More

    ಗರಿಷ್ಠ ಪ್ರಮಾಣದ ಸಾಲ ನೀಡಿ

    ಹಾವೇರಿ: ಕರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್​ಡೌನ್​ಗೊಳಗಾಗಿ ರೈತರು, ಸ್ವಯಂ ಉದ್ಯೋಗಿಗಳು, ಸ್ವ ಸಹಾಯ ಸಂಘಗಳು, ಸಣ್ಣ ವಾಣಿಜ್ಯೋದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲ ನೀಡಿಕೆ ಪ್ರಮಾಣದಲ್ಲಿ ಯಾವುದೇ ಕೊರತೆಯಾಗದಂತೆ ಬ್ಯಾಂಕರ್ಸ್​ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಹೊಸ ಸಾಲ ಯೋಜನೆ ಕುರಿತು ಸೋಮವಾರ ಅವರು ಪರಿಶೀಲನೆ ನಡೆಸಿದರು. ಹೊಸ ಸಾಲ ಯೋಜನೆಯಡಿ ಕೃಷಿ, ಸಣ್ಣ ಉದ್ಯಮಿಗಳು, ವೈಯಕ್ತಿಕ ಸಾಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿ ಯೋಜನೆಗಳು, ಪ್ರೋತ್ಸಾಹದಾಯಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಈ ಯೋಜನೆಗಳ ಬ್ಯಾಂಕ್ ವಹಿವಾಟು ಪ್ರಕ್ರಿಯೆಗೆ ಬಿಸಿನೆಸ್ ಕರೆಸ್ಪಾಂಡೆಂಟ್ (ವ್ಯವಹಾರ ಪ್ರತಿನಿಧಿ)ಗಳನ್ನು ಮನೆ ಬಾಗಿಲಿಗೆ ಚುರುಕಿನಿಂದ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದರು.

    ಪ್ರಧಾನಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಅರ್ಜಿ ಹಾಕಿದವರಿಗೆ ಗರಿಷ್ಠ ಪ್ರಮಾಣದಲ್ಲಿ ಮಂಜೂರಾತಿ ನೀಡಬೇಕು. ಸಾಲ ನೀಡುವ ಗುರಿ ಕಡಿಮೆಯಿದೆ ಎಂದು ನಿರಾಕರಿಸಬಾರದು. ವಿಶೇಷ ಸಂದರ್ಭವಾಗಿರುವುದರಿಂದ ನಿಯಮಗಳನ್ನು ಸಡಿಲಗೊಳಿಸಿ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗಗಳಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯಗಳನ್ನು ನೀಡುವಾಗ ಗರಿಷ್ಠ ಪ್ರಮಾಣದಲ್ಲಿ ನೆರವು ಒದಗಿಸಬೇಕು. ಹೆಚ್ಚು ರೈತರಿಗೆ ಕೃಷಿ ಸಾಲ ನೀಡಬೇಕು. ಎಲ್ಲ ಬ್ಯಾಂಕ್​ಗಳು ಈ ಮಾನದಂಡವನ್ನು ಅನುಸರಿಸುವಂತೆ ಸೂಕ್ತ ನಿರ್ದೇಶನ ನೀಡಿ ಎಂದರು.

    ಕೇಂದ್ರ ಸರ್ಕಾರದ ಜನ ಧನ ಯೋಜನೆಯಡಿ ಬ್ಯಾಂಕ್ ಖಾತೆಗಳು ಹೆಚ್ಚಾಗಿವೆ. ಅಗತ್ಯವಿರುವ ಕಡೆ ಬ್ಯಾಂಕ್​ಗಳ ಹೊಸ ಶಾಖೆಗಳು ಹಾಗೂ ಎಟಿಎಂಗಳನ್ನು ಆರಂಭಿಸಿ ಎಂದರು.

    ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಮಾತನಾಡಿ, ಉದ್ಯೋಗಿನಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆಯಡಿ ಬ್ಯಾಂಕ್ ಆಫ್ ಬರೋಡಾ, ಕಾಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್​ಗಳು ಸಾಲ ಮಂಜೂರಾತಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್. ಪ್ರಭುದೇವ ಅವರಿಗೆ ತಿಳಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಎಸಿ ಡಾ. ದಿಲೀಪ್ ಶಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎನ್. ಮಂಜುನಾಥ ಇತರರಿದ್ದರು.

    ಅತಿವೃಷ್ಟಿ ಪರಿಹಾರ ಶೀಘ್ರ ಒದಗಿಸಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಮನೆಹಾನಿ ಪರಿಹಾರ ಬಹಳ ಜನರಿಗೆ ದೊರೆತಿಲ್ಲ. ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ತಹಸೀಲ್ದಾರ್ ಹಂತದಲ್ಲಿಯೇ ಸಮಸ್ಯೆ ಬಗೆಹರಿಸುವ ಅಧಿಕಾರವಿದ್ದರೂ ಜಿಲ್ಲಾಧಿಕಾರಿ ನಿರ್ದೇಶನವಿಲ್ಲ ಎಂದು ವಿಳಂಬ ಮಾಡುತ್ತಿದ್ದಾರೆ. ಬಾಕಿ ಉಳಿದಿರುವ ಪರಿಹಾರ ನೀಡುವ ಪ್ರಕರಣಗಳನ್ನು ಪರಿಶೀಲಿಸಿ ಅರ್ಹರಿಗೆ ಮನೆ ನಿರ್ವಣಕ್ಕೆ ಅವಕಾಶ ಕಲ್ಪಿಸಬೇಕು. ಬೆಳೆ ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದವರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ಅರುಣಕುಮಾರ ಗುತ್ತೂರ, ವಿರೂಪಾಕ್ಷಪ್ಪ ಬಳ್ಳಾರಿ ಒತ್ತಾಯಿಸಿದರು. ಈ ಕುರಿತು ಎಲ್ಲ ಶಾಸಕರು, ತಹಸೀಲ್ದಾರ್ ಹಾಗೂ ತಾಪಂ ಇಒಗಳ ಸಭೆ ಕರೆದು ರ್ಚಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಂಸದರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts