More

    ಗೂಡು ಸಮೇತ ಜೇನು ತುಪ್ಪ ಮಾರಾಟ

    ರಾಜು ಹೊಸಮನಿ ನರಗುಂದ
    ಶುದ್ಧ ಜೇನುತುಪ್ಪ ಸಿಗುತ್ತಿಲ್ಲ. ಜೇನು ಬಿಡಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಪಾರಂಪರಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಕೆರೂರಿನ ಹರಣಶಿಕಾರಿ ಜನಾಂಗದ 10ಕ್ಕೂ ಹೆಚ್ಚು ಜನರು ಬೇಸಿಗೆಯಲ್ಲಿ ಪಟ್ಟಣಕ್ಕೆ ಹುಟ್ಟು (ಗೂಡು) ಸಮೇತ ಜೇನುತುಪ್ಪ ಮಾರಾಟಕ್ಕೆ ಬರುತ್ತಾರೆ. ಕಳೆದೊಂದು ವಾರದಿಂದ ಪಟ್ಟಣಕ್ಕೆ ಬರುತ್ತಿರುವ ಇವರು ಮುಂದಿನ ಮೂರು ತಿಂಗಳು ಪಟ್ಟಣ ಸೇರಿ ತಾಲೂಕಿನಾದ್ಯಂತ ಜೇನುತುಪ್ಪ ಮಾರುತ್ತಾರೆ.
    ಮಾರುಕಟ್ಟೆಯಲ್ಲಿ ಶುದ್ಧ ಜೇನು ತುಪ್ಪದ ಹೆಸರಲ್ಲಿ ಸಕ್ಕರೆ, ಬೆಲ್ಲ ಹಾಗೂ ರಾಸಾಯನಿಕ ಮಿಶ್ರಣದ ತುಪ್ಪ ದೊರಕುತ್ತಿದೆ. ಈ ನಡುವೆ ಗೂಡು ಸಮೇತ ತಂದ ಶುದ್ಧ ಜೇನು ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ.
    ಜೇನು ಹುಳುಗಳನ್ನು ಓಡಿಸಿ ಕೆಲವೊಮ್ಮೆ ಅವುಗಳು ಕಚ್ಚಿದರೂ ಅದರ ಬಾವು (ಊತದ) ನೋವಿನ ನಡುವೆ ಜೇನು ತುಪ್ಪವನ್ನು ಹುಟ್ಟು ಸಮೇತ ಮಾರಾಟ ಮಾಡಲು ಇಲ್ಲಿಗೆ ಬರುತ್ತಿದ್ದು, ಆರೋಗ್ಯದ ಹಿತ ದೃಷ್ಟಿಯಿಂದ ಜೇನು ಖರೀದಿಸುವವರು ಹೆಚ್ಚಿದ್ದಾರೆ.
    ‘ಬ್ಯಾಸಗಿಯೊಳಗ ನಾಲ್ಕು ದುಡ್ಡು ಹೆಚ್ಚು ಸಿಕ್ಕೀತು. ಹುಳುಗಳು ಕಡಿದ್ರ ಕಡಿಲಿ. ಹೊಟ್ಟೆಪಾಡೈತಲ್ಲ . ನಾಲ್ಕು ತಿಂಗಳು ಇದೇ ಕೆಲಸ ನಮ್ಮದು’ ಎಂದು ಮಕ್ಕಳ ಸಮೇತ ಜೇನು ಮಾರಾಟಕ್ಕೆ ಬಂದಿದ್ದ ಕಸ್ತೂರೆವ್ವ ಹರಣಶಿಕಾರಿ ಹೇಳುತ್ತಾರೆ.
    ಕೆಜಿಗೆ 650ರೂ.:
    ಇಂದಿನ ಮಾರುಕಟ್ಟೆಯಲ್ಲಿ 600ರಿಂದ 1 ಸಾವಿರ ರೂಪಾಯಿಗಳವರೆಗೆ ಕಲಬೆರಕೆ ಜೇನುತುಪ್ಪ ದೊರೆಯುತ್ತದೆ. ಆದರೆ, ಇವರ ಶುದ್ಧ ಜೇನು ತುಪ್ಪ ಕೆಜಿಗೆ 600ರಿಂದ 650 ರೂಪಾಯಿಗೆ ದೊರೆಯುತ್ತದೆ. ಬೇಕೆಂದವರಿಗೆ ಹುಟ್ಟನ್ನು ಬಿಡಿಸಿ ಶುದ್ಧ ಬಟ್ಟೆಯಲ್ಲಿ ಜೇನು ತುಪ್ಪವನ್ನು ಗ್ರಾಹಕರ ಕಣ್ಣೆದುರೇ ಹಿಂಡಿ ಕೊಡುವುದು ಇವರ ಕಾಯಕದ ಮತ್ತೊಂದು ವಿಶೇಷ.
    ಹಾಳಾಗದ ತುಪ್ಪ: ನೀರು ಮುಟ್ಟಿಸದೆ ಜೇನು ತುಪ್ಪವನ್ನು ಗಾಜಿನ ಭರಣಿಯಲ್ಲಿ ಸಂಗ್ರಹಿಸಿ ಇಡುವುದರಿಂದ ಅದು ನಾಲ್ಕೈದು ವರ್ಷ ಬಾಳುತ್ತದೆ. ಆದ್ದರಿಂದ ನಮ್ಮ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. ನಿತ್ಯ ಅರ್ಧ ಕೆಜಿಯಿಂದ ಎರಡು ಕೆಜಿಯವರೆಗೆ ಮಾರುತ್ತೇವೆ. ಒಮ್ಮೆ ಹೆಚ್ಚು ಲಾಭ ಆಗುತ್ತದೆ. ಒಂದೊಂದು ದಿನ ಏನೂ ದೊರಕುವುದಿಲ್ಲ. ಆದರೆ, ನಾಲ್ಕು ತಿಂಗಳು ನಮ್ಮದು ಇದೇ ಕೆಲಸ. ನಂತರ ಕೂಲಿ ಕೆಲಸಕ್ಕೆ ತೆರಳುತ್ತೇವೆ. ಹುಳು ಕಡಿಸಿಕೊಂಡಿದ್ದು 24 ಗಂಟೆಗಳ ಕಾಲ ನೋವು, ಬಾವು ಇರುತ್ತದೆ. ಇದು ನಮಗೆ ಸಾಮಾನ್ಯ ಎನ್ನುತ್ತಾರೆ ಹರಣಶಿಕಾರಿಗಳು.
    ರೋಗಿಗಳಿಗೆ ಒಳ್ಳೆಯದು:
    ದೀರ್ಘ ಕಾಯಿಲೆ ಇರುವವರಿಗೆ ಕೆಲವು ಔಷಧಗಳನ್ನು ಜೇನು ತುಪ್ಪದಲ್ಲಿ ತೆಗೆದುಕೊಳ್ಳಲು ವೈದ್ಯರು ಹೇಳುತ್ತಾರೆ. ಅದಕ್ಕೆ ಈ ಶುದ್ಧವಾದ ಜೇನುತುಪ್ಪ ಹೇಳಿ ಮಾಡಿಸಿದಂತಿದೆ ಎಂದು ತುಪ್ಪ ಖರೀದಿಸಿದವರು ಹೇಳಿದರು.

    ಅಂಗಡಿಯೊಳಗ ಸಿಗುವ ಜೇನುತುಪ್ಪಕ್ಕೂ,ಹುಟ್ಟಿನ ಮೂಲಕ ದೊರೆಯುವ ಜೇನುತುಪ್ಪಕ್ಕೂ ಬಹಳ ವ್ಯತ್ಯಾಸವಿದೆ. ಆದ್ದರಿಂದ ಹರಣಶಿಕಾರಿ ಜನಾಂಗ ಮಾರುವ ತುಪ್ಪ ಅತ್ಯುತ್ತಮವಾದುದು.
    | ಶಿವಾಜಿ ದೊಡಮನಿ, ನರಗುಂದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts