More

    ಗುಲಾಬಿ ಈರುಳ್ಳಿಗೆ ನಿಷೇಧದ ಗುಮ್ಮ

    ಕೋಲಾರ: ರಫ್ತು ನಿಷೇಧದ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ಗುಲಾಬಿ ಈರುಳ್ಳಿ ಬೆಳೆಗಾರರಿಗೆ ರಿಲೀಫ್ ನೀಡಿರುವ ಕೇಂದ್ರ ಸರ್ಕಾರ 2021ರ ಮಾರ್ಚ್ 31ರವರೆಗೆ ರಫ್ತಿಗೆ ಕಾಲಾವಕಾಶ ನೀಡಿದ್ದು, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ.

    ಸ್ವದೇಶದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಮಾರುಕಟ್ಟೆ ಇಲ್ಲದೆ ರ್ತುದಾರರನ್ನೇ ನಂಬಿರುವ ಬೆಳೆಗಾರರು ಪ್ರತಿ ವರ್ಷ ರಫ್ತು ನಿಷೇಧದ ಆತಂಕ ಎದುರಿಸುತ್ತಿದ್ದಾರೆ. ರಫ್ತಿಗೆ ಗುರುತಿಸಿರುವ ಉತ್ಪನ್ನಗಳಿಗೆ ಪ್ರತ್ಯೇಕ ಕೋಡ್ ಸಂಖ್ಯೆ ನೀಡಲಾಗುತ್ತದೆ. ಗುಲಾಬಿ ಈರುಳ್ಳಿ ರಫ್ತಿನ ಪ್ರಮಾಣ ಕಡಿಮೆಯೆಂಬ ಕಾರಣಕ್ಕೆ ಕೋಡ್ ನಿಗದಿಪಡಿಸಿಲ್ಲದಿರುವುದು ಸಮಸ್ಯೆಗೆ ಕಾರಣ.

    ಈ ಬಾರಿಯೂ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿ ಆದೇಶಿಸಿದ್ದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಯ ಬೆಳೆಗಾರರು ನಿಷೇಧ ತೆರವಿಗೆ ಕೇಂದ್ರವನ್ನು ಒತ್ತಾಯಿಸಿದ್ದರು. ರೈತರಿಗೆ ಸ್ಪಂದಿಸಿದ ಈ ಭಾಗದ ಸಂಸದರು ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಷರತ್ತುಗಳ ಅನ್ವಯ ಬೆಂಗಳೂರು ಗುಲಾಬಿ ಈರುಳ್ಳಿ ಹಾಗೂ ಆಂಧ್ರದ ಕೃಷ್ಣಪುರಂ ಈರುಳ್ಳಿ 10,000 ಮೆಟ್ರಿಕ್ ಟನ್ ರಫ್ತು ಮಾಡಲು ಕೇಂದ್ರ ವಾಣಿಜ್ಯ ಇಲಾಖೆ ಅನುಮತಿ ನೀಡಿದೆ.

    ಆಗ್ನೇಯ ಏಷಿಯಾ ರಾಷ್ಟ್ರಗಳಿಗೆ ಚೆನ್ನೈ ಬಂದರು ಮೂಲಕ ಈರುಳ್ಳಿ ರಫ್ತು ಮಾಡಬಹುದು, ರಫ್ತುದಾರ ತೊಟಗಾರಿಕೆ ಇಲಾಖೆ ಆಯುಕ್ತರಿಂದ ಗುಲಾಬಿ ಈರುಳ್ಳಿ ರಫ್ತು ಬಗ್ಗೆ ಪ್ರಮಾಣಪತ್ರ ಪಡೆದು ಕೇಂದ್ರ ವಾಣಿಜ್ಯ ಇಲಾಖೆಯ ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯದಲ್ಲಿ ನೋಂದಣಿ ಮಾಡಿಕೊಂಡು ರ್ತು ಮಾಡಬೇಕಿದೆ.

    ಎಲ್ಲೆಲ್ಲಿ ಬೆಳೆ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಭಾಗದಲ್ಲಿ ಗುಲಾಬಿ ಈರುಳ್ಳಿ ಬೆಳೆಯಲಾಗುತ್ತಿದೆ. ಈರುಳ್ಳಿ ಹೆಚ್ಚು ಪೋಷಕಾಂಶ ಒಳಗೊಂಡಿದ್ದರೂ ಸ್ಥಳೀಯವಾಗಿ ಬಳಸುವುದು ಅಪರೂಪ. ಖಾರ ಜಾಸ್ತಿ, ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.

    ಮಲೇಷಿಯಾ, ಸಿಂಗಾಪುರ ಇಂಡೋನೇಷಿಯಾ, ಬಾಂಗ್ಲಾ ಮತ್ತು ಶ್ರೀಲಂಕಾ ರಾಷ್ಟ್ರಗಳಿಗೆ ರ‌್ತಾಗುತ್ತದೆ. ಹೀಗಾಗಿ ಗುಲಾಬಿ ಈರುಳ್ಳಿ ಬೆಳೆದ ರೈತ ಸಂಪೂರ್ಣವಾಗಿ ರಫ್ತು ಮೇಲೆ ಅವಲಂಬಿತನಾಗಿದ್ದಾನೆ.

    ಜಿಲ್ಲೆಯಲ್ಲಿ 2 ಕ್ಲಸ್ಟರ್: ಶ್ರೀನಿವಾಸಪುರದ ನೆಲವಂಕಿ ಹೋಬಳಿಯಲ್ಲಿ 35 ಹೆಕ್ಟೇರ್ (ಮಾರ್ಚ್, ಏಪ್ರಿಲ್‌ಗೆ ಬಿತ್ತನೆ), ಮಾಸ್ತಿ ಹೋಬಳಿಯಲ್ಲಿ 50 ಹೆಕ್ಟೇರ್‌ನಲ್ಲಿ (ಜೂನ್-ಜುಲೈಗೆ ಬಿತ್ತನೆ) 100ಕ್ಕೂ ಅಧಿಕ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಬಿತ್ತನೆ, ಗೊಬ್ಬರ ಸೇರಿ ಒಂದು ಎಕರೆಗೆ 60,000ರಿಂದ 70,000 ರೂ. ಖರ್ಚು ಬರುತ್ತದೆ. ಸಾಮಾನ್ಯವಾಗಿ ರೈತರಿಗೆ ಬಿತ್ತನೆ ಈರುಳ್ಳಿ ನೀಡುವವರೇ ಬೆಳೆಯನ್ನೂ ಖರೀದಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ.

    ಗುಲಾಬಿ ಈರುಳ್ಳಿ ವಿದೇಶಿ ವಿನಿಮಯ ತಂದುಕೊಡುವ ವಾಣಿಜ್ಯ ಬೆಳೆ. ಬೆಳೆಗಾರರು ಕಡಿಮೆ. ಮಾರುಕಟ್ಟೆ ವ್ಯವಸ್ಥೆ ರಫ್ತುದಾರರನ್ನು ಅವಲಂಬಿಸಿದೆ. ಪ್ರತಿ ಬಾರಿ ಈರುಳ್ಳಿ ರಫ್ತು ನಿಷೇಧ ಹೇರುವ ಕೇಂದ್ರದ ಕ್ರಮದಿಂದ ರೈತರು ತೊಂದರೆಗೀಡಾಗುತ್ತಾರೆ. ರಫ್ತಿಗೆ ಅನುಕೂಲವಾಗುವಂತೆ ಪ್ರತ್ಯೇಕ ಕೋಡ್ ವ್ಯವಸ್ಥೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
    ಸರ್ದಾರ್‌ಬೇಗ್, ಗುಲಾಬಿ ಈರುಳ್ಳಿ ಬೆಳೆಗಾರ, ಮಾಲೂರು

    ಬೆಂಗಳೂರು ಗುಲಾಬಿ ಈರುಳ್ಳಿ ಭೌಗೋಳಿಕ ಗುರುತಿಸುವಿಕೆಯ ಸ್ಥಾನಮಾನ ಹೊಂದಿದ್ದು, ಅತ್ಯಂತ ಪೌಷ್ಟಿಕ, ಔಷಧೀಯ ಗುಣಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಎರಡು ಕ್ಲಸ್ಟರ್‌ಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ರಫ್ತಿಗೆ ಕೇಂದ್ರ ಅವಕಾಶ ನೀಡಿದೆ.
    ಗಾಯತ್ರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts