More

    ಗೋಲ್ಮಾಲ್ ತನಿಖೆಗೆ ಮುಂದಾಗದ ಜಿಲ್ಲಾಡಳಿತ

    ಹಾನಗಲ್ಲ: ಸರ್ಕಾರ ರೈತರಿಗೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ನೀಡುವ ಪರಿಹಾರವನ್ನು ಅಧಿಕಾರಿಗಳು ಸರ್ಕಾರ ಹಾಗೂ ರೈತರ ಕಣ್ಣಿಗೆ ಮಣ್ಣೆರಚಿ ಕೋಟ್ಯಂತರ ರೂಪಾಯಿ ಲೂಟಿಗೈಯುತ್ತಿದ್ದರೂ ಇಂಥ ಗಂಭೀರ ಪ್ರಮಾದ ಕಂದಾಯ ಇಲಾಖೆಗೆ ಗೊತ್ತಾಗಲಿಲ್ಲವೇ ? ಅಥವಾ ಹಿರಿಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ.

    ‘ವಿಜಯವಾಣಿ’ ರೈತ ಕಳಕಳಿಯ ಹಿನ್ನೆಲೆಯಲ್ಲಿ ಪರಿಹಾರ ಅಕ್ರಮದ ಕುರಿತು ಪ್ರಕಟಿಸಿದ ಸರಣಿ ಲೇಖನದಿಂದ ಎಚ್ಚೆತ್ತಿರುವ ರೈತರು, ತಮಗೆ ಬರಬೇಕಾದ ಪರಿಹಾರ ಹಣದ ಕುರಿತು ವಿಚಾರಿಸುತ್ತಿದ್ದಾರೆ. ತಮ್ಮ ಜಮೀನಿನ ಪರಿಹಾರ ಯಾರು ಲಪಟಾಯಿಸುತ್ತಿದ್ದಾರೆ ಎಂದು ಮತ್ತಷ್ಟು ಅವ್ಯವಹಾರಗಳ ಮಾಹಿತಿ ಒದಗಿಸುತ್ತಿದ್ದಾರೆ.

    ಯಾರ ಮೇಲೂ ಕ್ರಮವಿಲ್ಲ: ಕಳೆದ ವಾರವೇ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಅಧಿಕಾರಿಗಳು ಹಾನಗಲ್ಲಿಗೆ ಭೇಟಿ ನೀಡಿ ಪರಿಹಾರ ಅಕ್ರಮ, ಅವ್ಯವಹಾರದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ‘ವಿಜಯವಾಣಿ’ ಇದರ ಎಲ್ಲ ಮಗ್ಗುಲಗಳನ್ನೂ ಓದುಗರೆದುರು ತೆರೆದಿಟ್ಟಿದೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸ್ಪಷ್ಟವಾಗುತ್ತಿದೆ. ಆದಾಗ್ಯೂ ಸರ್ಕಾರ, ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳದಿರುವುದು ಸಂಶಯ ಮೂಡಿಸಿದೆ.

    ಕೃಷಿ ಇಲಾಖೆ ಅಧಿಕಾರಿಗಳೂ ಇದರ ಕುರಿತು ಕ್ರಮ ಕೈಗೊಂಡಿಲ್ಲ. ಹಾಗಾದರೆ, ಈ ಸಮಸ್ಯೆಗೆ ಪರಿಹಾರವೇನು. ಅಕ್ರಮದಲ್ಲಿ ಭಾಗಿಯಾದವರು ಅಷ್ಟೊಂದು ಪ್ರಭಾವಿಗಳೇ. ಇಲ್ಲದಿದ್ದರೆ ಕ್ರಮ ಕೈಗೊಳ್ಳಲು ಸಮಸ್ಯೆಯೇನು ಎಂದು ಪ್ರಶ್ನಿಸುತ್ತಿರುವ ರೈತರು, ಕೂಡಲೆ ಮೇಲಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಇನ್ನಷ್ಟು ಪ್ರಕರಣ ಬೆಳಕಿಗೆ: ಈ ಪ್ರಕರಣದ ರೂವಾರಿ ಗ್ರಾಮ ಸಹಾಯಕನೋರ್ವ ತನ್ನ ಅಡಕೆ ತೋಟಕ್ಕೂ ಬೆಳೆ ಹಾನಿ ಪರಿಹಾರ ಹಾಕಿಸಿಕೊಂಡಿದ್ದಾನೆ. ತನ್ನ ರಿ.ಸ.ನಂ.: 37/5 ರಲ್ಲಿರುವ ಅಡಕೆ ಬೆಳೆ ಬದಲಿಗೆ ಮೆಕ್ಕೆಜೋಳ ಎಂದು ದಾಖಲಿಸಿ 15,744 ರೂ. ಪರಿಹಾರ ಪಡೆದಿದ್ದಾನೆ. ಅಲ್ಲದೆ, ಪಕ್ಕದ ದ್ಯಾಮನಕೊಪ್ಪ ಗ್ರಾಮದ ಬಶೀರಹ್ಮದ್ ಮರ್ದಾನಸಾಬ ಹಾನಗಲ್ಲ ಅವರ ರಿ.ಸ.ನಂ.: 45/1 (2.22 ಎಕರೆ) ಹೊಲದ ಪರಿಹಾರ 23,029 ರೂ., ಮಾವಕೊಪ್ಪ ಗ್ರಾಮದ ಗಂಗವ್ವ ಶಾಂತಪ್ಪ ಕುಮ್ಮೂರ ಅವರ ರಿ.ಸ.ನಂ.: 8/2(1.27 ಎಕರೆ) ಹೊಲದ 5879 ರೂ. ಅನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಇದೇ ಗ್ರಾಮದ ಕೃಷ್ಣಪ್ಪ ಲಮಾಣಿ ಎಂಬುವರ ರಿ.ಸ.ನಂ.: 15/2(4.15 ಎಕರೆ) ಹೊಲದ ಪರಿಹಾರ 23,263 ರೂ. ಅನ್ನು ತನ್ನ ಸಹೋದರಿಯ ಪತಿ ಹಸನಾಬಾದಿ ಗ್ರಾಮದ ನಕುಲ್ ಭರಮಪ್ಪ ಹನುಮನಹಳ್ಳಿ ಅವರ ಖಾತೆಗೆ ಹಾಕಿಸಿದ್ದಾನೆ. ಇಂಥ ಹಲವು ಆರೋಪಗಳನ್ನು ಈತನ ಮೇಲೆ ಪರಿಹಾರ ವಂಚಿತ ರೈತರು ಮಾಡಿದ್ದಾರೆ. ದ್ಯಾಮನಕೊಪ್ಪ ಗ್ರಾಮದ ಚನಬಸಪ್ಪ ರಂಗಾಪುರ ಅವರ ರಿ.ಸ.ನಂ.: 7/5ರ (3.37 ಎಕರೆ ) 26,374 ರೂ. ಕಲ್ಲಾಪುರ ಗ್ರಾ.ಪಂ. ತೆರಿಗೆ ವಸೂಲಿಗಾರನ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

    ಅಕ್ರಮವಾಗಿ ಬೇರೆಯವರ ಬೆಳೆ ಹಾನಿ, ಮನೆ ಹಾನಿ ಪರಿಹಾರ ಪಡೆದವರ ಮೇಲೆ ಇಲಾಖೆಯ ಮೇಲಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಹಕಾರ ನೀಡಿದ ಮೇಲಧಿಕಾರಿಗಳ ಮೇಲೂ ಕ್ರಮ ಜರುಗಿಸುವ ಅಗತ್ಯವಿದೆ. ಅವ್ಯವಹಾರ ಮಾಡುವವರಿಗೆ ಪಾಠವಾಗಬೇಕು. ಭ್ರಷ್ಟ ವ್ಯವಸ್ಥೆ ತೊಡೆದು ಹಾಕುವಲ್ಲಿ ಈಗಾಗಲೇ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಅಂಥ ಸಿಬ್ಬಂದಿ ವಜಾಗೊಳಿಸುವಂತೆ ಹೇಳಿರುವುದು ಸ್ವಾಗತಾರ್ಹ. ಹಾವೇರಿ ಜಿಲ್ಲೆಯಲ್ಲಾಗಿರುವ ಘಟನೆಯ ಬಗ್ಗೆ ವಿಳಂಬವಿಲ್ಲದೇ ಸರಿಯಾದ ಕ್ರಮ ಕೈಗೊಳ್ಳುವ ಅವಶ್ಯವಿದೆ.
    | ಸಿ.ಎಂ. ಉದಾಸಿ, ಶಾಸಕ ಹಾನಗಲ್ಲ


    ನೆರೆ ಪರಿಹಾರ ಅಕ್ರಮದಲ್ಲಿ ಕಂದಾಯ ಇಲಾಖೆ ಮೇಲಧಿಕಾರಿಗಳೂ ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತಿದೆ. ಈ ಕುರಿತು ರೈತ ಸಂಘ ಜಿಲ್ಲಾಧಿಕಾರಿ ಗಮನ ಸೆಳೆದು 15 ದಿನಗಳಾಗಿವೆ. ರೈತರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಇದೆಲ್ಲ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೂ ಗೊತ್ತಿತ್ತು. ನ್ಯಾಯಯುತವಾಗಿ ಫಲಾನುಭವಿಗಳಿಗೆ ಹಣ ತಲುಪಿಸುವ ಜವಾಬ್ದಾರಿ ಜಿಲ್ಲಾಡಳಿತದ್ದು, ಅವರೇ ತಪ್ಪು ಮಾಡಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮರೆತಿದ್ದಾರೆ. ‘ವಿಜಯವಾಣಿ’ ವರದಿ ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಈಗಲೂ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘಟನೆ ಸರ್ಕಾರದ ವಿರುದ್ಧವೇ ಹೋರಾಟಕ್ಕಿಳಿಯಬೇಕಾಗುತ್ತದೆ.
    | ರಾಮಣ್ಣ ಕೆಂಚಳ್ಳೇರ, ರೈತ ಸಂಘದ ಜಿಲ್ಲಾಧ್ಯಕ್ಷ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts