More

    ಗರ್ಭಿಣಿಯರ ಕೋವಿಡ್ ತಪಾಸಣೆಗೆ ಸೂಚನೆ

    ಧಾರವಾಡ: ಪಾಸಿಟಿವ್ ಪ್ರಕರಣಗಳು ವರದಿಯಾಗಿರುವ ಜಿಲ್ಲೆಯ ಸೀಲ್​ಡೌನ್​ನ 1 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲ ಗರ್ಭಿಣಿಯರು ಮತ್ತು ಇತರೆ ಗುಂಪಿನ ದುರ್ಬಲ ಆರೋಗ್ಯದ ಜನರನ್ನು ಕಡ್ಡಾಯವಾಗಿ ಕೋವಿಡ್-19 ತಪಾಸಣೆಗೆ ಒಳಪಡಿಸಬೇಕು. ಈ ಕಾರ್ಯಕ್ಕೆ ಇನ್ನೂ ಎರಡು ಸ್ವ್ಯಾಬ್ ಟೆಸ್ಟಿಂಗ್ ವಾಹನಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಗಂಟಲ ಹಾಗೂ ಮೂಗಿನ ದ್ರವ ಸಂಗ್ರಹಣೆಗೆ ಕಿವಿ, ಮೂಗು, ಗಂಟಲ ತಜ್ಞರಿಂದ ತರಬೇತಿ ಪಡೆದ ವೈದ್ಯರು ಮತ್ತು ಪ್ರಯೋಗಾಲಯ ತಂತ್ರಜ್ಞರನ್ನು ಬಳಸಿಕೊಳ್ಳಬೇಕು ಎಂದರು.

    ಹುಬ್ಬಳ್ಳಿ ಮತ್ತು ಧಾರವಾಡದ ಭಾರತೀಯ ವೈದ್ಯಕೀಯ ಸಂಘದ ಸದಸ್ಯ ವೈದ್ಯರು ಸಹಕಾರ ನೀಡುವುದಾಗಿ ತಿಳಿಸಿದ್ದು, ಅವರ ನೆರವು ಪಡೆಯಬೇಕು. ಔಷಧ ಅಂಗಡಿಗಳಲ್ಲಿ ಕೆಮ್ಮು, ನೆಗಡಿ, ಜ್ವರ, ತೀವ್ರ ಉಸಿರಾಟದ ತೊಂದರೆಗಳಿಗೆ ಔಷಧಿ ಖರೀದಿಸಿದ ಗ್ರಾಹಕರ ವಿವರಗಳು ಸಿಗುತ್ತಿವೆ. ಅಂತಹ ಲಕ್ಷಣಗಳನ್ನು ಹೊಂದಿರುವ ಎಲ್ಲ ಜನರನ್ನು ಸಂರ್ಪಸಿ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

    ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಷನ್ ಬಳಕೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಮೇ 11ರವರೆಗೆ 1,91,884 ಜನರು ಆಪ್ ಡೌನ್​ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಂತರದ ಸ್ಥಾನದಲ್ಲಿ ಧಾರವಾಡ ಇದೆ. ನಮ್ಮ ಆರೋಗ್ಯ ಸ್ಥಿತಿ, ಸಮೀಪದಲ್ಲಿರುವ ಕೋವಿಡ್ ಸೋಂಕಿತರು ದೇಶದಲ್ಲಿರುವ ಒಟ್ಟು ರೋಗಿಗಳು, ಮುಂದೆ ಅನುಸರಿಸಬೇಕಾದ ಕ್ರಮಗಳು, ಇ-ಪಾಸ್ ಮತ್ತಿತರ ಮಾಹಿತಿ ಪಡೆಯಲು ಈ ಮೊಬೈಲ್ ಆಪ್ ಸಹಾಯಕಾರಿ. ಜನತೆ ಇನ್ನಷ್ಟು ಅಧಿಕ ಪ್ರಮಾಣದಲ್ಲಿ ಸಮರ್ಥವಾಗಿ ಬಳಸಬೇಕು ಎಂದು ತಿಳಿಸಿದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಡಿಎಚ್​ಒ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ್ ಮಾನಕರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts