More

    ಗೆದ್ದಿದ್ದು 20, ಮತದಾನವಾಗಿದ್ದು 21

    ಬೇತಮಂಗಲ: ಕ್ಯಾಸಂಬಳ್ಳಿ ಗ್ರಾಪಂನ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ 20 ಸದಸ್ಯರಿದ್ದರೂ 21 ಮತ ಚಲಾವಣೆ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇದರಿಂದ ಕೆರಳಿದ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಮಾಜಿ ಶಾಸಕ ವೈ.ಸಂಪಂಗಿ ನೇತೃತ್ವದಲ್ಲಿ ಚುನಾವಣಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾದ ಚುನಾವಣಾಧಿಕಾರಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚುನಾವಣೆ ಮುಂದೂಡಲಾಗಿದೆ.

    ಪರಿಶಿಷ್ಟ ಜಾತಿ ಅಧ್ಯಕ್ಷ ಮತ್ತು ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷೆಗಾಗಿ ಮೀಸಲು ನಿಗದಿಪಡಿಸಿದ್ದು, ಸೋಮವಾರ ಮತದಾನ ನಿಗದಿಯಾಗಿತ್ತು. ಅದರಂತೆ ಕಾಂಗ್ರೆಸ್ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರಸ್ವತಮ್ಮ ನಾಮಪತ್ರ ಸಲ್ಲಿಸಿದ್ದರು.

    ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅಂಜುಲಮ್ಮ ನಾಮಪತ್ರ ಸಲ್ಲಿಸಿದ್ದರು. 12 ಗಂಟೆಗೆ ಪ್ರಕ್ರಿಯೆ ಮುಗಿದ ನಂತರ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಲಾಯಿತು. ನಂತರ 2 ಗಂಟೆಗೆ ಮತ ಎಣಿಕೆ ಪ್ರಾರಂಭವಾದಾಗ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 21 ಮತಗಳು ಮತ್ತು ಉಪಾಧ್ಯಕ್ಷರಿಗೆ 19 ಮತ ಚಲಾವಣೆಯಾಗಿದೆ. ಈ ಬಗ್ಗೆ ಅನುಮಾನಗೊಂಡ ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸದಸ್ಯರು 20 ಇದ್ದರೂ 21 ಮತಪತ್ರ ಹೇಗೆ ಬಂತು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸಹಾಯ ಮಾಡಲು ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಚುನಾವಣಾಧಿಕಾರಿ ವಿರುದ್ಧ ಪ್ರತಿಭಟನೆಗೆ ಮುಂದಾದರು.
    ಈ ಮಧ್ಯೆ ತೀವ್ರ ಒತ್ತಡಕ್ಕೆ ಒಳಗಾದ ಚುನಾವಣಾಧಿಕಾರಿ ದಿನೇಶ್ ಪ್ರಜ್ಞೆ ತಪ್ಪಿ ಕಚೇರಿಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಪೊಲೀಸ್ ವಾಹನದಲ್ಲಿ ದಿನೇಶ್ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

    ಕಾಂಗ್ರೆಸ್‌ನ ಕೈಗೊಂಬೆಯಾಗಿ ಅಧಿಕಾರಿಗಳು ಕುತಂತ್ರ ನಡೆಸಿದ್ದಾರೆ. ಇದರ ಜತೆಗೆ ನಮ್ಮ ಪಕ್ಷದವರೇ ಕೆಲವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಲಾಬಿ ನಡೆಸಿದ್ದು, ಬಿಜೆಪಿ ಬೆಂಬಲದಿಂದ ಗೆದ್ದಿದ್ದ ಸದಸ್ಯರನ್ನು ಕಾಂಗ್ರೆಸ್ ಗುಂಪಿಗೆ ಸೇರಿಸಿದ್ದಾರೆ. ಇದನ್ನು ಪಕ್ಷ ಗಮನಿಸುತ್ತಿದೆ.
    ವೈ.ಸಂಪಂಗಿ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts