More

    ಗುಲ್ಲಹಳ್ಳಿ ಸರ್ಕಾರಿ ಶಾಲೆಗೆ ಇಕೋ ಕ್ಲಬ್ ಪ್ರಶಸ್ತಿ

    ಬೂದಿಕೋಟೆ: ಸರ್ಕಾರಿ ಶಾಲೆಗಳಲ್ಲಿ ಇಕೋ ಕ್ಲಬ್ ಕಾರ್ಯಕ್ರಮದಡಿ ಗಿಡ-ಮರ ಬೆಳೆಸಿ ಪರಿಸರ ಮಿತ್ರ ಶಾಲೆಯನ್ನಾಗಿ ಮಾರ್ಪಾಟು ಮಾಡುವ ಸರ್ಕಾರದ ಯೋಜನೆಯಲ್ಲಿ ಗುಲ್ಲಹಳ್ಳಿ ಶಾಲೆಯು ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

    2020 -2021ನೇ ಸಾಲಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಕೋಲಾರ ಜಿಲ್ಲಾದ್ಯಂತ ಸುಮಾರು 500 ಶಾಲೆಗಳಲ್ಲಿ ಇಕೋ ಕ್ಲಬ್ ಚಟುವಟಿಕೆ ನಡೆಸಲಾಗಿತ್ತು. ಈ ಪೈಕಿ ಜಿಲ್ಲೆಯಲ್ಲಿ ಮೂರು ಶಾಲೆಗಳಿಗೆ ಅತ್ಯುತ್ತಮ ಇಕೋ ಕ್ಲಬ್ ಶಾಲೆ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದಾಗಿದೆ.

    ಪರಿಸರ ಮಿತ್ರ ಶಾಲೆಯನ್ನಾಗಿಸಲು ಸರ್ಕಾರದಿಂದ ನೀಡಿದ 5000 ರೂ. ಬಳಸಿ ಗುಲ್ಲಹಳ್ಳಿ ಶಾಲೆಯಲ್ಲಿ ಗಿಡ-ಮರ ಬೆಳೆಸಲಾಗಿದೆ. ಶಾಲೆಗೆ ಯಾವುದೇ ಅಧಿಕಾರಿ ಭೇಟಿ ನೀಡಿದರೂ ಅವರಿಂದ ಒಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ರೂಪಿಸಿರುವುದು ಇಲ್ಲಿನ ವಿಶೇಷ. ಪ್ರಸ್ತುತ ನೂರಾರು ಗಿಡಗಳು ಪರಿಸರಕ್ಕೆ ಹಸಿರು ಹೊದಿಕೆ ಹೊದಿಸುವ ಮೂಲಕ ಇಡೀ ಶಾಲೆಯ ವಾತಾವರಣವನ್ನೇ ಹಸಿರುಮಯವಾಗಿಸಿದೆ.

    ವಿವಿಧ ಬಗೆಯ ತರಕಾರಿ: ಶಾಲೆ ಆವರಣದಲ್ಲಿ ಟೊಮ್ಯಾಟೊ, ನುಗ್ಗೆಕಾಯಿ, ಕುಂಬಳಕಾಯಿ, ಆಲೂಗಡ್ಡೆ, ಬದನೆಯಂತಹ ಹಲವು ಬಗೆಯ ತರಕಾರಿ ಹಾಗೂ ಸೊಪ್ಪನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲಾಗಿದೆ. ಬಿಂದಿಗೆ, ಒಂದೆಲಗ, ಕಾಡುಬಸಳೆ ಸೇರಿ ಸುಮಾರು 20 ಬಗೆಯ ಔಷಧೀಯ ಗುಣ ಇರುವ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ.

    ಪ್ಲಾಸ್ಟಿಕ್ ಬಾಟಲ್‌ನಲ್ಲಿ ಹೂ: ಬಳಸಿ ಎಸೆದಂತಹ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಹಲವು ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಶಾಲೆ ಮುಂಭಾಗ ನೇತು ಹಾಕಲಾಗಿದ್ದು, ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಶಾಲೆಯಲ್ಲಿ ಹೊರಬೀಳುವ ಕಸ ಇನ್ನಿತರ ತ್ಯಾಜ್ಯಗಳನ್ನು ಸಾವಯವ ಗೊಬ್ಬರವನ್ನಾಗಿಸಿ ಸಸಿಗಳಿಗೆ ನೀಡಲಾಗುತ್ತಿದೆ. ಸ್ವಚ್ಛತೆಗೆ ಮಹತ್ವ ನೀಡುವ ಜತೆಗೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮುಕ್ತಗೊಳಿಸಲಾಗಿದೆ.

    ಶಾಲಾ ಕಟ್ಟಡದ ಹೊರಭಾಗದ ಗೋಡೆ ಮೇಲೆ ಕೆಂಪು ಬಣ್ಣದಲ್ಲಿ ರೈಲು ಎಂಜಿನ್ ಚಿತ್ರ ಬರೆದು ಶಾಲಾ ಕೊಠಡಿಗಳನ್ನು ರೈಲು ಬೋಗಿಗಳನ್ನಾಗಿ ಬಣ್ಣ ಬಳಿಯಲಾಗಿದ್ದು, ಶಾಲೆಯ ಮುಂಭಾಗ ರೈಲು ನಿಂತಿರುವಂತೆಯೇ ಭಾಸವಾಗುವ ಜತೆಗೆ ನೋಡಲು ಆಕರ್ಷಕವಾಗಿದೆ.

    ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಪರಿಸರ ಸ್ನೇಹಿ ಶಾಲೆಯನ್ನಾಗಿಸುವಲ್ಲಿ ಶಿಕ್ಷಕರ ಹಾಗೂ ಮಕ್ಕಳ ಪರಿಶ್ರಮ ಮಹತ್ವದ್ದು. ಜಿಲ್ಲಾಮಟ್ಟದ ತಂಡ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ವಾತಾವರಣ ಗಮನಿಸಿ ಅತ್ಯುತ್ತಮ ಇಕೋ ಕ್ಲಬ್ ಶಾಲೆಯೆಂದು ಘೋಷಣೆ ಮಾಡಿದೆ. ಶಾಲೆಗೆ ದೊರೆತ ಪ್ರಶಸ್ತಿ ಹಿಂದೆ ಪ್ರತಿ ಶಿಕ್ಷಕರ ಶ್ರಮವಿದ್ದು, ಉತ್ತಮ ಕೆಲಸ ಮಾಡುವ ಶಿಕ್ಷಕರಿಗೆ ಪ್ರೋತ್ಸಾಹ ಸಿಗುವ ಜತೆಗೆ ಇತರ ಶಾಲೆಗಳ ಶಿಕ್ಷಕರಿಗೆ ಪ್ರೇರಣೆ ಸಿಗುವಂತಾಗಿದೆ.

    ಪರಿಸರ ಮಿತ್ರ ಶಾಲೆಯನ್ನಾಗಿಸಲು ಎಲ್ಲ ಶಿಕ್ಷಕರ ಪರಿಶ್ರಮ ಬಹಳಷ್ಟಿದೆ. ಶಾಲೆಯು ಗಡಿಭಾಗದಲ್ಲಿದ್ದು, ಮಕ್ಕಳಿಗೆ ಬೋಧನೆಯ ಜತೆಗೆ ಗಿಡ-ಮರ ಬೆಳೆಸಲು, ಕಸ ನಿರ್ವಹಣೆ, ನೀರಿನ ಬಳಕೆ, ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಂದಲೇ ಗಿಡ ನೆಟ್ಟು ಪೋಷಿಸಲಾಗುತ್ತಿದೆ.
    ಟಿ.ಆರ್.ಮುನಿನಾರಾಯಣ, ಮುಖ್ಯಶಿಕ್ಷಕ, ಗುಲ್ಲಹಳ್ಳಿ

    ಗುಲ್ಲಹಳ್ಳಿ ಶಾಲೆಗೆ ಅತ್ಯುತ್ತಮ ಇಕೋಕ್ಲಬ್ ಶಾಲೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಒಟ್ಟಿಗೆ ಸೇರಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಪರಿಸರ ಸ್ನೇಹಿ ಶಾಲೆಯನ್ನಾಗಿ ಮಾರ್ಪಾಡು ಮಾಡಿದ್ದು, ಇತರ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
    ಬಿಪಿ.ಕೆಂಪಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts