More

    ಗುತ್ತಲದಲ್ಲಿ ಕುಡಿಯುವ ನೀರಿನ ಸಮಸ್ಯೆ

    ಗುತ್ತಲ: ಸಮೀಪದ ಹರಳಹಳ್ಳಿಯ ನೀರು ಶುದ್ಧೀಕರಣ ಘಟಕದಲ್ಲಿನ ಅವ್ಯವಸ್ಥೆಯಿಂದಾಗಿ ಪಟ್ಟಣದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೋರಿದೆ.

    ಪಟ್ಟಣಕ್ಕೆ ಹರಳಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತಿದೆ. ನದಿಯ ಪಕ್ಕದ ಜಾಕ್​ವೆಲ್​ನಿಂದ ಹರಳಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಬರುವ ನೀರು, ಅಲ್ಲಿಂದ ಪಟ್ಟಣಕ್ಕೆ ಸರಬರಾಜಾಗುತ್ತಿದೆ. ಆದರೆ, ಘಟಕದ ಯಂತ್ರಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

    ನೀರು ಶುದ್ಧೀಕರಣ ಘಟಕಕ್ಕೆ ದಿನದ 24 ಗಂಟೆಯೂ ವಿದ್ಯುತ್ ಲಭ್ಯವಾಗಿಸಲು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಈ ವಿದ್ಯುತ್ ಪರಿವರ್ತಕದಿಂದ ಸುತ್ತಲಿನ ರೈತರು ಕೊಳವೆ ಬಾವಿಗಳಿಗೆ ಸಂಪರ್ಕ ಪಡೆದುಕೊಂಡಿದ್ದು ಸಮಸ್ಯೆ ಸೃಷ್ಟಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದರಿಂದ ಆಗಾಗ ಪರಿವರ್ತಕದಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಘಟಕದ ಮೋಟರ್​ಗಳಿಗೆ ಸರಿಯಾಗಿ ವಿದ್ಯುತ್ ದೊರೆಯುತ್ತಿಲ್ಲ. ಅಲ್ಲದೆ, ಪದೇಪದೆ ವಿದ್ಯುತ್ ಪೂರೈಕೆ ನಿಲ್ಲುವುದರಿಂದ ಮೋಟರ್​ಗಳು ಬಂದ್ ಬೀಳುತ್ತಿವೆ.

    ಘಟಕಕ್ಕೆ ಯಾವುದೇ ತರಹದ ರಕ್ಷಣೆಯಿಲ್ಲದಿರುವುದು ಸಮಸ್ಯೆಗೆ ಮೂಲ ಕಾರಣ ಎನ್ನಬಹುದು. ಅಲ್ಲದೆ, ಸಿಬ್ಬಂದಿ ಮೋಟಾರ್ ಚಾಲನೆ ಮಾಡಿ ಮನೆಗಳಿಗೆ ಹೋಗುತ್ತಾರೆ. ಅಲ್ಲದೆ, ಒಮ್ಮೆ ವಿದ್ಯುತ್ ಹೋಗಿ ಬಂದ ನಂತರ ಪುನಃ ಮೋಟಾರ್ ಪ್ರಾರಂಭ ಮಾಡಲು ಗಂಟೆಗಟ್ಟಲೇ ಸಮಯ ಹಿಡಿಯುವ ಕಾರಣ ನೀರು ಸಂಗ್ರಹಕ್ಕೆ ತೊಂದರೆಯಾಗಿದೆ.

    ಜಾಕ್​ವೆಲ್, ಶುದ್ಧೀಕರಣ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ನಿರ್ಲಕ್ಷ್ಯತನದಿಂದ ನದಿಯ ನೀರು 15-20 ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತಿದೆ. ಸಿಬ್ಬಂದಿ ಮೇಲೆ ಹಿಡಿತ ಇಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸದಸ್ಯರು ಜನರ ಆಕ್ರೋಶ ಎದುರಿಸುವಂತಾಗಿದೆ.

    ಘಟಕದಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ ಎಂಬ ಆರೋಪಕ್ಕೆ ಸಾಕ್ಷಿ ಎನ್ನುವಂತೆ, ನೀರು ಸಂಗ್ರಹಾಗಾರದಲ್ಲಿ ಜೊಂಡು (ಹೊಲಸು) ತುಂಬಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts