More

    ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತ


    ಬಂಕಾಪುರ: ಪಟ್ಟಣದಲ್ಲಿ ಗುರುವಾರ ಸಂಜೆ ಕೇವಲ 3 ನಿಮಿಷ ಬೀಸಿದ ಭಾರಿ ಗಾಳಿ- ಮಳೆಗೆ ಜನರ ಬದುಕು ಮೂರಾಬಟ್ಟೆಯಾಗಿದೆ.

    ನೆರೆ ಮತ್ತು ಲಾಕ್​ಡೌನ್ ಸಂಕಷ್ಟದಲ್ಲಿದ್ದ ರೈತರು, ಕೂಲಿ ಕಾರ್ವಿುಕರು ಮತ್ತು ವ್ಯಾಪಾರಸ್ಥರನ್ನು ಗುರುವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ನೂರಾರು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಮನೆಯಲ್ಲಿದ್ದ ದವಸ ಧಾನ್ಯ, ದಿನಸಿ ವಸ್ತುಗಳು ನೀರು ಪಾಲಾಗಿವೆ. ಕಟಾವಿಗೆ ಬಂದಿದ್ದ ಮಾವು, ಬಾಳೆ, ಚಿಕ್ಕು ನೆಲಕ್ಕುರುಳಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ಸುಂಕದಕೇರಿಯ ಅಂಗನವಾಡಿ ಕೇಂದ್ರದ ಮೇಲೆ ಬೃಹತ್ ಮರ ಬಿದ್ದು ದಾಖಲಾತಿ, ರೇಷನ್ ನೀರು ಪಾಲಾಗಿದೆ. ಬಂಕಾಪುರ ಪಟ್ಟಣ ಒಂದರಲ್ಲೇ ಎರಡು ಪರಿವರ್ತಕ ಸೇರಿ 82 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಗಳ ಮೇಲ್ಛಾವಣಿ ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು 25ಕ್ಕೂ ಅಧಿಕ ಕಂಬಗಳು ಬಾಗಿವೆ. ಹಲವು ಕಡೆ ವಿದ್ಯುತ್ ತಂತಿ ತುಂಡಾಗಿ ಮನೆ, ರಸ್ತೆಗಳ ಮೇಲೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ 20 ಲಕ್ಷ ರೂ.ಗೂ ಅಧಿಕ ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಅಂದಾಜಿಸಿದ್ದಾರೆ. ಪಟ್ಟಣದಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಬಂಕಾ ಪುರ, ಕುಂದೂರ, ಹೋತನಹಳ್ಳಿ, ಹಳೇ ಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಬಾಡ ಸೇರಿ ಅನೇಕ ಗ್ರಾಮಗಳಲ್ಲಿ ನೂರಾರು ಎಕರೆ ವ್ಯಾಪ್ತಿಯಲ್ಲಿನ ಕಟಾವಿಗೆ ಬಂದಿದ್ದ ಮಾವಿನ ಬೆಳೆ, ಬಾಳೆ, ಹಸಿಮೆಣಸಿನಕಾಯಿಗಳಂತಹ ತೋಟಗಾರಿಕೆ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಕುಂದೂರ ಗ್ರಾಮದ ಬಾಪುಗೌಡ ಪಾಟೀಲ, ಬಸವರಾಜ ಬಾಡದ ಅವರ ಬಾಳೆ ಬೆಳೆ, ಹೋತನಹಳ್ಳಿಯ ಬಸವಂತಪ್ಪ ಕೆಮ್ಮನಕೇರಿ, ಹುಲಿಕಟ್ಟಿಯ ಮಂಜಪ್ಪ ಗಡ್ಡೆ, ಹನುಮಂತಪ್ಪ ಪೂಜಾರ, ಶಿವಲಿಂಗಪ್ಪ ಕೊಳಲ, ಶಿಡ್ಲಾಪುರ ಗ್ರಾಮದ ಮುತ್ತಪ್ಪ ಕಲಕಟ್ಟಿ, ಪರಸಪ್ಪ ದೊಡಮನಿ ಅವರ ಪೇರಲ, ಬಾಳೆ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ.

    ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವನಗೌಡ, ಜಿಲ್ಲಾಧಿಕಾರಿ ಬಾಜಪೈ ಭೇಟಿ
    ಬಂಕಾಪುರ:
    ಪಟ್ಟಣದಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಜಿಪಂ ಅಧ್ಯಕ್ಷ ಬಸವನಗೌಡ ದೇಸಾಯಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಅರಳೆಲೆಮಠದ ಆವರಣದಲ್ಲಿ ನೆಲಕ್ಕುರುಳಿದ 15ಕ್ಕೂ ಹೆಚ್ಚು ತೆಂಗು, ಬೇವಿನಮರ, ಬಳಿಕ ಸುಂಕದಕೇರಿ ಬಳಿ ನೆಲಕಚ್ಚಿದ ವಿದ್ಯುತ್ ಟಿಸಿ ವೀಕ್ಷಿಸಿದರು. ಕುಂಬಾರ ಓಣಿ, ಆಸಾರ ಹತ್ತಿರ ಹಾರಿ ಹೋದ ಮನೆ ಮೇಲ್ಛಾವಣಿ ಪರಿಶೀಲಿಸಿದರು. ದಾರಿಯುದ್ದಕ್ಕೂ ವಿದ್ಯುತ್ ತಂತಿ ಹರಿದು ಬಿದ್ದು ಸಂಚಾರಕ್ಕೂ ತೊಂದರೆ ಉಂಟಾಗಿದ್ದನ್ನು ಗಮನಿಸಿದರು.
    20 ಸಾವಿರ ರೂ. ತ್ವರಿತ ಪರಿಹಾರ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಬಂಕಾಪುರ ಸೇರಿ ತಾಲೂಕಿನಲ್ಲಿ ಹಾನಿಗೊಳಗಾದ ಮನೆ, ಬೆಳೆ ವರದಿ ಆಧರಿಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮನೆ ಕಳೆದುಕೊಂಡವರಿಗೆ ತ್ವರಿತವಾಗಿ 20 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪಿಎಸ್​ಐ ಸಂತೋಷ ಪಾಟೀಲ, ಪುರಸಭೆ ಮಾಜಿ ಸದಸ್ಯ ಮಹ್ಮದಗೌಸ ಗುಲ್ಮಿ, ಹೊನ್ನಪ್ಪ ಹೂಗಾರ, ಮಂಜುನಾಥ ತಿಮ್ಮಾಪುರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದ ಹುಸೇನ ಖತೀಬ್, ಎಂ.ಎ. ಖಾಜಿ, ಬಸವರಾಜ ನಾರಾಯಣಪುರ, ರೂಪಾ ನಾಯ್ಕ, ಹೆಸ್ಕಾಂ ಅಧಿಕಾರಿ ಎನ್. ಮಾಳಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts