More

    ಗದ್ದೆಗಳಿಗಿಲ್ಲ ನೀರು, ಹೈರಾಣಾಗಿದ್ದಾರೆ ರೈತರು

    ರಾಜೇಂದ್ರ ಶಿಂಗನಮನೆ ಶಿರಸಿ

    ಅರೆಬಯಲು ಸೀಮೆಯಾದ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹಿಸಿ ಕೃಷಿ ಕಾರ್ಯಗಳಿಗೆ ಅನುಕೂಲವಾಗಲು ನಿರ್ವಿುಸಿದ್ದ ಬ್ಯಾರೇಜ್​ಗಳು ನಿರ್ವಹಣೆಯಿಲ್ಲದೆ, ಸಂಪೂರ್ಣ ಒಣಗಿರುವುದರಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

    ತಾಲೂಕಿನ ಬನವಾಸಿ ಭಾಗದ ಮೊಗಳ್ಳಿ, ಭಾಶಿ, ತಿಗಣಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವರದಾ ನದಿಗೆ ನಿರ್ವಿುಸಿರುವ ಬ್ಯಾರೇಜ್​ಗಳು ನೀರಿಲ್ಲದೇ ಒಣಗಿವೆ. ಚಿಕ್ಕ ನೀರಾವರಿ ಇಲಾಖೆಯ ಕಳಪೆ ನಿರ್ವಹಣೆಯೇ ಇದಕ್ಕೆ ಕಾರಣವಾಗಿದೆ. ಬಾಳೆ, ಅಡಕೆ, ಶುಂಠಿ, ಜೋಳ ಸೇರಿ ಅನೇಕ ಬೆಳೆಗಳಿಗೆ ನೀರಿಲ್ಲದೇ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

    ಅಧಿಕಾರಿಗಳ ನಿರ್ಲಕ್ಷ್ಯ: ಪ್ರತಿ ವರ್ಷ ಮಳೆ ಕಡಿಮೆ ಆಗಿ ಬೇಸಿಗೆಯಲ್ಲಿ ವರದೆ ನೀರು ಬತ್ತಿ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಕಳೆದ ಬಾರಿ ಮಳೆ ಉತ್ತಮವಾಗಿದ್ದರೂ ಬ್ಯಾರೇಜ್​ಗಳಲ್ಲಿ ನೀರು ಶೇಖರಿಸಲು ಮಾತ್ರ ಸಾಧ್ಯವಾಗಿಲ್ಲ. ಆದರೆ, ವರದಾ ನದಿಯ ಕೆಳ ಭಾಗ ಸೊರಬ ತಾಲೂಕಿನ ಬ್ಯಾರೇಜ್​ಗಳಲ್ಲಿ ಸಾಕಷ್ಟು ನೀರಿದ್ದು, ನಮ್ಮಲ್ಲಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯನದಿಂದ ನೀರು ಬತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

    ನಿರ್ವಹಣೆಯಿಲ್ಲದ ಬ್ಯಾರೇಜ್: ಬ್ಯಾರೇಜ್​ಗಳನ್ನು ಪ್ರತಿ ವರ್ಷವೂ ನಿರ್ವಹಣೆ ಮಾಡಬೇಕಾದ ಹೊಣೆ ಚಿಕ್ಕ ನೀರಾವರಿ ಇಲಾಖೆಯದ್ದಾಗಿದೆ. ಬ್ಯಾರೇಜ್ ಗೇಟ್ ಗಳಿಗೆ ಬಣ್ಣ ಬಳಿದು ಸರಿಯಾಗಿ ನಿರ್ವಹಿಸಬೇಕು. ಮಳೆಗಾಲದಲ್ಲಿ ಗಿಡ ಗಂಟೆಗಳು ಸಿಲುಕಿಕೊಂಡಲ್ಲಿ ಅದನ್ನು ತೆಗೆದು ಗೇಟ್ ಆಳವಡಿಸುವ ಕಾರ್ಯ ಮಾಡಬೇಕು. ಆದರೆ, ಈ ಬಾರಿ ಮಳೆಗಾಲದ ನಂತರ ಗಿಡ ಗಂಟೆಗಳು ಇರುವಂತೆಯೇ ಗೇಟ್ ಅಳವಡಿಕೆ ಮಾಡಿದ ಪರಿಣಾಮ ನೀರು ಸೋರಿಕೆಯಾಗಿದೆ. ಅಲ್ಲದೆ, ಭಾಶಿ ಬ್ಯಾರೇಜ್​ನಲ್ಲಿ ಒಂದು ಗೇಟ್ ಅಳವಡಿಸದ ಪರಿಣಾಮ ಸಂಪೂರ್ಣ ನೀರು ಅದರಲ್ಲೇ ಹರಿದು ಹೋಗಿದೆ. ಮೂರೂ ಬ್ಯಾರೇಜ್​ಗಳಲ್ಲಿ ನೀರಿಲ್ಲದ ಪರಿಣಾಮ ಭಾಶಿ, ಮೊಗಳ್ಳಿ, ತಿಗಣಿ, ಕಂತ್ರಾಜಿ, ಮುತಗುಣಿ, ನರೂರು ಸೇರಿ ಹತ್ತಾರು ಹಳ್ಳಿಗಳ ಸಾವಿರಾರು ಎಕರೆ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ.

    ಸಚಿವ ಹೆಬ್ಬಾರ ಕ್ಷೇತ್ರದಲ್ಲೇ ಸಮಸ್ಯೆ: ಭಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೂರೂ ಬ್ಯಾರೇಜ್​ಗಳು ನೀರಿಲ್ಲದೇ ಒಣಗಿದ್ದು, ಇದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ತವರು ಕ್ಷೇತ್ರವಾಗಿದೆ. ರೈತರ ಕಷ್ಟಗಳಿಗೆ ಸ್ಪಂದಿಸುವ ಅವರು, ಇಂತಹ ಕಳಪೆ ನಿರ್ವಹಣೆ ಆಗದಂತೆ ಹಾಗೂ ಅದಕ್ಕೆ ಹೊಣೆಯಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೆ, ಕೆಲ ಭಾಗದಲ್ಲಿ ತೀವ್ರ ಬೆಳೆ ಹಾನಿಯಾಗಿದ್ದು, ಅದಕ್ಕೆ ತಕ್ಕ ಪರಿಹಾರ ಒದಗಿಸಿಕೊಡಬೇಕು ಎಂದು ವಿನಂತಿಸಿದ್ದಾರೆ.

    ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳ ಕಳಪೆ ನಿರ್ವಹಣೆಯಿಂದ ಬ್ಯಾರೇಜ್​ಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಈ ಕುರಿತು ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದೆ. ರೈತರ ಜಮೀನು ಒಣಗಿ ನಿಂತಿದೆ. ಅದರ ಬೆಳೆ ಹಾನಿ ಪರಿಹಾರ ಅಧಿಕಾರಿಗಳೇ ನೀಡುವಂತೆ ಆಗಬೇಕಿದೆ. | ಜಯಶೀಲ ಗೌಡ ಭಾರತೀಯ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ

    ಮಳೆಗಾಲದ ನಂತರ ನೀರು ಹೆಚ್ಚಿರುವಾಗ ಬ್ಯಾರೇಜ್ ಗೇಟ್ ಹಾಕಲಾಗಿದ್ದು, ವ್ಯವಸ್ಥಿತವಾಗಿ ಕುಳಿತುಕೊಳ್ಳದೆ ನೀರು ಹೊರ ಹರಿದಿದೆ. ತಕ್ಷಣ ದುರಸ್ತಿ ಕಾರ್ಯ ಮಾಡಲಾಗುವುದು. | ರಾಮಚಂದ್ರ ಗಾಂವಕರ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts