More

    ಗುರಮ್ಮ ಕುಂಟೆ ಜಮೀನು ಸರ್ವೇ ವೇಳೆ ವಾಗ್ವಾದ

    ಬೇತಮಂಗಲ: ಬೇತಮಂಗಲ ಹೃದಯ ಭಾಗ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಸರ್ವೇ ನಂ.192ರ 26 ಗುಂಟೆ ಸರ್ಕಾರಿ ಜಮೀನು ಅತಿಕ್ರಮಿಸಿಕೊಳ್ಳಲಾಗಿದೆ ಎಂಬ ದೂರಿನನ್ವಯ ಸೋಮವಾರ ಸರ್ವೇ ನಡೆಸಲು ಬಂದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸ್ವಾಧೀನದಲ್ಲಿರುವ ಮಾಲೀಕರ ಮಧ್ಯೆ ವಾದ ವಿವಾದ ನಡೆದು ಸ್ವಲ್ಪ ಹೊತ್ತು ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

    ಸರ್ವೇ ನಂ.192ರಲ್ಲಿ 26 ಗುಂಟೆ ಜಮೀನು ಗೋಮಾಳ ಅಥವಾ ಗುಂಡು ತೋಪು ಇದ್ದು, ಆ ಪೈಕಿ 8 ಗುಂಟೆ ಜಮೀನು ವಿ.ಕೋಟೆ-ಬೇತಮಂಗಲಕ್ಕೆ ಸಾಗುವ ರಸ್ತೆಗೆ ಬಿಟ್ಟುಕೊಡಲಾಗಿತ್ತು. ಇನ್ನುಳಿದ 18 ಗುಂಟೆ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಭೂ ಪರಿವರ್ತನೆಗೊಳಿಸಿ ಮಾರಾಟ ಮಾಡಿದ್ದರು.

    ಇದೀಗ ಕೆಲವು ದಿನಗಳ ಹಿಂದೆ ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗುರಮ್ಮಕುಂಟೆ ಸರ್ಕಾರಿ ಭೂಮಿ. ಉಳ್ಳವರು ಅದನ್ನು ಕಬಳಿಸಿ ವಾಣಿಜ್ಯ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುವಂತೆ ಒತ್ತಡ ಹೇರಿದ್ದರಲ್ಲದೆ ಪ್ರತಿಭಟನೆ ನಡೆಸಿ ಹೋರಾಟ ರೂಪಿಸಿದ್ದರು.

    ಈ ಸಂಬಂಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕೆಜಿಎಫ್ ತಹಸೀಲ್ದಾರ್ ಸುಜಾತಾ ಅವರ ಮಾರ್ಗದರ್ಶನದಲ್ಲಿ ಸರ್ವೇ ನಡೆಸಲು ಮುಂದಾದಾಗ ಸ್ವಾಧೀನದಲ್ಲಿರುವ ಮಾಲೀಕರು ನಾವು 20-30 ವರ್ಷಗಳ ಹಿಂದೆ ಖರೀದಿಸಿರುವ ಭೂಮಿ. ನೀವು ಏಕೆ ಸರ್ವೇ ಮಾಡುತ್ತಿದ್ದೀರಿ? ಜಿಲ್ಲಾಧಿಕಾರಿಗಳೇ ಭೂ ಪರಿವರ್ತನೆ ಮಾಡಿಕೊಟ್ಟಿರುವ ಭೂಮಿ ಖರೀದಿಸಿ ಕೋಟ್ಯಂತರ ರೂ. ಸುರಿದು ವಾಣಿಜ್ಯ ಕಟ್ಟಡ ಕಟ್ಟಿದ್ದೇವೆ. ಇದು ದೌರ್ಜನ್ಯದ ಕೆಲಸ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಮೇಲಧಿಕಾರಿಗಳ ಸೂಚನೆ ಪಾಲಿಸುತ್ತೇವೆ ಎಂದು ಸರ್ವೇ ನಡೆಸಲು ಮುಂದಾದರೂ ಭೂಮಿ ಅಳತೆ ಮಾಡಲು ಸರಿಯಾದ ಗುರುತು ಸಿಗದ ಕಾರಣ ವಾಪಸಾದರು. ಸರ್ವೇ ನಡೆಸುವುದಕ್ಕೆ ಸಂಬಂಧಪಟ್ಟಂತೆ 30ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಒತ್ತುವರಿ ಬಗ್ಗೆ ದೂರು ನೀಡಿದ್ದ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂದೇಶ್, ತಾಲೂಕು ಅಧ್ಯಕ್ಷ ಕರ್ಣಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್, ಹನುಮಂತು, ಸೋಮಶೇಖರ್, ಜಯರಾಮ್, ರಾಮಚಂದ್ರ, ಮುನಿಸ್ವಾಮಿ, ನಾರಾಯಣಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts