More

    ಗಿಡ ನೆಡುವ ಹೆಸರಲ್ಲಿ ಬೇಕಾಬಿಟ್ಟಿ ಗುಂಡಿ

    ರೋಣ: ಪಟ್ಟಣದ ತಾಪಂ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರು ಕೇಳಿದ ಮಾಹಿತಿ ಅಧಿಕಾರಿಗಳು ನೀಡದಿರುವುದು, ಅಧಿಕಾರಿಗಳಿಗೆ ಮತ್ತೆ ಕಾಲಾವಕಾಶ ನೀಡುವುದು ಹೀಗೆ ‘ಅದೇ ರಾಗ ಅದೇ ಹಾಡು’ ಪುನರಾವರ್ತನೆಯಾದಂತಿತ್ತು.

    ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ತಾಲೂಕು ಅಧಿಕಾರಿ ಅಶೋಕ ಪವಾಡಿಗೌಡ್ರ ತಮ್ಮ ಪ್ರಗತಿ ವರದಿ ನೀಡಲು ಮುಂದಾದಾಗ ಸದಸ್ಯ ಪ್ರಭು ಮೇಟಿ ಮಧ್ಯ ಪ್ರವೇಶಿಸಿದರು. ಸಾಮಾಜಿಕ ಅರಣ್ಯ ಇಲಾಖೆಯಿಂದ ನನ್ನ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಇಟಗಿ ಗ್ರಾಮದಿಂದ ಮುಗಳಿ ಗ್ರಾಮದವರೆಗೆ ಗಿಡ ನೆಡಲು ತಗ್ಗು ಗುಂಡಿ ತೆಗೆಸಿರುವುದಕ್ಕೆ 1.47 ಲಕ್ಷ ರೂ. ಖರ್ಚು ಹಾಕಲಾಗಿದೆ. ಆದರೆ, ತಗ್ಗು- ಗುಂಡಿಗಳನ್ನು ಜೆಸಿಬಿ ಹಚ್ಚಿ ಬೇಕಾಬಿಟ್ಟಿ ತೆಗೆಯಲಾಗಿದೆ ಎಂದು ಮೇಟಿ ಅವರು ಅರಣ್ಯಾಧಿಕಾರಿ ಪವಾಡಿಗೌಡ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಇದಕ್ಕೆ ಉತ್ತರಿಸಿದ ಪವಾಡಿಗೌಡ್ರ, ಹಾಗೇನೂ ನಡೆದಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಗರಂ ಆದ ಪ್ರಭು, ಈಗಲೇ ಇಟಗಿ ಗ್ರಾಮದಿಂದ ಮುಗಳಿ ಗ್ರಾಮದವರೆಗೆ ತೆಗೆಸಲಾಗಿರುವ ಗುಂಡಿಗಳನ್ನು ನೋಡಿ ಬರೋಣ ಅವೆಲ್ಲವೂ ಸರಿಯಾಗಿಲ್ಲ ಎಂದರು. ಆಗ, ತಡಬಡಿಸಿದ ಅರಣ್ಯಾಧಿಕಾರಿ, ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಉತ್ತರಿಸಿದರು. ಆಗ ಮತ್ತಷ್ಟು ಗರಂ ಆದ ಪ್ರಭು, ಇವರು ಮಾಡಿದ ಭ್ರಷ್ಟಾಚಾರ ಒಪ್ಪಿಕೊಂಡಂತಾಗಿದೆ. ಇವರ ಮೇಲೆ ಶಿಸ್ತು ಕ್ರಮಕ್ಕೆ ಈಗಲೇ ಠರಾವು ಮಾಡಿ ಮೇಲಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಸೂಚಿಸಿದರು.

    ತಾಲೂಕಿನ ಕಳಕಾಪೂರ ಗ್ರಾಮಸ್ಥರು ತಮ್ಮ ಪಡಿತರ ತರಲು ಮೂರು ಕಿಮೀ ನಡೆದು ನಿಡಗುಂದಿ ಗ್ರಾಮಕ್ಕೆ ಹೋಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ವರ್ಷ ಕಳಕಾಪೂರದಲ್ಲಿ ನಡೆದಿದ್ದ ಜನಸ್ಪಂದನ ಸಭೆಯಲ್ಲಿಯೇ ಸೂಚಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪ್ರಭು ಅಸಹಾಯಕತೆ ತೋಡಿಕೊಂಡರು. ಪ್ರತಿಕ್ರಿಯಿಸಿದ ಆಹಾರ ವಿಭಾಗದ ಶಿರಸ್ತೇದಾರ್ ಎಸ್.ಕೆ. ನಿಲೂಗಲ್ ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಆಗ ಪ್ರಭು ಅವರು, ಅಲ್ಲಿ 400 ಪಡಿತರ ಚೀಟಿದಾರರಿದ್ದು, ಅವರ ಅನುಕೂಲಕ್ಕಾಗಿ ಹೊಸ ಪಡಿತರ ಅಂಗಡಿ ಸ್ಥಾಪಿಸಿ ಎಂದು ಆಗ್ರಹಿಸಿದರು.

    ತಾಪಂ ಇಒ ಅಧಿಕಾರಿ ಸಂತೋಷ ಪಾಟೀಲ, ತಾಪಂ ಉಪಾಧ್ಯಕ್ಷೆ ಇಂದ್ರಾ ತೇಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೂಪಾಕ್ಷಗೌಡ ಪಾಟೀಲ, ಇತರರಿದ್ದರು.

    ಅವರು ಕೇಳಲಿಲ್ಲ.. ಇವರು ಹೇಳಲಿಲ್ಲ!

    ತಾಲೂಕಾಸ್ಪತ್ರೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ತಾಪಂ ಸದಸ್ಯ ಜಗದೀಶ ಬ್ಯಾಡಗಿ ತಾಲೂಕು ವೈದ್ಯಾಧಿಕಾರಿ ಡಾ ಬಿ.ಎಸ್. ಭಜಂತ್ರಿ ಅವರನ್ನು ಕಳೆದ ತಾಪಂ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಾ. ಭಜಂತ್ರಿ ಮುಂದಿನ ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳಿದ್ದರು. ಆದರೆ, ಈ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸದಸ್ಯ ಬ್ಯಾಡಗಿ ಅವರು ತಾಲೂಕು ವೈದ್ಯಾಧಿಕಾರಿ ಭಜಂತ್ರಿಯವರನ್ನು ಯಾವುದೇ ಪ್ರಶ್ನೆ ಕೇಳದಿರುವುದು ಮತ್ತು ಭಜಂತ್ರಿಯವರೂ ಯಾವುದೇ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts