More

    ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ

    ಹುಬ್ಬಳ್ಳಿ: ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ, ಆರಕ್ಷಕ ಹಾಗೂ ಇನ್ನಿತರೆ ಇಲಾಖೆ ಸಿಬ್ಬಂದಿಗೆ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ಒಳಗೊಂಡ ಸುರಕ್ಷಾ ಕಿಟ್ ಅನ್ನು ಸರ್ಕಾರ ಕೂಡಲೆ ಒದಗಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದ್ದಾರೆ.

    ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವೈದ್ಯರು, ದಾದಿಯರು, ಆಂಬುಲೆನ್ಸ್ ವಾಹನ ಚಾಲಕರು, ಶುಶ್ರೂಷಕರು, ಪೊಲೀಸ್ ಸಿಬ್ಬಂದಿ, ಚೆಕ್​ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಅಪಾಯದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಇತರೆ ಇಲಾಖೆಯ ಕೆಲವರು ಕರವಸ್ತ್ರ ಕಟ್ಟಿಕೊಂಡು ಕೆಲಸ ಮಾಡá-ತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಚರ್ಚೆ ನಡೆಸಲಿದ್ದು, ವೈದ್ಯಕೀಯ ಸಿಬ್ಬಂದಿಗೆ ವಿಳಂಬ ಮಾಡದೇ ಗುಣಮಟ್ಟದ ಪಿಪಿಇ ಕಿಟ್ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಕಠಿಣ ಕ್ರಮಕ್ಕೆ ಆಯುಕ್ತರಿಗೆ ಪತ್ರ

    ಧಾರವಾಡ: ಕರೊನಾ ವೈರಸ್ ಸೋಂಕು ಹೊಂದಿದ ವ್ಯಕ್ತಿಗಳ ಹೆಸರು, ವಿಳಾಸದ ವಿವರವನ್ನು ಕೆಲವರು ಏ. 22ರಂದು ಅನಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಖಾಸಗಿ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಿಗೆ ಹಾಕುವುದು ಹಾಗೂ ಸಂದೇಶವನ್ನು ಅನಧಿಕೃತವಾಗಿ ಹರಡುವುದು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕೋವಿಡ್ ನಿಯಂತ್ರಣ ಕಾಯ್ದೆ 2020ರಡಿ ಅಪರಾಧವಾಗಿದೆ. ಈ ಕುರಿತು ತನಿಖೆ ನಡೆಸಿ, ಸೂಕ್ತ ನಿಗಾ ಇರಿಸಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

    ಶೋಭಾ ಯಾತ್ರೆ ರದ್ದು

    ಹುಬ್ಬಳ್ಳಿ: ನವನಗರ ವೀರಶೈವ ಸಮಾಜ, ಬ್ರಾಹ್ಮಣ ಸಮಾಜ, ಮರಾಠ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಚರಿಸಲ್ಪಡುವ ಬಸವ, ಶಂಕರ, ಶಿವಾಜಿ ಜಯಂತಿ (ಏ. 26ರಂದು) ಶೋಭಾಯಾತ್ರೆಯನ್ನು ರದ್ದು ಮಾಡಲಾಗಿದೆ. ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ಆದೇಶದ ಮೇರೆಗೆ ಈ ಬಾರಿ ಶೋಭಾಯಾತ್ರೆ ರದ್ದು ಮಾಡಲಾಗಿದೆ ಎಂದು ತಿಳಿಸಿದೆ.

    ರೈಲ್ವೆಯಿಂದ 2.26 ಲಕ್ಷ ಜನರಿಗೆ ಊಟ

    ಹುಬ್ಬಳ್ಳಿ: ಲಾಕ್​ಡೌನ್​ನಿಂದ ತೊಂದರೆಗೀಡಾದ ದಿನಗೂಲಿ ಕಾರ್ವಿುಕರು, ಬಡಜನರಿಗೆ ನೈಋತ್ಯ ರೈಲ್ವೆ ವಲಯ ಇದುವರೆಗೆ 2.26 ಲಕ್ಷ ಜನರಿಗೆ ಆಹಾರ ಒದಗಿಸಿದೆ. ಐಆರ್​ಸಿಟಿಸಿ, ರೈಲ್ವೆ ಭದ್ರತಾ ಪಡೆ, ವಿವಿಧ ವಿಭಾಗಗಳ ಮುಖ್ಯ ಕಚೇರಿ, ವಿಭಾಗೀಯ ಕಚೇರಿ, ಎನ್​ಜಿಒಗಳ ಸಹಾಯದೊಂದಿಗೆ ನೈಋತ್ಯ ರೈಲ್ವೆ ವಲಯ ಬಿಸಿ ಆಹಾರ ಸಿದ್ಧಪಡಿಸಿ, ಅಗತ್ಯ ಇರುವವರಿಗೆ ವಿತರಿಸಿದೆ. ಬೆಂಗಳೂರು, ಹುಬ್ಬಳ್ಳಿ ಐಆರ್​ಸಿಟಿಸಿ ಅಡುಗೆ ಮನೆಯಲ್ಲಿ 78,041, ವಿವಿಧ ವಿಭಾಗೀಯ ಮುಖ್ಯ ಕಚೇರಿಗಳು 1,47,897 ಪ್ಲೇಟ್ ಅಡುಗೆ ಸಿದ್ಧಪಡಿಸಿ ವಿತರಿಸಿವೆ.

    ಹುಬ್ಬಳ್ಳಿ ಎಪಿಎಂಸಿಯಲ್ಲಿ ಆಹಾರ ಧಾನ್ಯ ವರ್ತಕರ ಸಂಘದಿಂದ 6.50 ಲಕ್ಷ ರೂ. ದೇಣಿಗೆ ಚೆಕ್ ಅನ್ನು ಸಚಿವ ಜಗದೀಶ ಶೆಟ್ಟರ್​ಗೆ ಶುಕ್ರವಾರ ನೀಡಲಾಯಿತು. ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಸದಸ್ಯರಾದ ಚನ್ನು ಹೊಸಮನಿ, ಈಶ್ವರ ಕಿತ್ತೂರ, ಇತರರಿದ್ದರು.

    ಎಪಿಎಂಸಿ ವರ್ತಕರಿಂದ 6.50 ಲಕ್ಷ ರೂ. ದೇಣಿಗೆ

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಹಾರ ಧಾನ್ಯ ವರ್ತಕರ ಸಂಘದಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಕರೊನಾ ನಿಧಿಗೆ 6.50 ಲಕ್ಷ ರೂ. ದೇಣಿಗೆ ನೀಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮೂಲಕ ಕರೊನಾ ನಿಧಿಗೆ ಅರ್ಪಿಸಲಾಯಿತು.

    ‘ಕರೊನಾ ತಡೆಗೆ ಸ್ವಯಂ ನಿಯಂತ್ರಣ, ತಾಳ್ಮೆ, ಸಂಯಮ ಮುಖ್ಯ. ಹುಬ್ಬಳ್ಳಿ ಎಪಿಎಂಸಿ ಉತ್ತರ ಕರ್ನಾಟಕ, ಗೋವಾ ರಾಜ್ಯಕ್ಕೆ ಆಹಾರ ಸಾಮಗ್ರಿ ಪೂರೈಸುವ ಪ್ರಮುಖ ಕೇಂದ್ರ. ಇಲ್ಲಿನ ವರ್ತಕರು ಜವಾಬ್ದಾರಿಯಿಂದ ವರ್ತಿಸಬೇಕು. ರೈತರ ತರಕಾರಿ, ಇತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡá-ವ ಮೂಲಕ ಶೋಷಣೆ ಮಾಡಬಾರದು. ಎಲ್ಲರೂ ಬದುಕಬೇಕು. ಈ ವಿಷಯದಲ್ಲಿ ಎಪಿಎಂಸಿ ಜವಾಬ್ದಾರಿ ದೊಡ್ಡದಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕರೊನಾ ಹಿಮ್ಮೆಟ್ಟಿಸಲು ನಾವೆಲ್ಲರೂ ಸ್ವಯಂ ಸೈನಿಕರಂತೆ ಕೆಲಸ ಮಾಡಬೇಕು. ವ್ಯಾಪಾರಸ್ಥರು ಇದನ್ನು ಅರಿತುಕೊಳ್ಳಬೇಕು. ಗ್ರಾಹಕರಿಗೂ ತಿಳಿವಳಿಕೆ ನೀಡಬೇಕು ಎಂದರು.

    ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಸದಸ್ಯರಾದ ಚನ್ನು ಹೊಸಮನಿ, ಈಶ್ವರ ಕಿತ್ತೂರ, ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ, ಉಪಾಧ್ಯಕ್ಷ ಗಣೇಶ ಕಠಾರೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಬೋರಟ್ಟಿ, ಸಹಕಾರ್ಯದರ್ಶಿ ಕಿಶೋರಕುಮಾರ ಪಟೇಲ್, ಖಜಾಂಚಿ ಶ್ರೀಕಾಂತ ಮಹಾಲೆ, ಕಾರ್ಯಕಾರಿ ಮಂಡಳಿಯ ಮಂಜುನಾಥ ಮುನವಳ್ಳಿ, ಗೌತಮ ಬಾಫಣಾ, ಗುರು ಇಂಗಳಗಿ, ಈರಣ್ಣ ಕೆಸರಪ್ಪನವರ, ಉಮೇಶ ತೊಗ್ಗಿ, ಅಧಿಕಾರಿಗಳು, ಇತರರಿದ್ದರು.

    ಸ್ಯಾನಿಟೈಸರ್ ಸೇವಿಸಿ ಅಸ್ವಸ್ಥ

    ಧಾರವಾಡ: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದ ಕಾರಣಕ್ಕೆ ಅನೇಕರು ಸ್ಯಾನಿಟೈಸರ್ ಸೇವನೆಗೆ ಮುಂದಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರ ಮಧ್ಯೆ ಧಾರವಾಡದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ ಸ್ಯಾನಿಟೈಸರ್ ಸೇವಿಸಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ನಗರದ ಗಾಂಧಿಚೌಕ್ ಬಳಿಯ ಬಾಲಾಜಿ ಓಣಿಯ ದೀಪಕ ಶಿಂಧೆ ಸ್ಯಾನಿಟೈಸರ್ ಸೇವಿಸಿ ಅಸ್ವಸ್ಥರಾದವರು. ಅವರನ್ನು ಕೂಡಲೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts