More

    ಗೋಕುಲದಲ್ಲಿ ಗ್ರಾಮದೇವಿ ಜಾತ್ರೆ ಆರಂಭ, ಧಾರ್ವಿುಕ ಕಾರ್ಯಕ್ರಮ 27ರಿಂದ

    ಹುಬ್ಬಳ್ಳಿ: ಇಲ್ಲಿಯ ಗೋಕುಲ ಗ್ರಾಮದೇವತೆ ಆದಿಶಕ್ತಿ ದ್ಯಾಮವ್ವದೇವಿ, ದುರ್ಗಾದೇವಿ ಮತ್ತು ಮಲ್ಲೆಮ್ಮ ದೇವಿಯರ ಜಾತ್ರೆ ಅಂಗವಾಗಿ ಗ್ರಾಮದೇವಿಯರ ನೂತನ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಮಾ. 23ರಿಂದ 31ರ ವರೆಗೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಮಹದೇವಪ್ಪ ಪೂಜಾರ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿತ್ಯ ರಾತ್ರಿ 7ಕ್ಕೆ ಬೀರವಳ್ಳಿಯ ನಂದಾತಾಯಿ ಮಾತಾಜೀ ಪ್ರವಚನ ನೀಡಲಿದ್ದಾರೆ. ಧಾರ್ವಿುಕ ಕಾರ್ಯಕ್ರಮ ಹಾಗೂ ಜಾತ್ರೆ ಅಂಗವಾಗಿ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಸೇವಾ ಕಾರ್ಯ ಕೈಗೊಂಡಿದ್ದಾರೆ. ಮಾ. 31ರ ವರೆಗೆ ನಿತ್ಯ ಅನ್ನದಾಸೋಹ ನಡೆಯಲಿದೆ. ಉತ್ಸವ ಮುಗಿಯವರೆಗೂ ಗ್ರಾಮದಲ್ಲಿ ಯಾರೂ ಪಾದರಕ್ಷೆ ಬಳಸುವಂತಿಲ್ಲ. ಮನೆಯಲ್ಲಿ ಒಲೆ ಹೊತ್ತಿಸುವಂತಿಲ್ಲ ಎಂದರು.

    ಪ್ರತಿ 12 ವರ್ಷಕ್ಕೊಮ್ಮೆ ಗ್ರಾಮದೇವಿ ಜಾತ್ರೆ ನಡೆಯುತ್ತ ಬಂದಿದೆ. ಈ ಬಾರಿ ಮೂರ್ತಿಗಳನ್ನು ಹೊಸದಾಗಿ ನಿರ್ವಿುಸಲು ಗ್ರಾಮಸ್ಥರು ನಿರ್ಧರಿಸಿದರು. ಶಿಗ್ಗಾಂವಿ ತಾಲೂಕಿನ ಬೆಳಗಲಿಯ ನಾಗಲಿಂಗ ಬಡಿಗೇರ ಅವರು ಮೂರ್ತಿ ತಯಾರಿಸಿ ಕೊಟ್ಟಿದ್ದಾರೆ. ಸುಮಾರು 4.60 ಲಕ್ಷ ರೂ. ವೆಚ್ಚದಲ್ಲಿ ಮೂರ್ತಿ ಸಿದ್ಧಪಡಿಸಲಾಗಿದೆ. ಉತ್ಸವಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ ಎಂದರು.

    ಗ್ರಾಮದಲ್ಲಿ ಮಾ. 27ರಂದು ರಾತ್ರಿ 8ಕ್ಕೆ ಉತ್ಸವ ಮೂರ್ತಿಗಳ ಪುರಪ್ರವೇಶವು ವಾದ್ಯ ಹಾಗೂ ಕುಂಭಮೇಳದೊಂದಿಗೆ ನಡೆಯಲಿದೆ. ಇನ್ಸ್​ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಮೆರವಣಿಗೆ ಉದ್ಘಾಟಿಸುವರು. ರಾತ್ರಿ 10ಕ್ಕೆ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.

    ಮಾ. 28ರಂದು ಬೆಳಗ್ಗೆ ಹೋಮ, ಹವನ, ಪೂಜೆ, 29ರಂದು ಮುತೆôದೆಯರಿಂದ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿವೆ. ಮಾ. 30ರಂದು ಭಂಡಾರ ಜಾತ್ರೆ, ಜಂಬೂ ಸವಾರಿ ಹಾಗೂ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ ಎಂದರು.

    ಮಾ. 31ರಂದು ಬೆಳಗ್ಗೆ 9ಕ್ಕೆ ನವಗ್ರಹ ಪೂಜೆ, ದೇವತೆಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ, ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ಧ ಸ್ವಾಮೀಜಿ, ಶ್ರೀ ಚಿದ್ರೂಪಾನಂದ ಸರಸ್ವತಿ, ಶ್ರೀ ಮೌನೇಶ್ವರ ಸ್ವಾಮೀಜಿ ಇತರರು ಭಾಗವಹಿಸುವರು ಎಂದರು. ಬೆಳಗ್ಗೆ 11ಕ್ಕೆ ಧರ್ಮಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ದೀಪಕ ಚಿಂಚೋರೆ, ಶಂಕರ ಹೊಸಮನಿ ಇತರರು ಪಾಲ್ಗೊಳ್ಳುವರು ಎಂದರು. ಹಿರಿಯರಾದ ಬಾಲಪ್ಪ ಬದಾಮಿ, ಮಾರುತಿ ಉಣಕಲ್ಲ, ನಿಂಗಪ್ಪ ಮ್ಯಾಗೇರಿ, ಮಡಿವಾಳಪ್ಪ ನಾಯ್ಕರ, ಈಶ್ವರಪ್ಪ ಜಾಧವ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts