More

    ಗಾಯಗೊಂಡ ಪುತ್ರನನ್ನು ಹೊತ್ತು ತಿರುಗಿದ ಅಪ್ಪ

    ಕಾರವಾರ: ಆಂಬುಲೆನ್ಸ್​ಗೆ ಕೊಡಲು ಹಣವಿಲ್ಲದ ಕಾರಣ ಆಸ್ಪತ್ರೆಯಿಂದ ಬಿಡುಗಡೆಯಾದ ಗಾಯಾಳುವನ್ನು ಆತನ ತಂದೆ ಹೊತ್ತುಕೊಂಡು ಊರು ಸೇರಲೆತ್ನಿಸಿದ ಕರುಣಾಜನಕ ಘಟನೆ ಅಂಕೋಲಾದಲ್ಲಿ ನಡೆದಿದೆ.

    ಅಪಘಾತದಲ್ಲಿ ಸೊಂಟಕ್ಕೆ ಗಾಯವಾಗಿ ಸ್ವಾಧೀನ ಕಳೆದುಕೊಂಡಿರುವ ಅಂಕೋಲಾ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಯ ಕಲ್ಲೇಶ್ವರದ 35 ವರ್ಷದ ರಾಘವೇಂದ್ರ ಸಿದ್ದಿ ಎಂಬುವವರನ್ನು ಅವರ ತಂದೆ ಕೃಷ್ಣಾ ಸಿದ್ದಿ ಹೊತ್ತು ತಿರುಗಿದ್ದಾರೆ. ಜುಲೈ 28 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರನ್ನು ಊರಿಗೆ ಕರೆತರಲು ಆಂಬುಲೆನ್ಸ್​ಗೆ ಕೊಡಲು ಹಣವಿರಲಿಲ್ಲ. ಇದರಿಂದ ಮಗನನ್ನು ಹೊತ್ತು ಬಸ್ ಹತ್ತಿದ ತಂದೆ ಕುಮಟಾಕ್ಕೆ ಬಂದಿಳಿದಿದ್ದರು. ಒಂದು ರಾತ್ರಿ ಕುಮಟಾ ಬಸ್ ನಿಲ್ದಾಣದಲ್ಲೇ ಕಳೆದಿದ್ದರು. ಮರುದಿನ (ಜು.29 ರಂದು) ಮಗನನ್ನು ಹೊತ್ತು ಅಂಕೋಲಾ, ನಂತರ ಅರಬೈಲ್ ಬಸ್ ಏರಿದ್ದರು. ಆದರೆ, ಗುಳ್ಳಾಪುರ ಸೇತುವೆ ಮುರಿದು ಬಿದ್ದಿದ್ದರಿಂದ ಕಲ್ಲೇಶ್ವರಕ್ಕೆ ಬಸ್ ಅಥವಾ ಯಾವುದೇ ವಾಹನ ಸಂಚಾರ ಇರಲಿಲ್ಲ. ಇದರಿಂದ ತಂದೆ ಮಗನನ್ನು ಹೊತ್ತೇ ಊರು ಸೇರಲೆತ್ನಿಸಿದರು. ಆದರೆ, ಅದು ಸಾಧ್ಯವಾಗದೆ ಗುಳ್ಳಾಪುರ ಬಳಿಯ ಬಸ್ ತಂಗುದಾಣದಲ್ಲೇ ತಂದೆ ಮಗ ಇಬ್ಬರೂ ನಿತ್ರಾಣವಾಗಿ ಕುಳಿತಿದ್ದರು. ಡೋಂಗ್ರಿ ಗ್ರಾಪಂ ಪಿಡಿಒ ಗಿರೀಶ ಅವರು ಆಂಬುಲೆನ್ಸ್ ಮೂಲಕ ಇಬ್ಬರನ್ನೂ ಕ್ರಿಮ್ ಆಸ್ಪತ್ರೆಗೆ ತಲುಪಿಸಿದ್ದಾರೆ.

    ಚಿಕಿತ್ಸೆ ಪೂರ್ಣಗೊಳಿಸದೇ ಡಿಸ್ಚಾರ್ಜ್:

    ಟ್ರ್ಯಾಕ್ಟರ್ ಮೈಮೇಲೆ ಹತ್ತಿ ರಾಘವೇಂದ್ರ ಸಿದ್ದಿ ಜು.23 ರಂದು ಗಂಭೀರವಾಗಿ ಗಾಯಗೊಂಡು ಎಚ್ಚರ ತಪ್ಪಿದ್ದರು. ಕಾರವಾರ ಕ್ರಿಮ್ಸ್​ಗೆ ಸೇರಿಸಲಾಗಿತ್ತು. ಇಲ್ಲಿ ನರ ರೋಗ ತಜ್ಞರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ರೆಡ್​ಕ್ರಾಸ್ ಸಂಸ್ಥೆಯ ಮಾಧವ ನಾಯ್ಕ, ಸಚಿನ್ ನಾಯ್ಕ, ಅಲ್ತಾಫ್ ಶೇಖ್ ಇತರರ ಸಹಕಾರದೊಂದಿಗೆ ರಾಘವೇಂದ್ರ ಅವರನ್ನು ಮಂಗಳೂರಿಗೆ ಕೊಂಡೊಯ್ದು ಜು.26 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಯನ್ನು ಪೂರ್ಣ ಮಾಡದೆ ಯಾವುದೇ ಸಮರ್ಪಕ ಮಾಹಿತಿ ನೀಡದೇ ಗಂಭೀರ ಪರಿಸ್ಥಿತಿಯಲ್ಲಿದ್ದ ರಾಘವೇಂದ್ರ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂಬುದು ರಾಘವೇಂದ್ರ ತಂದೆ ಕೃಷ್ಣ ಹಾಗೂ ಸಂಬಂಧಿಕರ ಆರೋಪ.

    ಸುಳ್ಳು ಹೇಳಿ ದಾಖಲೆ

    ಕಾಡಿನಲ್ಲಿ ಗೊಬ್ಬರ ತುಂಬಲು ಹೋದಾಗ ರಾಘವೇಂದ್ರ ಸಿದ್ದಿ ಮೇಲೆ ಟ್ರ್ಯಾಕ್ಟರ್ ಹತ್ತಿತ್ತು. ಆದರೆ, ಇವರನ್ನು ಕೆಲಸಕ್ಕೆ ಪಡೆದುಕೊಂಡ ಮಾಲೀಕ ಅದನ್ನು ಮುಚ್ಚಿಟ್ಟು, ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂಬುದು ಸಿದ್ದಿ ಸಮುದಾಯದ ಪ್ರಮುಖರಾದ ಗೌರಿ ಅವರ ಆರೋಪ. ಮನೆ ಮುರಿದು ಬಿದ್ದು ರಾಘವೇಂದ್ರ ಸಿದ್ದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಗೆ ತಿಳಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts