More

    ಗಮನ ಸೆಳೆದ ‘ವಿಶೇಷ ಯೋಗ ಶಿಬಿರ’

    ಬೆಳಗಾವಿ: ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶೇಷ ಉಚಿತ ಸಮಗ್ರ ಯೋಗ ಶಿಬಿರ’ ಗಮನ ಸೆಳೆಯಿತು. ಬೆಳಗ್ಗೆ 5 ರಿಂದ 7.30ರ ವರೆಗೆ ಜರುಗಿದ ಯೋಗ ಶಿಬಿರದಲ್ಲಿ ನೂರಾರು ಜನರು ಉತ್ಸಾಹದಿಂದ ಪಾಲ್ಗೊಂಡರು.

    ಯೋಗ ಶಿಬಿರದಲ್ಲಿ ಬಾಬಾ ರಾಮದೇವ ಅವರ ಶಿಷ್ಯ ಪರಮಾರ್ಥ ದೇವಜೀ ಯೋಗಿ, ಸೂರ್ಯ ನಮಸ್ಕಾರ, ಆರೋಗ್ಯ ವೃದ್ಧಿಗೆ ಸಂಬಂಧಿಸಿದ ಎಲ್ಲ ಆಸನ ಮತ್ತು ಪ್ರಾಣಾಯಾಮ ಹೇಳಿಕೊಟ್ಟರು. ಪತಂಜಲಿ ಯುವ ಭಾರತದ ಕೇಂದ್ರೀಯ ಪ್ರಭಾರಿ ಆಚಾರ್ಯ ಚಂದ್ರಮೋಹನ್ ಅವರು ಸತತ 100 ಸೂರ್ಯ ನಮಸ್ಕಾರ ಮಾಡಿದರು.

    ಬಳಿಕ ಮಾತನಾಡಿದ ಪರಮಾರ್ಥ ದೇವಜೀ, ಯೋಗದಿಂದ ರೋಗಗಳು ಹಾಗೂ ಶಾರೀರಿಕ ಮತ್ತು ಮಾನಸಿಕ ಒತ್ತಡಗಳು ದೂರಾಗುತ್ತವೆ. ಮನುಷ್ಯನ ಯಾವುದೇ ಕಾರ್ಯ ಯಶಸ್ವಿಯಾಗಿ ಸಾಗಬೇಕಾದರೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಯೋಗದಿಂದ ನಿರೋಗಿಯಾಗಿ ಬದುಕಬಹುದು. ಆದ್ದರಿಂದ ಪ್ರತಿಯೊಬ್ಬರು ಯೋಗ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಆಚಾರ್ಯ ಚಂದ್ರಮೋಹನ್ ಮಾತನಾಡಿ, ಯುವಕರು ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿರುವುದು ಕಳವಳದ ಸಂಗತಿ. ಯುವ ಜನರ ಆಚಾರ, ವಿಚಾರ, ಆಹಾರ ಪದ್ಧತಿಗಳು ಬದಲಾಗಿರುವುದರಿಂದ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಹೀಗಾಗಿ ಭಾರತೀಯ ಸಂಸ್ಕೃತಿ ಅನುಸರಿಸಬೇಕು ಎಂದರು.

    ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ, ಈ ಬಾರಿ ಬೆಳಗಾವಿ ಮಹಾನಗರದ 58 ವಾರ್ಡ್‌ಗಳಲ್ಲೂ ಪತಂಜಲಿ ಯೋಗ ಕೇಂದ್ರಗಳನ್ನು ತೆರೆದು ಜನರಿಗೆ ಉಚಿತ ಯೋಗ ತರಬೇತಿ ನೀಡುವುದಕ್ಕೆ ಸಂಕಲ್ಪ ಮಾಡಿದ್ದೇವೆ. ಕಾರ್ಯಕರ್ತರು ಈ ಬಗ್ಗೆ ಜನರಿಗೆ ಅರಿವು ಮೂಡಿಸಿ, ಯೋಜನೆ ಯಶಸ್ವಿಗೊಳಿಸಬೇಕು ಎಂದರು.

    ಪತಂಜಲಿ ಯೋಗ ಪೀಠದ ಯುವ ಭಾರತ ಸಹ ಕೇಂದ್ರೀಯ ಪ್ರಭಾರಿ ಸಚೀನ್ ಮಾತನಾಡಿದರು. ಮೋಹನ ಬಾಗೇವಾಡಿ, ಕಿರಣ ಮನ್ನೋಳರ, ಪುರುಷೋತ್ತಮ ಪಟೇಲ, ರಮೇಶ ಪಾಶ್ಚಾಪುರೆ, ಜ್ಯೋತಿಬಾ ಭಾದವಾನಕರ, ಅಮರೇಂದ್ರ ಕಾನಗೊ, ಚಂದ್ರಕಾಂತ ಖಂಡಾಗಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts