಆಗಮಿಸಿ ಹಣ್ಣು-ಕಾಯಿ ನೈವೇದ್ಯ ಮಾಡುತ್ತಾರೆ.
    ಹಸು, ಎತ್ತುಗಳಿಗೆ ಪ್ರೋಕ್ಷಣೆ: ಮೇವಿಗೆ ಬಿಟ್ಟ ಗ್ರಾಮದ ಎಲ್ಲ ಹಸು, ಕರು, ಎತ್ತುಗಳು ಸಂಜೆ ವೇಳೆಗೆ ದೇಗುಲದ ರಸ್ತೆಯಲ್ಲಿ ಬರುವಂತೆ ಮಾಡಲಾಗುತ್ತದೆ. ಎಮ್ಮೆ, ಕೋಣಗಳಿಗೆ ಪ್ರವೇಶ ನೀಡುವುದಿಲ್ಲ. ಸಾಲಾಗಿ ಸಾಗಿ ಬಂದ ಹಸು, ಕರು, ಎತ್ತುಗಳಿಗೆ ದೇವರ ನೈವೇದ್ಯದ ಉರುಸಲನ್ನು (ಹಗಲುದುರ್ಗಿ ಪ್ರಸಾದ) ಎರಚಲಾಗುತ್ತದೆ. ಹೀಗೆ ಮಾಡುವುದರಿಂದ ಜಾನುವಾರುಗಳು ತೊಂದರೆ ಮತ್ತು ರೋಗಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗೆ ಉರುಸಲು ಎರಚುವಾಗ ಡೋಲು ಬಾರಿಸಿ, ಪಟಾಕಿ ಸಿಡಿಸಿ ಜಾನುವಾರುಗಳನ್ನು ಜೋರಾಗಿ ಓಡಿಸಲಾಗುತ್ತದೆ. ಓಡುತ್ತ ಸಾಗಿ ಬಂದು ಬಹುಬೇಗ ಕೊಟ್ಟಿಗೆಗೆ ತಲುಪಿದರೆ ಆ ಕುಟುಂಬಸ್ಥರಿಗೆ ಒಳಿತಾಗುತ್ತದೆ. ಉರುಸಲು ಎರಚುವಾಗ ಮನುಷ್ಯರಿಗೆ ಸೋಂಕಿದರೆ ಕೆಡುಕಾಗುತ್ತದೆ ಎಂಬ ನಂಬಿಕೆಯಿದ್ದು, ಜನರಿಗೆ ತಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಈ ಹಗಲುದುರ್ಗಿ ಉತ್ಸವ ವೀಕ್ಷಿಸಲು ಗ್ರಾಮದವರಲ್ಲದೆ ನೆರೆಹೊರೆಯ ಊರಿನವರೂ ಆಗಮಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts