More

    ಗುಡ್ಡದಲ್ಲಿ ಬಾಂಡ್ ವ್ಯಸನದ ಘಾಟು!

    ಚನ್ನಮ್ಮನ ಕಿತ್ತೂರು, ಬೆಳಗಾವಿ: ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಮಾದಕ ವ್ಯಸನದ ಪ್ರಕರಣಗಳು ಈಗೀಗ ಸಣ್ಣಪುಟ್ಟ ಪಟ್ಟಣಕ್ಕೂ ಹಬ್ಬಿರುವುದು ಪಾಲಕರನ್ನು ಚಿಂತೆಗೀಡುಮಾಡಿದೆ. ಪಟ್ಟಣದ ಹೊರವಲಯದಲ್ಲಿರುವ ನಿರ್ಜನ ಸ್ಥಳ ಗಡಾದ ಮರಡಿಯಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸದ್ದಿಲ್ಲದೆ ಕೆಟ್ಟ ವ್ಯಸನಕ್ಕೆ ಬಲಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

    ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಗಳು ಗುಂಪುಗುಂಪಾಗಿ ಸೇರುತ್ತಿದ್ದರು. ವಯೋಸಹಜ ಹುಡುಗಾಟದಿಂದಾಗಿ ಅಲ್ಲಿ ಸೇರಿ ಚೇಷ್ಟೆ ಮಾಡುತ್ತಿರಬಹುದು ಎಂದುಕೊಂಡು ಜನರು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ, ವಿದ್ಯಾರ್ಥಿಗಳು ಅಲ್ಲಿ ಯಾಕೆ ಸೇರುತ್ತಾರೆ ಎಂದು ವಿಜಯವಾಣಿ ಪ್ರತಿನಿಧಿ ಪರಿಶೀಲಿಸಿದಾಗ ಬಾಂಡ್ ಘಾಟು ಹೊಗೆಯಾಡುವುದು ಗೊತ್ತಾಗುತ್ತಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಏನಿದು ಬಾಂಡ್?: ಟೈಯರ್ ಪಂಚರ್ ತೆಗೆಯಲು ಉಪಯೋಗಿಸುವ ಅಂಟು, ಪೀಠೋಪಕರಣಳಿಗೆ ಉಪಯೋಗಿಸುವ ಅಣ್ಣಾಬಾಂಡ್ ಟ್ಯೂಬ್, ಹಿಟ್ಯಾಕ್ಸ್, ಎಸ್.ಆರ್. ಹೀಗೆ ಹಲವು ತರಹದ ಪೇಸ್ಟ್‌ನ್ನು ಪ್ಲಾಸ್ಟಿಕ್ ಬಾಟಲ್‌ನಲ್ಲಿ ಹಾಕಿ ಸ್ವಲ್ಪ ಸಮಯದವರೆಗೆ ಉಜ್ಜಿ ಏಕಾಏಕಿ ಮೂಗಿಗೆ ಹಿಡಿದು ಜೋರಾಗಿ ಉಸಿರೆಳೆದುಕೊಂಡರೆ ನಶೆ ಏರುತ್ತದೆ. ಅದನ್ನೇ ಈ ಯುವಜನರು ಬಾಂಡ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಮ್ಮೆ ಉಸಿರೆಳೆದುಕೊಂಡರೆ ಮನುಷ್ಯನ ವರ್ತನೆ ಬದಲಾಗಿ ಅಮಲಿನಲ್ಲಿ ತೇಲತೊಡುಗುತ್ತಾರೆ. ನಿರ್ಜನ ಪ್ರದೇಶದಲ್ಲಿ ತೂತು ಮಾಡಿದ ಪ್ಲಾಸ್ಟಿಕ್ ಬಾಟಲ್ ಸಾಕಷ್ಟು ಬಿದ್ದಿವೆ. ಈ ಬಾಟಲ್ಗಳನ್ನು ನೋಡಿದಾಗ ವಿದ್ಯಾರ್ಥಿಗಳ ಬಾಂಡ್ ವ್ಯಸನ ಯಾವ ಮಟ್ಟಕ್ಕಿದೆ ಎಂಬುದು ತಿಳಿಯುತ್ತದೆ. ಒಮ್ಮೆ ಬಾಂಡ್ ಉಪಯೋಗ ಮಾಡಿದರೆ 24 ಗಂಟೆ ನಶೆ ಲೋಕದಲ್ಲೇ ಇರುತ್ತಾರೆ. ಯಾರಿಗೂ ವಾಸನೆಯಾಗಲಿ, ಸಂಶಯವಾಗಲಿ ಬರಲ್ಲ. ಬಾಂಡ್ ಅತಿ ಸೇವನೆಯಿಂದ ಜೀವಕ್ಕೂ ಆಪತ್ತಿದೆ ಎಂಬ ಪರಿಜ್ಞಾನವೇ ಇಲ್ಲದಿರುವುದು ದುರಂತ.

    ರಹಸ್ಯ ತಿಳಿದು ದಂಗಾದ ಶಿಕ್ಷಕರು: ವಿದ್ಯಾರ್ಥಿಗಳು ಗಡಾದ ಮರಡಿಯಲ್ಲಿ ಸೇರುತ್ತಿರುವ ಕುರಿತು ಕೆಲ ಶಾಲಾ ಶಿಕ್ಷಕರನ್ನು ಕೇಳಿದಾಗ ಈ ಬಾಂಡ್ ಸೇವನೆಯ ರಹಸ್ಯ ತಿಳಿದು ಶಿಕ್ಷಕರೇ ದಂಗಾಗಿದ್ದಾರೆ. ಸಾಮಾನ್ಯವಾಗಿ ಶಾಲಾ-ಕಾಲೇಜಿನ ಮಕ್ಕಳು ಹಾಗೂ ಹೊರಗಡೆಯ ಯುವಕರು ಮಡ್ಡಿ ಹತ್ತಿರ ಗುಂಪು ಗುಂಪಾಗಿ ಇರುತ್ತಿದ್ದರು. ನಾವು ಎಷ್ಟೋ ಸಾರಿ ಬೆದರಿಸಿ ಕಳಿಸಿದ್ದೇವೆ. ಯಾಕೆ ಇಷ್ಟು ಜನ ಸೇರುತ್ತಾರೆ ಎಂದು ನಮಗೂ ಗೊತ್ತಿರಲಿಲ್ಲ. ಬಾಂಡ್ ಎನ್ನುವ ವ್ಯಸನದ ಬಗ್ಗೆ ಕೇಳಿ ನಮಗೆ ಶಾಕ್ ಆಯ್ತು ಎಂದು ಶಿಕ್ಷಕರು ತಿಳಿಸಿದ್ದಾರೆ.

    ದುಶ್ಚಟಕ್ಕೆ ಮಕ್ಕಳು, ಯುವಕರು ಬಲಿಯಾಗದಂತೆ ಎಚ್ಚರ ವಹಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts