More

    ಗಿಡದಲ್ಲೇ ಮೊಳಕೆಯೊಡೆಯುತ್ತಿದೆ ಹೆಸರು

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
    ಮುಂಗಾರಿನ ಬಹುತೇಕ ಬೆಳೆಗಳು ಮಳೆರಾಯನ ಕೋಪಕ್ಕೆ ತುತ್ತಾಗಿವೆ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
    40 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಕೊಯ್ಲಿಗೆ ಬಂದಿರುವ ಹೆಸರು ಗಿಡದಲ್ಲಿಯೇ ಮೊಳಕೆಯೊಡೆಯುತ್ತಿದೆ. ಕಾಯಿಯಲ್ಲಿನ ಕಾಳು ಸತತ ಮಳೆಯಿಂದ ಮೊಳಕೆಯೊಡೆದು ಹಾಳಾಗುತ್ತಿದೆ. ರೈತನ ಪಾಲಿನ ಬೆಳೆ ಮತ್ತೆ ಭೂಮಿ ಪಾಲಾಗುತ್ತಿದೆ. ಇದರಿಂದ ವಾಣಿಜ್ಯ ಬೆಳೆ ಸಂಪೂರ್ಣ ಕೈಕೊಟ್ಟಿದ್ದು ರೈತರು ಚಿಂತೆಗೀಡಾಗಿದ್ದಾರೆ.
    ತಾಲೂಕಿನಲ್ಲಿ ಲಕ್ಷೆ್ಮೕಶ್ವರ ಸೇರಿ ದೊಡ್ಡೂರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಯಳವತ್ತಿ, ಮಾಡಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರ, ರಾಮಗೇರಿ, ಬಸಾಪುರ, ಒಡೆಯರ ಮಲ್ಲಾಪುರ, ಗೋನಾಳ ಸೇರಿ ಒಟ್ಟು 4150 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಜುಲೈ ಮತ್ತು ಆಗಸ್ಟ್​ನಲ್ಲಿ ಅತಿಯಾದ ಮಳೆಯಿಂದ ಬೆಳೆ ನೆಲದ ಪಾಲಾಗಿದೆ. ಕೃಷಿ ಇಲಾಖೆ ಮಾಹಿತಿಯನ್ವಯ ಜುಲೈ ತಿಂಗಳಲ್ಲಿ ಸರಾಸರಿಗಿಂತ ಶೇ.106ರಷ್ಟು ಮಳೆ ಹೆಚ್ಚಳವಾದರೆ, ಆಗಸ್ಟ್ 10ರವರೆಗೆ ಸರಾಸರಿಗಿಂತ ಶೇ. 500ರಷ್ಟು ಹೆಚ್ಚು ಮಳೆಯಾಗಿ ಜಮೀನುಗಳು ಜವುಳಾಗಿವೆ.
    ತಿಂಗಳಿಂದ ಜಮೀನಿನಲ್ಲಿ ಕೆಲಸ ಮಾಡಲು, ಎಡೆ ಹೊಡೆಯಲು, ಕಳೆ ತೆಗೆಯಲು ಬರದಂತಾಗಿ ಕಸ ಬೆಳೆದು ಜಮೀನುಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿ ತಲುಪಿವೆ. ಹೆಸರು ಬೆಳೆಯಷ್ಟೇ ಅಲ್ಲದೆ, ಶೇಂಗಾ, ಹತ್ತಿ, ಉದ್ದು, ಸೋಯಾಬೀನ್, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳೂ ಹಾಳಾಗಿ ಮುಂಗಾರು ಕೈಕೊಡುವ ಪರಿಸ್ಥಿತಿ ನಿರ್ವಣವಾಗಿದೆ.
    ಮುಂಗಾರಿನಲ್ಲಿ ರೈತರ ಕೈ ಸೇರುವ ಮೊದಲ ಬೆಳೆಯೇ ಹೆಸರು, ಅತಿವೃಷ್ಟಿಯಿಂದಾಗಿ ಸಂಪೂರ್ಣ ಹಾನಿಗೀಡಾಗಿದ್ದು ‘ಮೊದಲ ತುತ್ತಿಗೆ ಹಳ್ಳು’ ಎನ್ನುವ ಸ್ಥಿತಿ ರೈತರದ್ದಾಗಿದೆ. ಈ ವರ್ಷ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರಿಗೆ 7,755 ರೂ. ಬೆಂಬಲ ಬೆಲೆ ಘೊಷಣೆ ಮಾಡಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ್ಲುೂ ಉತ್ತಮ ಬೆಲೆ ಇದೆ. ಆದರೆ, ಕಟಾವಿಗೆ ಬಂದ ಬೆಳೆಯನ್ನು ಕಟಾವು ಮಾಡಲು ಮಳೆ ಬಿಡುವು ಕೊಡುತ್ತಿಲ್ಲ. ಇದರಿಂದ ಹೆಸರು ಗಿಡದಲ್ಲಿಯೇ ಮೊಳಕೆಯೊಡೆದು ಹಾಳಾಗುತ್ತಿದೆ.

    ಕಳೆದ ಒಂದು ತಿಂಗಳಿಂದ ಜಮೀನಿನಲ್ಲಿ ಕಾಲಿಡದಂತಹ ಪರಿಸ್ಥಿತಿ ನಿರ್ವಣವಾಗಿದೆ. ಹೆಸರಿಗೆ ಉತ್ತಮ ಬೆಲೆ ಇರುವುದನ್ನು ಮನಗಂಡು ಬೀಜ ಬಿತ್ತನೆ ಮಾಡಿ ರೋಗಬಾಧೆಯಿಂದ ಸಂರಕ್ಷಿಸಲಾಗಿದೆ. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭೂಮಿ ಪಾಲಾಗಿದೆ. ಹೀಗಾದರೆ, ನಾವು ಹೇಗೆ ಬದುಕಬೇಕು ಎಂಬುದು ತಿಳಿಯದಂತಾಗಿದೆ. ಆದ್ದರಿಂದ ಸರ್ಕಾರ ಅತಿವೃಷ್ಟಿ ಪರಿಹಾರ ಯೋಜನೆಯಡಿ ಹೆಸರು ಸೇರಿ ಮುಂಗಾರಿನಲ್ಲಿ ಹಾನಿಗೀಡಾದ ಎಲ್ಲ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂ. ಪರಿಹಾರ ನೀಡಬೇಕು.
    |ಭರತ ಪಾಟೀಲ, ವಿರೂಪಾಕ್ಷಪ್ಪ ಆದಿ ರೈತರು


    ಬೆಳೆಗಳಲ್ಲಿ ನೀರು ನಿಂತು ಹಾಗೂ ತೇವಾಂಶ ಹೆಚ್ಚಳದಿಂದ ಕೊಳೆ ರೋಗದಿಂದ ಬೆಳೆ ಹಾಳಾಗಿದೆ. ಈಗಾಗಲೇ ಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ಮಾಹಿತಿ ನೀಡಿದ್ದೇವೆ. ಅದರಲ್ಲಿ ಅಂದಾಜು 3000 ಹೆಕ್ಟೇರ್ ಪ್ರದೇಶದ ಹೆಸರು ಬೆಳೆ ಹಾಳಾಗಿರುವ ಬಗ್ಗೆ ವರದಿ ನೀಡಲಾಗಿದೆ. ಕಳೆದ ಒಂದು ವಾರದಿಂದ ಬೆಳೆ ಹಾನಿ ಪರಿಶೀಲನೆ ನಡೆಸಿ ಮಾಹಿತಿ ನೀಡುವ ಪ್ರಕ್ರಿಯೆ ನಡೆದಿದೆ.
    | ಚಂದ್ರಶೇಖರ ನರಸಮ್ಮನವರ, ಕೃಷಿ ಸಹಾಯಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts