More

    ಮತದಾರರು ತಮ್ಮ ಹೆಸರು ಪರಿಶೀಲಿಸಿಕೊಳ್ಳಿ; ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ

    ಹಾವೇರಿ: ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಪರಿಶೀಲಿಸಿಕೊಳ್ಳಲು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
    ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಮಾಹಿತಿಯನ್ನು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ, ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
    1482 ಮತಗಟ್ಟೆ…
    ಜಿಲ್ಲೆಯಲ್ಲಿ 1,482 ಮತಗಟ್ಟೆಗನ್ನು ಸ್ಥಾಪಿಸಲಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ 243, ಶಿಗ್ಗಾಂವಿ ಕ್ಷೇತ್ರದಲ್ಲಿ 241, ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ 261, ಬ್ಯಾಡಗಿ ಕ್ಷೇತ್ರದಲ್ಲಿ 242, ಹಿರೇಕೆರೂರು ಕ್ಷೇತ್ರದಲ್ಲಿ 229 ಹಾಗೂ ರಾಣೆಬೆನ್ನೂರ ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
    13.10 ಲಕ್ಷ ಮತದಾರರು…
    ಜಿಲ್ಲೆಯಲ್ಲಿ ಜ. 22ರ ಅಂತಿಮ ಮತದಾರರ ಪಟ್ಟಿ ಅನುಸಾರ 6,66,745 ಪುರುಷ, 6,43,645 ಮಹಿಳಾ ಹಾಗೂ 41 ಜನ ತೃತೀಯ ಲಿಂಗಿಗಳು ಸೇರಿ 13,10,413 ಮತದಾರರಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ 1,08,956 ಪುರುಷ, 1,04,336 ಮಹಿಳಾ ಹಾಗೂ 6 ಜನ ತೃತೀಯ ಲಿಂಗಿಗಳು ಸೇರಿ 2,13,298 ಮತದಾರರು, ಶಿಗ್ಗಾಂವ ಕ್ಚೇತ್ರದಲ್ಲಿ 1,18,024 ಪುರುಷ, 1,12,031 ಮಹಿಳಾ ಹಾಗೂ 8 ಜನ ತೃತೀಯ ಲಿಂಗಿಗಳು ಸೇರಿ 2,30,063 ಮತದಾರರು, ಹಾವೇರಿ(ಎಸ್‌ಸಿ) ಕ್ಷೇತ್ರದಲ್ಲಿ 1,19,724 ಪುರುಷ, 1,15,107 ಮಹಿಳಾ ಹಾಗೂ 9 ಜನ ತೃತೀಯ ಲಿಂಗಿಗಳು ಸೇರಿ 2,34,840 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
    ರಾಜಕೀಯ ಪಕ್ಷವಾರು ಬೂತ್ ಮಟ್ಟದ ಏಜೆಂಟರುಗಳ ಪಟ್ಟಿಗಳನ್ನು ನೀಡಬೇಕು. ಬೂತ್ ಮಟ್ಟದ ಅಧಿಕಾರಿಗಳ ಸಂಪರ್ಕಮಾಡಿ ವಾರ್ಡ್‌ವಾರು ಮತಗಟ್ಟೆ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಬೇಕು. ಹೆಸರುಗಳ ತಿದ್ದುಪಡಿ, ಮಾರ್ಪಾಡುಗಳಿದ್ದರೆ ಮಾಹಿತಿ ನೀಡಬೇಕು. ಈ ಕುರಿತು ಸಾರ್ವಜನಿಕರಿಗೆ ಅರಿವು ಮತ್ತು ತಿಳವಳಿಕೆ ನೀಡಲು ತಿಳಿಸಿದರು.
    ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳ ವಿವರ, ಯುವ ಮತದಾರರು, ಸೇವಾ ಮತದಾರರು, ಅಂಗವಿಕಲ ಮತದಾರರು ಹಾಗೂ ಜಿಲ್ಲೆಯಲ್ಲಿರುವ ಪುರುಷ, ಮಹಿಳೆ ಹಾಗೂ ಇತರ ಒಳಗೊಂಡಂತೆ ಜಿಲ್ಲೆಯ ಒಟ್ಟು ಮತದಾರರ ವಿವರವನ್ನು ನೀಡಿದ ಅವರು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ 1482 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಹಾಗೂ ಪ್ರತಿ 10 ಮತಗಟ್ಟೆಗೆ ಓರ್ವ ಮೇಲ್ವಿಚಾರಕರನ್ನು ಮತದಾರರ ಪಟ್ಟಿ ತಯಾರಿಕೆಗೆ ನಿಯೋಜನೆ ಮಾಡಿ ಕ್ರಮಕೈಗೊಳ್ಳಲಾಗಿದೆ ಎಂದರು.
    ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ ವಿ.ಎಚ್.ಎ(ವೋಟರ್ ಹೆಲ್ಪ್‌ಲೈನ್ ಆಪ್) ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ, ಇಲ್ಲದಿರುವವರ ಬಗ್ಗೆ ಪರಿಶೀಲಿಸಿಕೊಳ್ಳಲು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಡಿಮೆಗೊಳಿಸಲು, ತಿದ್ದುಪಡಿ ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಮಾಡಿಕೊಳ್ಳಲು ಹಾಗೂ ತಮ್ಮ ಹೆಸರು ಅರ್ಹತಾ ದಿನಾಂಕ 01-04-2024ಕ್ಕೆ 18 ವರ್ಷ ಪೂರ್ಣಗೊಂಡಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ತಿದ್ದುಪಡಿ, ವರ್ಗಾವಣೆ ಅಥವಾ ಹೆಸರು ಇಲ್ಲದಿರುವುದು ಅಥವಾ ತಮ್ಮ ಕುಟುಂಬದ ಸದಸ್ಯರು ಮರಣಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಮುಂದುವರೆದಿದ್ದರೆ ಕೈಬಿಡುವ ಕುರಿತಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತಿಳಿಸಿದರು.
    ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 18 ರಿಂದ 19 ವರ್ಷದ 36,965 ಯುವ ಮತದಾರರಿದ್ದು, ಅರ್ಹ ದಿನಾಂಕ 01-04-2024ಕ್ಕೆ 18 ಪೂರ್ಣಗೊಂಡಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅರ್ಹ ಯುವ ಮತದಾರರು ಹೊಸದಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಮಾಡಿಕೊಳ್ಳು ಸ್ವೀಪ್ ಮೂಲಕ ವ್ಯಾಪಕ ಪ್ರಚಾರಕೈಗೊಂಡು ಅರ್ಹ ಯುವ ಮತದಾರರ ಸೇರ್ಪಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಬಿಜೆಪಿ, ಕಾಂಗ್ರೆಸ್, ಜನತಾದಳ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts