More

    ಗುಂಡ್ಲುಪೇಟೆಗೆ ಇಂದು ಅಮಿತ್ ಷಾ ಆಗಮನ

    ಗುಂಡ್ಲುಪೇಟೆ: ಏ.24ರಂದು ಪಟ್ಟಣಕ್ಕೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.
    ಗೃಹಸಚಿವರ ಆಗಮನಕ್ಕಾಗಿ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ಸಿದ್ಧಗೊಳಿಸಲಾಗುತ್ತಿದ್ದು, ಭಾನುವಾರ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲಿಸಿದರು.


    ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಮಧುಕರ ಪವಾರ್, ಎಸ್‌ಪಿ ಪದ್ಮಿನಿ ಸಾಹೂ ಭದ್ರತೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
    ಈಗಾಗಲೇ ಪಟ್ಟಣಕ್ಕೆ ಕೇಂದ್ರಿಯ ಮೀಸಲು ಪಡೆ ಹಾಗೂ ಗಡಿ ಭದ್ರತಾ ಪಡೆಗಳ ಸಿಬ್ಬಂದಿ ಆಗಮಿಸಿದ್ದಾರೆ. ಜತೆಗೆ 700 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಸ್‌ಜಿಪಿ ಭದ್ರತೆಯಲ್ಲಿ ರೋಡ್ ಶೋ ನಡೆಯಲಿದೆ. ಅಮಿತ್ ಷಾ ರೋಡ್ ಶೋ ನಡೆಸಲು ಬಳಸುವ ವಾಹನವನ್ನು ಭಾನುವಾರ ಪಟ್ಟಣದ ರಸ್ತೆಯಲ್ಲಿ ಸಂಚರಿಸುವಂತೆ ಟ್ರಯಲ್ ರನ್ ಮಾಡಲಾಯಿತು.


    23ರಂದು ಮೈಸೂರಿಗೆ ಆಗಮಿಸುವ ಷಾ, ಹನ್ನೆರಡು ದಿನಗಳ ಹಿಂದೆ ಮೋದಿ ಉಳಿದುಕೊಂಡಿದ್ದ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವರು. ಬೆಳಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆಯುವರು. ನಂತರ 10.50ಕ್ಕೆ ಮೈಸೂರಿನಿಂದ ಹೆಲಿಕಾಫ್ಟರ್‌ನಲ್ಲಿ ಹೊರಟು 11.20ಕ್ಕೆ ಪಟ್ಟಣಕ್ಕೆ ಆಗಮಿಸುವರು. 11.30ರಿಂದ 12.30ರವರೆಗೆ ರೋಡ್ ಶೋ ನಡೆಸಿ ನಂತರ ಕುಶಾಲನಗರಕ್ಕೆ ತೆರಳುವರು.


    ಇದರ ಸಂಪೂರ್ಣ ಲಾಭ ಪಡೆಯಲು ಬಿಜೆಪಿ ಸಿದ್ಧತೆ ನಡೆಸಿದೆ. ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡುತ್ತಿದೆ. ಹೆಲಿಪ್ಯಾಡ್‌ನಿಂದ ಷಾ ಅವರನ್ನು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ರೋಡ್ ಶೋ ನಡೆಸಲು ಬಿಜೆಪಿಯವರು ತೀವ್ರ ಪ್ರಯತ್ನ ನಡೆಸಿದರೂ ಭದ್ರತೆಯ ಕಾರಣದಿಂದ ಸಾಧ್ಯವಿಲ್ಲ ಎಂದು ಎಸ್‌ಜಿಪಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಹೆಲಿಪ್ಯಾಡ್‌ನಿಂದ ನೇರವಾಗಿ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸುವ ಷಾ ವಾಹನದಲ್ಲಿಯೇ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


    ಏ.9ರಂದು ಪ್ರಧಾನಿ ನರೇಂದ್ರ ಮೋದಿ ತಾಲೂಕಿನ ಬಂಡೀಪುರಕ್ಕೆ ಆಗಮಿಸಿದ್ದರು. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮ ಹಾಕಿಕೊಳ್ಳದಿದ್ದರೂ ಜನತೆಯಲ್ಲಿ ಸಂಚಲನ ಸೃಷ್ಟಿಸಿದ್ದರು. ಇದರ ಬೆನ್ನಲ್ಲಿಯೇ ಅಮಿತ್ ಷಾ ಪಟ್ಟಣಕ್ಕೆ ಆಗಮಿಸಿ ರೋಡ್ ಶೋ ನಡೆಸುತ್ತಿರುವುದು ಬಿಜೆಪಿಯಲ್ಲಿ ನವಚೈತನ್ಯ ಮೂಡಿಸಿದ್ದರೆ, ಕಾಂಗ್ರೆಸ್‌ನವರು ತೀವ್ರವಾಗಿ ಟೀಕಿಸಿದ್ದಾರೆ.


    ಆಕ್ಸಿಜನ್ ದುರಂತ ಸಂಭವಿಸಿದಾಗ ಜಿಲ್ಲೆಗೆ ಬಾರದ ನಾಯಕರು ಇದೀಗ ಚುನಾವಣೆ ಬಂದಿದೆ ಅಂತ ಬರ್ತಿದ್ದಾರೆ. ಜನರ ಬಳಿ ಹೋಗಿ ಇವರ 40% ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಲಿ. ಅಮಿತ್ ಷಾ ಅವರೇ ನೀವು ರೋಡ್ ಶೋ ನಡೆಸುವ ಎಡ ಬಲಗಡೆ ಸ್ವಲ್ಪ ಕಣ್ಣಾಯಿಸಿದರೆ ನಿಮ್ಮ ಸರ್ಕಾರವನ್ನು 40% ಸರ್ಕಾರ ಅಂತ ಯಾಕೆ ಕರೆಯುತ್ತಾರೆ ಅಂಥ ಗೊತ್ತಾಗುತ್ತೆ. ರೋಡ್ ಶೋ ಆರಂಭಿಸುವ ಮೈಸೂರು-ಊಟಿ ಹೆದ್ದಾರಿ ಬದಿಯ ಚರಂಡಿ ಮೇಲೆ ಕಾರ್ಯಕರ್ತರು ನಿಲ್ಲಬೇಡಿ. ಈಗಾಗಲೇ ಚರಂಡಿ 40 ಕಡೆ ಭಾರಕ್ಕೆ ಕುಸಿದಿದೆ. ಸೋಲುವ ಭಯ ಇರುವುದಕ್ಕೆ ಬಿಜೆಪಿಗರು ಚಾಣಕ್ಯನನ್ನು ಕರೆಸುತ್ತಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಬಿಜೆಪಿ ನಾಯಕರು ಸಾಂತ್ವನ ಹೇಳಲಿಲ್ಲ. ಮೃತರ ಕುಟುಂಬಕ್ಕೆ ಕಾಂಗ್ರೆಸ್ ತಲಾ 1 ಲಕ್ಷ ರೂ. ಪರಿಹಾರ ಕೊಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗಣೇಶ್‌ಪ್ರಸಾದ್ ಕಾಲೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts