More

    ಗರ್ಭಿಣಿಗೆ ಸೀಮಂತ ನೆರವೇರಿಸಿದ ‘ಸ್ಪಂದನಾ’

    ಬಂಕಾಪುರ: ಪ್ರೀತಿಸಿ ಮದುವೆಯಾದ ತಪ್ಪಿಗೆ ಬಂಧು- ಬಳಗದಿಂದ ದೂರವಾಗಿದ್ದ ಮಹಿಳೆಗೆ ಸ್ಥಳೀಯ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಶುಕ್ರವಾರ ಸೀಮಂತ ಕಾರ್ಯ ನೆರವೇರಿಸಿದರು.

    ಸೀಮಂತ ಕಾರ್ಯ ನೆರವೇರಿಸಲು ಹೆತ್ತವರು ಒಪ್ಪದಿದ್ದಾಗ ಸ್ಥಳೀಯ ಸ್ಪಂದನಾ ಮಹಿಳಾ ಸಾಂತ್ವನ ಕೇಂದ್ರದ ಬಳಿ ರೇಖಾ ಅರಳಿಹಳ್ಳಿ ಅಳಲು ತೋಡಿಕೊಂಡಿದ್ದಳು. ಕೇಂದ್ರದ ಸಿಬ್ಬಂದಿ ಸಂಪ್ರದಾಯದಂತೆ ಸುರಗಿ ಸುತ್ತಿ, ಅರಿಶಿಣ ಶಾಸ್ತ್ರ ಮಾಡಿ, ಹೊಸ ಬಟ್ಟೆ, ಬಳೆ, ಹೂವು, ದಂಡಿ ತೊಡಸಿ ಕಚೇರಿ ಅಕ್ಕಪಕ್ಕದ ಸುಮಂಗಲೆಯರಿಂದ ಆರತಿ ಗೈದು ಸೀಮಂತ ಮಾಡಲಾಯಿತು.

    ಸಿಡಿಪಿಒ ಅಣ್ಣಪ್ಪ ಹೆಗಡೆ, ಸ್ಪಂದನಾ ಸಂಸ್ಥೆ ಅಧ್ಯಕ್ಷ ಎಂ.ಎನ್. ಹೊನಕೇರಿ, ಗೌರಿ ಪತ್ತಾರ, ಪೈರೋಜಾ ಎನ್., ಸುಪ್ರಿಯಾ, ರೇಖಾ ಸುರಳಿಹಳ್ಳಿ, ಉಮಾ ಕೆ. ಬಿಸನೂರಮಠ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದು ಶುಭ ಹಾರೈಸಿದ್ದಾರೆ.

    ಘಟನೆ ಹಿನ್ನೆಲೆ: ಸವಣೂರ ತಾಲೂಕಿನ ಜಲ್ಲಾಪುರ ಗ್ರಾಮದ ಯುವಕ ಸೋಮನಗೌಡ ಅರಳಿಹಳ್ಳಿ, ಗ್ರಾಮದ ಬಾಲಕಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಬಾಲಕಿ ಹೆತ್ತವರಿಗೆ ಈ ಮದುವೆ ಇಷ್ಟ ಇರಲಿಲ್ಲ. ಯುವಕ ಸೇರಿ ಆತನ ಪಾಲಕರ ಮೇಲೆ ಇತ್ತೀಚೆಗೆ ದೂರು ನೀಡಿದ್ದರು. ಪೋಕ್ಸೋ ಕಾಯ್ದೆಯಡಿ ಯುವಕನ ಮೇಲೆ ಪ್ರಕರಣ ದಾಖಲಿಸಿಕೊಂಡ ಸವಣೂರ ಪೊಲೀಸರು, ಯುವಕನನ್ನು ನ್ಯಾಯಂಗ ಬಂಧನಕ್ಕೊಳಪಡಿಸಿದ್ದರು. ಬಾಲಕಿಯನ್ನು ಹಾವೇರಿ ಮಹಿಳಾ ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು.

    6 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಯುವಕ, ಗ್ರಾಮದ ಹಿರಿಯರೊಂದಿಗೆ ರಾಜಿ ಪಂಚಾಯಿತಿ ನಡೆಸಿ ಪ್ರಕರಣ ಸರಿಪಡಿಸಿಕೊಂಡಿದ್ದ.

    ಈಗ ಪತ್ನಿ ಆರು ತಿಂಗಳು ಗರ್ಭಿಣಿಯಾದ ಹಿನ್ನೆಲೆಯಲ್ಲಿ ತವರು ಮನೆಯಲ್ಲೇ ಸೀಮಂತ ಕಾರ್ಯ ನೆರವೇರಿಸಿಕೊಂಡು ಬರುವಂತೆ ಸೋಮನಗೌಡ ಕ್ಯಾತೆ ತೆಗೆದಿದ್ದಾನೆ. ಆದರೆ, ತವರು ಮನೆಯವರು ಸೀಮಂತ ಕಾರ್ಯಕ್ಕೆ ಒಪ್ಪದೇ ಇದ್ದಾಗ ನೊಂದ ಮಹಿಳೆ ಬಂಕಾಪುರದ ಸ್ಪಂದನಾ ಮಹಿಳಾ ಕೇಂದ್ರದ ಮೊರೆ ಹೋಗಿದ್ದಳು. ಇದಕ್ಕೆ ಸ್ಪಂದಿಸಿದ ಕೇಂದ್ರದ ಸಿಬ್ಬಂದಿ ಸೀಮಂತ ನೆರವೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts