More

    ಗಿರಿ ನಗರದಲ್ಲಿ ದಾದಾಗಿರಿ

    ಹುಬ್ಬಳ್ಳಿ: ಮುಸ್ಸಂಜೆ ಹೊತ್ತಲ್ಲಿ ಕಳ್ಳತನಕ್ಕೆ ಯತ್ನಿಸಿದ ಪುಂಡರನ್ನು ಪ್ರಶ್ನಿಸಿದ ಅಣ್ಣ- ತಂಗಿ ಮೇಲೆ ಹಲ್ಲೆ ಮಾಡಿ ಅವರ ಬೈಕ್ ಸುಟ್ಟು ಹಾಕಿ ಸಂಘಟಿತ ಪುಂಡಾಟ ಪ್ರದರ್ಶಿಸಿ, ಭಾರಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ಮುರಾರ್ಜಿ ನಗರ ಬಳಿಯ ಗಿರಿ ನಗರದಲ್ಲಿ ಭಾನುವಾರ ನಡೆದಿದೆ.

    ವಿನಯ ದೇಸಾಯಿ ಹಾಗೂ ಸಹೋದರಿ ಅರ್ಚನಾ ದೇಸಾಯಿ ಹಲ್ಲೆಗೀಡಾದವರು. ವಿನಯ ಮನೆ ಬಳಿ ಅವರ ದೊಡ್ಡಪ್ಪನ ಮನೆ ನಿರ್ಮಾಣ ಕಾಮಗಾರಿ ನಡೆದಿದೆ. ನಿರ್ಮಾಣ ಹಂತದ ಮನೆಗೆ ನುಗ್ಗಿದ್ದ ಐದಾರು ಪುಂಡರು ನೀರಿನ ಪಂಪ್ ಕಳ್ಳತನಕ್ಕೆ ಯತ್ನಿಸಿದ್ದರು. ಅದನ್ನು ಪ್ರಶ್ನಿಸಿದ ವಿನಯ ಮತ್ತು ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದರು. ಅವರು ಯಾರು, ಯಾವ ಕಡೆ ಹೋಗುತ್ತಾರೆ ಎಂದು ತಿಳಿದುಕೊಳ್ಳಲು ಹಿಂಬಾಲಿಸಿಕೊಂಡು ಹೋಗಿದ್ದ ವಿನಯ ಮತ್ತು ಅರ್ಚನಾರ ಮೇಲೆ ಪುಂಡರು ಪೂರ್ವನಿಯೋಜಿತ ರೀತಿಯಲ್ಲಿ ಕಟ್ಟಿಗೆಯಿಂದ ಹಲ್ಲೆ ನಡೆಸಿದರು. ನಂತರ ಬೈಕ್ ಸುಟ್ಟು, ಅದರ ಮೇಲೆ ಕಲ್ಲು ಎತ್ತಿ ಹಾಕಿ ಹೋಗಿದ್ದಾರೆ.

    ಘಟನೆಯಲ್ಲಿ ವಿನಯ ದೇಸಾಯಿ ತಲೆಗೆ ಹಾಗೂ ಅರ್ಚನಾರ ಕೈಗೆ ಪೆಟ್ಟಾಗಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೈಕ್ ಸಂಪೂರ್ಣ ಹಾಳಾಗಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ನಗರದ ಹೊರ ವಲಯದಂತಿರುವ ಗಿರಿ ನಗರ ಸುತ್ತಮುತ್ತ ಕೆಲ ಪುಂಡರ ಗುಂಪು ಮೋಜು ಮಸ್ತಿಗೆಂದು ಬರುತ್ತದೆ. ಮುಸ್ಸಂಜೆಯಾಗುತ್ತಿದ್ದಂತೆ ಸಭ್ಯ ಜನರು, ಮಹಿಳೆಯರು ಓಡಾಡದಂತಾಗಿದೆ. ಸೂಕ್ತ ರಸ್ತೆ, ಬೀದಿ ದೀಪ ವ್ಯವಸ್ಥೆ ಇಲ್ಲದೆ ಇರುವುದು ಅಪಾಪೋಲಿಗಳು, ಪುಡಿ ರೌಡಿಗಳಿಗೆ ತಮ್ಮ ಕುಕೃತ್ಯ ಎಸಗಲು ಹೆಚ್ಚು ಅನುಕೂಲವಾಗಿದೆ. ಇನ್ನಾದರೂ ಪಾಲಿಕೆ ಈ ಭಾಗದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಪೊಲೀಸರು ಸೂಕ್ತ ಭದ್ರತೆ ನೀಡಬೇಕಿದೆ.

    ಪೊಲೀಸ್ ಚೌಕಿ ಆರಂಭಕ್ಕೆ ಆಗ್ರಹ
    ಮುರಾರ್ಜಿ ನಗರ, ಗಿರಿ ನಗರ ಸುತ್ತಮುತ್ತ ಸಾವಿರಾರು ಮನೆಗಳು ನಿರ್ವಣವಾಗಿವೆ. ಈ ಭಾಗದಲ್ಲಿ ಇತ್ತೀಚೆಗೆ ಪಟಿಂಗರ ಹಾವಳಿ ಹೆಚ್ಚಾಗಿದೆ. ಈ ಹಿಂದೆ ಮಾಜಿ ಸೈನಿಕರೊಬ್ಬರ ಮನೆಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಅದಾದ ಬಳಿಕ ಹಳೇ ಹುಬ್ಬಳ್ಳಿ ಠಾಣೆಯ ಅಂದಿನ ಇನ್ಸ್​ಪೆಕ್ಟರ್ ನಡುವಿನಮನಿ ಅವರು ಗಿರಿ ನಗರ ಬಳಿ ಪೊಲೀಸ್ ಚೌಕಿ ಆರಂಭಿಸಿದ್ದರು. ಕೆಲ ತಿಂಗಳ ಬಳಿಕ ಅದು ಮುಚ್ಚಲ್ಪಟ್ಟಿತು. ಅದರಿಂದಾಗಿ ದುಷ್ಟಶಕ್ತಿಗಳು, ದಾರಿ ತಪ್ಪಿದವರ ಹಾವಳಿ ಮತ್ತೆ ಹೆಚ್ಚಾಗಿದೆ. ಹಾಗಾಗಿ, ಮತ್ತೆ ಪೊಲೀಸ್ ಚೌಕಿ ಆರಂಭಿಸಬೇಕು. ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts