More

    ಗಾಳಿಮಳೆಗೆ ಜನಜೀವನ ಅಸ್ತವ್ಯಸ್ತ

    ಮೂಡಿಗೆರೆ: ಕೆಲ ದಿನಗಳು ತಗ್ಗಿದ್ದ ವರುಣಾರ್ಭಟ ಮತ್ತೆ ಮುಂದುವರಿದಿದೆ. ಮೂರು ದಿನಗಳಿಂದ ಗಾಳಿ ಆರ್ಭಟದ ಜತೆ ಧಾರಾಕಾರ ಮಳೆಯಾಗುತ್ತಿದ್ದು ನದಿ-ಹಳ್ಳಗಳು ಉಕ್ಕಿ ಹರಿಯುತ್ತಿವೆ. ಮನೆಗಳು ನೆಲಸಮವಾಗುತ್ತಿದ್ದರೆ, ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಮಳೆಯೊಂದಿಗೆ ಚಳಿಯೂ ಹೆಚ್ಚಾಗಿರುವುದರಿಂದ ಜನರಿಗೆ ಜ್ವರ ಬಾಧಿಸುತ್ತಿದೆ.

    ಉದುಸೆ ಗ್ರಾಮದ ಅರೇಹಳ್ಳಿ ಕಾಲನಿಯ ಸಣ್ಣಯ್ಯ, ಅಂಗಡಿ ಗ್ರಾಮದ ಸಿದ್ದಮ್ಮ, ಹಾಲೂರಿನ ಮಂಜುಳಾ, ಹೇರಿಕೆಯ ಸುರೇಶ್ ಎಂಬುವವರ ಮನೆ ನೆಲಸಮವಾಗಿದ್ದರೆ, ಊರುಬಗೆಯ ಸಾವಿತ್ರಮ್ಮ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಸ್ಕೆಬೈಲು, ಬಾಳೆಹೊಳೆ, ಕಜ್ಜೆಹಳ್ಳಿ, ತತ್ಕೊಳ ಗ್ರಾಮದಲ್ಲಿ ಧರೆ ಕುಸಿದು ಕಾಫಿತೋಟಕ್ಕೆ ಹಾನಿಯಾಗಿದೆ.

    ಭೂಕುಸಿತದಿಂದ ತತ್ಕೊಳ ರಸ್ತೆ ಸಂಪರ್ಕ ಕಡಿತವಾಗುವ ಆತಂಕ ಉಂಟಾಗಿದೆ. ಗೋಣಿಬೀಡು, ಹಳಸೆ, ದಾರದಹಳ್ಳಿ, ಊರುಬಗೆ, ಹೊಸ್ಕೆರೆ, ಮೇಕನಗದ್ದೆ, ಏರಿಕೆ, ಮೂಲರಹಳ್ಳಿಯಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದು ಮೆಸ್ಕಾಂ ಸಿಬ್ಬಂದಿ ದುರಸ್ತಿ ಪಡಿಸುತ್ತಿದ್ದಾರೆ. ಹೇಮಾವತಿ, ಜಪಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಗದ್ದೆ ಬಯಲಲ್ಲಿ ಹರಿಯುತ್ತಿದೆ. ಮುಗ್ರಹಳ್ಳಿ, ಹೊರಟ್ಟಿ, ಕಿತ್ತಲೆಗಂಡಿ, ಅಣಜೂರು, ಉಗ್ಗೇಹಳ್ಳಿ, ಅಂಗಡಿ ಗ್ರಾಮದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ನದಿಯ ಸಮೀಪ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ನಂದೀಪುರ 60 ಮಿಲಿ ಮೀಟರ್, ಮಾಕೋನಹಳ್ಳಿ 63, ಚಂದ್ರಾಪುರ 71, ಮೂಡಿಗೆರೆ 76, ಕೊಟ್ಟಿಗೆಹಾರ 278, ಗೋಣಿಬೀಡು 86, ಜಾವಳಿ 160, ಕಳಸ 154, ಹಿರೇಬೈಲ್ 148, ಜೇನುಬೈಲು 46, ಹೊಸಕೆರೆ 267, ಬಿಳ್ಳೂರು 172 ಮಿ.ಮೀ ಮಳೆ ದಾಖಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts