More

    ಗರಿಗೆದರಿದ ಕೃಷಿ ಚಟುವಟಿಕೆ

    ವಿಜಯವಾಣಿ ವಿಶೇಷ ಮುಂಡಗೋಡ

    ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ಕೆಲ ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಕೆಲ ರೈತರು ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ.

    ತಾಲೂಕಿನಲ್ಲಿ ಇಲ್ಲಿವರೆಗೆ 189.9 ಮಿಮೀ ಮಳೆಯಾಗಿದೆ. ತಾಲೂಕಿನಾದ್ಯಂತ ಅಂದಾಜು 7000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈಗ ಶೇ. 5ರಷ್ಟು ಮಾತ್ರ ಒಣ ಬಿತ್ತನೆ ಕಾರ್ಯ ಮುಗಿದಿದೆ. ಕೆಲ ರೈತರು ಸ್ಥಳೀಯ ಭತ್ತವನ್ನು ಸ್ವಲ್ಪ ಮಟ್ಟಿಗೆ ಬಿತ್ತುತ್ತಿದ್ದಾರೆ. ಇಲಾಖೆಯಿಂದ ಪಡೆದ ಬೀಜಗಳನ್ನು ಯಾರೂ ಬಿತ್ತಲು ಆರಂಭಿಸಿಲ್ಲ. ಕಳೆದ ಬಾರಿ ಅತಿಯಾದ ಮಳೆಯಿಂದಾಗಿ ಮತ್ತು ನೆರೆ ಪ್ರವಾಹದಿಂದಾಗಿ ಬೆಳೆ ಹಾನಿಯಾಗಿ ಭತ್ತದ ಇಳುವರಿ ಕುಂಠಿತಗೊಂಡಿತ್ತು. ಈಗ ಒಂದೆರಡು ಬಾರಿ ಮಳೆಯಾದ ಹಿನ್ನೆಲೆಯಲ್ಲಿ ರೈತರು ಭೂಮಿ ಹದಗೊಳಿಸಿ ಒಣ ಬಿತ್ತನೆ ಆರಂಭಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡಿದರೆ, ಇನ್ನು ಕೆಲ ರೈತರಿಗೆ ಎತ್ತುಗಳೇ ಸಂಗಾತಿಯಾಗಿವೆ. ಆದರೆ, ಈವರೆಗೆ ನಿರೀಕ್ಷೆಯಂತೆ ಮಳೆಯೇನೂ ಆಗಿಲ್ಲ ಎಂಬ ಮಾತು ತಾಲೂಕಿನ ರೈತರಿಂದ ಕೇಳಿಬರುತ್ತಿದೆ.

    ಕಳೆದ ಬಾರಿ ಮಳೆ ಹೆಚ್ಚಾಗಿ ಪ್ರವಾಹ ಬಂದು ಬಹಳಷ್ಟು ಬೆಳೆ ಹಾನಿಯಾಗಿತ್ತು. ಈಗ ಬಿದ್ದಿರುವ ಮಳೆಯಿಂದಾಗಿ ಒಣ ಬಿತ್ತನೆ ಮಾಡುತ್ತಿದ್ದೇವೆ. ಎಂಟು ದಿನಗಳೊಳಗಾಗಿ ಮಳೆಯಾಗದಿದ್ದರೆ ಬೀಜಗಳು ಹುಸಿ ಹೋಗಿ ಮತ್ತೆ ಹದ ಮಾಡಿ ಪುನಃ ಬಿತ್ತನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ರೈತ ಕೇಶವ ಲಮಾಣಿ.

    ಬಿತ್ತನೆ ಗುರಿ, ಬೀಜ ದಾಸ್ತಾನು: ತಾಲೂಕಿನಲ್ಲಿ ಒಟ್ಟು 12,450 ಹೆಕ್ಟೇರ್ ಪ್ರದೇಶದ ಪೈಕಿ 6830 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗಾಗಲೇ 585 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. 5000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, 180 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 50 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಮತ್ತು 550 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. 1400 ಮೆಟ್ರಿಕ್ ಟನ್ ರಸಗೊಬ್ಬರ, 1065 ಕ್ವಿಂಟಾಲ್ ಭತ್ತದ ಬೀಜ, 360 ಕ್ವಿಂ. ಗೋವಿನಜೋಳ ಬೀಜದ ದಾಸ್ತಾನಿದೆ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ರೈತರಿಂದ ಖರೀದಿಸಿದ ಭತ್ತವನ್ನು ಬೀಜೋಪಚಾರ ಮಾಡಬೇಕು. ಜತೆಗೆ, ಹೊಲದಲ್ಲಿ ಸಾಕಷ್ಟು ತೇವಾಂಶವಿದ್ದರೆ ಬಿತ್ತನೆ ಮಾಡುವುದು ಉತ್ತಮ. ಕೃಷಿ ಇಲಾಖೆಯ ಬೀಜಗಳನ್ನು ಬಿತ್ತನೆ ಮಾಡಿದರೆ ಒಳ್ಳೆಯದು. ಭತ್ತದ ಗದ್ದೆಯ ಬದುವುಗಳ ಮೇಲೆ ತೊಗರಿ ಬೆಳೆಯುವುದರಿಂದ ಬದುವುಗಳ ಸ್ಥಿರತೆ ಯೊಂದಿಗೆ ರೈತರಿಗೆ ಆದಾಯವಾಗುವುದು. ತಗ್ಗು ಪ್ರದೇಶಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯುವುದು ಸೂಕ್ತ. | ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts