More

    ಗುಂಡಿ ಬಿದ್ದ ಭಕ್ತನಪಾಳ್ಯ ರಸ್ತೆ, ವಾಹನ ಸವಾರರ ಪರದಾಟ, ಗಮನಿಸದ ಅಧಿಕಾರಿಗಳು, ಜನಪ್ರತಿನಿಧಿಗಳು

    ನೆಲಮಂಗಲ: ನಗರಸಭೆ ವ್ಯಾಪ್ತಿಯ ಭಕ್ತನಪಾಳ್ಯ ಮುಖ್ಯರಸ್ತೆ ಗುಂಡಿ ಬಿದ್ದು ಹಾಳಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
    ನಗರಕ್ಕೆ ಕೂಗಳತೆಯ ದೂರದಲ್ಲಿರುವ ಬಿ.ಎಚ್. ರಸ್ತೆ ಮೂಲಕ ಭಕ್ತನಪಾಳ್ಯ ಗ್ರಾಮ ಮತ್ತು ಬೆಂಗಳೂರು ಉತ್ತರ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಅನೇಕ ವರ್ಷಗಳೇ ಕಳೆದಿವೆ. ಆದರೂ, ಈ ರಸ್ತೆಯನ್ನು ದುರಸ್ತಿಗೊಳಿಸುವ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ.

    3 ಕಿಮೀ ಉದ್ದವಿರುವ ರಸ್ತೆಯಲ್ಲಿ ಗುಂಡಿಗಳ ತಡೆಹಾಯ್ದು ಮುಂದೆ ಸಾಗಲು ವಾಹನಸವಾರರು ಅದರಲ್ಲೂ ದ್ವಿಚಕ್ರವಾಹನ ಸವಾರರು ಹೆದರುವಂತಾಗಿದೆ. ಗುಂಡಿಯಿಂದಾಗಿ ಬಿದ್ದು ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ.

    ಕೆಸರು ಗದ್ದೆಯಾಗುವ ರಸ್ತೆ: ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಇವೆ. ಸಣ್ಣ ಮಳೆಯಾದರೂ ಈ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಕೆಸರು ಗದ್ದೆಯಂತಾಗುತ್ತದೆ. ರಸ್ತೆಯಲ್ಲಿ ದಿನವೂ ನೂರಾರು ವಾಹನಗಳ ಸಂಚಾರ ಇದೆ. ಆದರೂ ಇದನ್ನು ದುರಸ್ತಿಗೊಳಿಸಲು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಜನರು ಅವರೆಲ್ಲರಿಗೂ ಹಿಡಿಶಾಪ ಹಾಕುತ್ತಲೇ ಮುಂದೆ ಸಾಗುವುದು ಸಾಮಾನ್ಯವಾಗುತ್ತಿದೆ.

    ಮನವಿಗೂ ಸಿಗದ ಸ್ಪಂದನೆ: ರಸ್ತೆ ದುರಸ್ತಿ ಮಾಡಿಸುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟಿದ್ದಾರೆ. ಆದರೆ, ಪ್ರತಿ ಬಾರಿಯೂ ಅನುದಾನದ ಕೊರತೆಯ ಕುಂಟುನೆಪ ಹೇಳುತ್ತಾ, ರಸ್ತೆ ಅಭಿವೃದ್ಧಿ ಪಡಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 3 ಗ್ರಾಮಗಳು ಸೇರಿ ಏಳೆಂಟು ಬಡಾವಣೆಗಳ ಜನರು ವ್ಯಾಪಾರ ವಹಿವಾಟಿಗಾಗಿ ಈ ರಸ್ತೆಯನ್ನು ಬಳಸುತ್ತಾರೆ. ಅವರೆಲ್ಲರ ಹಿತದೃಷ್ಟಿಯಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ನಗರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಭಕ್ತನಪಾಳ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾಕಷ್ಟು ಬಾರಿ ನಗರಸಭೆ ಅಧಿಕಾರಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಕೆಲ ಸಾರ್ವಜನಿಕರು ಜನಪ್ರತಿನಿಧಿಗಳಾದ ನಮ್ಮ ಸಮಸ್ಯೆ ಪರಿಹಾರಿಸಲು ಒತ್ತಾಯಿಸುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸಿಗದೆ ಸಮಸ್ಯೆ ಸ್ಪಂದಿಸಸಲಾಗದ ಪರಿಸ್ಥಿತಿ ಎದುರಾಗಿದೆ.
    ಎನ್.ಗಣೇಶ್
    ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts