More

    ಗೋಕರ್ಣದ ಧ್ರುವತಾರೆ ಯಂಗ್​ಸ್ಟಾರ್ ಕ್ಲಬ್

    ವಿಜಯವಾಣಿ ಸುದ್ದಿಜಾಲ ಗೋಕರ್ಣ: ದಾರಿ ಕಾಣದವರಿಗೆ ಧ್ರುವತಾರೆ ದಿಕ್ಕು ತೋರಿಸುತ್ತದೆ. ಧ್ರುವತಾರೆಯ ಮೂಲಕ ಉಳಿದ ದಿಕ್ಕನ್ನು ಗುರುತಿಸಬಹುದು. ಅಂತೆಯೇ ಪ್ರಸಿದ್ಧ ಪುರಾತನ ಯಾತ್ರಾ ಸ್ಥಳ ಮತ್ತು ಪ್ರವಾಸಿ ಕೇಂದ್ರ ಗೋಕರ್ಣದ ಅಭಿವೃದ್ಧಿಗೆ ಇಲ್ಲಿನ ಯಂಗ್​ಸ್ಟಾರ್ ಕ್ಲಬ್ ದಿಕ್ಕಾಗಿದೆ. ನಲವತ್ತಕ್ಕೂ ಹೆಚ್ಚಿನ ವರ್ಷದಿಂದ ಈ ಕ್ಲಬ್ ಕೈಗೊಳ್ಳುತ್ತ ಬಂದ ಸಾರ್ವಜನಿಕ ಕೆಲಸ ಇದಕ್ಕೆ ಉದಾಹರಣೆ.

    ಬೇಸಿಗೆಯ ವೇಳೆ ತೀವ್ರ ಕುಡಿಯುವ ನೀರಿನ ಅಭಾವದಿಂದ ತತ್ತರಿಸುವ ಗೋಕರ್ಣದ ರಥಬೀದಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಿ ಮಾದರಿಯಾಗಿದೆ. ಮಾ. 1ರಂದು ಬೆಳಗ್ಗೆ 10 ಗಂಟೆಗೆ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಲಿದ್ದಾರೆ. ಶಾಸಕ ದಿನಕರ ಶೆಟ್ಟಿ, ಜಿಪಂ ಸದಸ್ಯೆ ಗಾಯತ್ರಿ ಗೌಡ, ತಾಪಂ ಸದಸ್ಯ ಮಹೇಶ ಶೆಟ್ಟಿ ಮತ್ತು ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮಿ ಭಡ್ತಿ ಭಾಗವಹಿಸುವರು.

    ಸಂಕಷ್ಟಹರ ಯೋಜನೆ: 1978ರಲ್ಲಿ ಸಾರ್ವಜನಿಕ ಗಣೇಶೋತ್ಸವದ ಆಚರಣೆಗಾಗಿ ಹುಟ್ಟಿಕೊಂಡ ಯಂಗ್​ಸ್ಟಾರ್ ಕ್ಲಬ್ ಅದರಿಂದ ಸಂಗ್ರಹವಾದ ಹಣವನ್ನು ಬ್ಯಾಂಕ್​ನಲ್ಲಿ ಠೇವಣಿ ಇಟ್ಟು ಹಣ ಪೇರಿಸುವ ಕೆಲಸ ಮಾಡಲಿಲ್ಲ. ಬದಲಿಗೆ ಆ ಧನವನ್ನು ಜನೋಪಯೋಗಿ ಕಾರ್ಯಕ್ಕೆ ವ್ಯಯಿಸುತ್ತಾ ಬಂದು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿಯೇ ಸಂಘ ಸಂಕಷ್ಟಹರ ಯೋಜನೆ ಪ್ರಾರಂಭಿಸಿತು. ಈ ಯೋಜನೆ ಮೂಲಕ ರಥಬೀದಿಯಲ್ಲಿನ ಕಲ್ಮಷ ನೀರು ಹೊರಸಾಗಿಸಲು ಒಳಚರಂಡಿಗೆ ಎರಡು ಲಕ್ಷ ರೂ. ಕೊಡುಗೆ ನೀಡಿ ಅಂದಿನ ಕೇಂದ್ರ ಸರ್ಕಾರದಿಂದ 10 ಲಕ್ಷ ರೂ. ಯೋಜನೆ ಮಂಜೂರಾಗಲು 1992ರಲ್ಲಿ ಸಹಾಯ ನೀಡಿತು. ವೇದ ಪಾಠಶಾಲೆ ಸೇರಿ ವಿವಿಧ ಶಾಲೆಗಳ ಅಗತ್ಯಕ್ಕೆ ನಿರತವಾಗಿ ಸಹಾಯ ಹಸ್ತ ನೀಡುತ್ತ ಬಂದಿದೆ. ಗೋಕರ್ಣದ ಪಂಚಾಯಿತಿ ತ್ಯಾಜ್ಯ ಸಾಗಣೆ ವಾಹನ ಖರೀದಿಗೆ ಮೊದಲ ನೆರವು ನೀಡಿದ್ದು ಈ ಕ್ಲಬ್. ಜೊತೆಗೆ ಕಳೆದ ವರ್ಷ ಪಂಚಾಯಿತಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲು ಮುಂದಾದಾಗಲೂ ಅದಕ್ಕೆ ಕೈಜೋಡಿಸುವ ಕಾರ್ಯ ಕ್ಲಬ್​ನಿಂದ ಆಯಿತು.

    ಜಲಮೂಲ ವೃದ್ಧಿ: ಇಲ್ಲಿನ ಪುರಾಣ ಪ್ರಸಿದ್ಧ ನಾಗತೀರ್ಥವನ್ನು ನವೀಕರಿಸಲು ದೇಣಿಗೆ ನೀಡಿದ ಕ್ಲಬ್ ಪೂರ್ಣವಾಗಿ ಹೂಳಿನಿಂದ ಮುಚ್ಚಿ ಜನರ ಉಪಯೋಗದಿಂದ ದೂರವಾಗಿದ್ದ ಗಾಯತ್ರಿ ತೀರ್ಥವನ್ನು ಜೀಣೋದ್ಧಾರ ಮಾಡಿದ ಕೀರ್ತಿ ಇದರದಾಗಿದೆ. ಎರಡು ವರ್ಷದ ಅವಿರತ ಶ್ರಮದಿಂದ 30 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಈ ತೀರ್ಥದಲ್ಲಿ ಮತ್ತೆ ನೀರುಕ್ಕುವಂತೆ ಮಾಡಿ ಜಲಮೂಲ ವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿತು. ಈಗ ಈ ತೀರ್ಥದ ಪರಿಸರದಲಿ ಗಾಯತ್ರಿ ಮಾತೆಯ ಮಂದಿರ ನಿರ್ವಿುಸಲು ಮಾ. 1ರಂದು ಭೂಮಿಪೂಜೆಗೆ ಅದು ಸಿದ್ಧತೆ ನಡೆಸಿದೆ.

    ಪ್ರತಿ ವರ್ಷ ಗಣೇಶೋತ್ಸವದ ಹಣದ ಜೊತೆಗೆ ಸಾರ್ವಜನಿಕ ವಂತಿಗೆ ಮೂಲಕ ನಾನಾ ಸಾಮಾಜಿಕ ಕಾರ್ಯ ಮಾಡುತ್ತ ಬಂದ ಯಂಗ್​ಸ್ಟಾರ್ ಕ್ಲಬ್ ತನ್ನದೇ ಆದ ವಿಶಿಷ್ಟ ಮತ್ತು ಸರ್ವ ವಿಭಿನ್ನ ಕೆಲಸಗಳಿಂದ ಗೋಕರ್ಣಕ್ಕೆ ಮಾತ್ರವಲ್ಲದೆ ಎಲ್ಲ ಯುವಕ ಸಂಘಗಳಿಗೆ ಒಂದು ಮಾದರಿ ಎನ್ನಬಹುದಾಗಿದೆ.

    ಯಂಗ್ ಸ್ಟಾರ್ ಕ್ಲಬ್ ಮಾಡುತ್ತಾ ಬಂದಿರುವ ಸಾರ್ವಜನಿಕ ಕಾರ್ಯ ನಿಜಕ್ಕೂ ಮಾದರಿಯಾಗಿದೆ. ಈ ಕ್ಲಬ್​ನಿಂದಾಗಿ ಪ್ರವಾಸಿಗರಿಗೆ ಶುದ್ಧ ನೀರು ಸಿಗುವಂತಾಗಿದೆ. ತ್ಯಾಜ್ಯಗಳ ಭಂಡಾರವಾಗಿದ್ದ ಪುರಾಣ ಖ್ಯಾತಿಯ ಗಾಯತ್ರಿ ತೀರ್ಥ ಮತ್ತೆ ಜಿನುಗುವಂತಾಗಿದೆ. | ಹ್ಯಾರಿ ಪೆರೋನಿಯಸ್ ಸ್ವೀಡನ್ನಿನ ವಿಶ್ವ ಪ್ರಸಿದ್ಧ ಫೋಟೋಗ್ರಾಫರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts