More

    ಗದ್ದುಗೆಯಲ್ಲಿ ಮಾರಿಕಾಂಬೆ ವಿರಾಜಮಾನ

    ಶಿರಸಿ: ದಕ್ಷಿಣ ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾದೇವಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಲಕ್ಷಾಂತರ ಭಕ್ತರ ಹರ್ಷೆದ್ಗಾರದ ನಡುವೆ ಸರ್ವಾಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದ ಬಳಿಕ ದೇವಿಯು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಳು. ಈ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದ್ದು, ಗುರುವಾರದಿಂದ ವಿವಿಧ ಸೇವೆಗಳು ಆರಂಭವಾಗಲಿವೆ.

    ಮಂಗಳವಾರ ರಾತ್ರಿ ಕಲ್ಯಾಣಿಯಾಗಿದ್ದ ದೇವಿಗೆ ವಿಧಿ- ವಿಧಾನಗಳಂತೆಯೇ ದೇವಸ್ಥಾನದ ಪೂಜಾರ ಕುಟುಂಬದ ಪ್ರಮುಖರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ರಥೋತ್ಸವಕ್ಕೆ ಅಡಚಣೆಗಳು ಉಂಟಾಗದಂತೆ ಹಾಗೂ ನಿರ್ವಿಘ್ನವಾಗಿ ಜಾತ್ರಾ ಕಾರ್ಯಕ್ರಮಗಳು ನೆರವೇರುವಂತೆ ದೇವಸ್ಥಾನದ ಬಾಬುದಾರರು, ಧರ್ಮದರ್ಶಿಗಳು, ಇತರರು ಪ್ರಾರ್ಥಿಸಿದರು.

    ಮೊದಲೇ ನಿಗದಿಯಾದಂತೆ ರಥೋತ್ಸವ ಬೆಳಗ್ಗೆ 8.19ಕ್ಕೆ ಆರಂಭವಾಗಿ ಮಧ್ಯಾಹ್ನ 1.35ಕ್ಕೆ ಗದ್ದುಗೆ ಸ್ಥಳ ತಲುಪಿತು. ನಾರಿ ಕೇಳ, ಅಡಕೆ, ಬಾಳೆಹಣ್ಣು, ಕಬ್ಬು ಹಾಗೂ ಇತರ ಬೆಳೆಗಳನ್ನು ಕಟ್ಟಿದ್ದ ರಥವನ್ನು ಭಕ್ತಾದಿಗಳು ಜಯಘೊಷ ಹಾಕುತ್ತ ಎಳೆದರು. ಎಲ್ಲೆಲ್ಲೂ ಜಗನ್ಮಾತೆಯ ಜೈಕಾರ ಕೇಳಿಬಂದಿತು. ಭಕ್ತರು ಹಾರುಕೋಳಿ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಭಾವ ಮೆರೆದರು. ಶಿರಸಿಯ ಗ್ರಾಮದೇವತೆ ಮಾರಿಕಾಂಬೆ ಶಾಂತ ಸ್ವರೂಪಿ ಸರ್ವಮಂಗಳೆಯಾಗಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿ ಹರಸುವ ಕ್ಷಣಕ್ಕೆ ಭಕ್ತಾದಿಗಳು ಕಾತರರಾದರು. ರಥವನ್ನು ಜಾತ್ರೆ ಬಯಲಿಗೆ ತರುವಲ್ಲಿ ಸ್ವಯಂ ಸೇವಕರು, ಪೊಲೀಸರು, ಬಾಬುದಾರರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.

    ಹಾವೇರಿ, ಧಾರವಾಡ, ಗದಗ, ವಿಜಯಪುರ, ರಾಯಚೂರು, ಬಾಗಲಕೋಟೆ, ಬೆಂಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳಿಂದ ಹಾಗೂ ಮುಂಬೈ, ಪುಣೆ ಮತ್ತಿತರೆಡೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಹರಕೆ ತೀರಿಸಿದ ಭಕ್ತರು: ಕೇಳಿದ್ದನ್ನು ನೀಡುವ ಅಮ್ಮ ಎಂದೇ ಹೆಸರಾದ ಮಾರಿಕಾಂಬೆಗೆ ಹೇಳಿಕೊಂಡ ಹರಕೆ ತೀರಿಸಲು ಹಾರುಗೋಳಿ, ಬಾಳೆಹಣ್ಣು, ಕಡಲೆ ಕಾಳು ಅರ್ಪಿಸಲಾಯಿತು. ಒಂದು ಕೋಳಿಗೆ 400 ರೂ., 10ರೂ.ಗೆ ನಾಲ್ಕು ಬಾಳೆ ಹಣ್ಣು ಮಾರಾಟವಾದವು. ದುರಮುರಗಿ ತಂಡದ ಸದಸ್ಯರು ಮೈ ಮೇಲೆ ಚಾಟಿ ಬೀಸಿಕೊಂಡು ಹರಕೆ ತೀರಿಸಿದರು. ಸಾವಿರಾರು ಭಕ್ತರು ಅರಿಶಿಣ, ಕುಂಕುಮ, ಅಡಕೆ ಸಿಂಗಾರವನ್ನು ಮುಖಕ್ಕೆ ಬಳಿದು ದೇವಿಯನ್ನು ಮೈ ಮೇಲೆ ಆವಾಹಿಸಿಕೊಂಡು ಭಕ್ತಿಯ ಪರಾಕಾಷ್ಠೆ ತೋರಿದರು.

    ಕಲಾ ತಂಡಗಳ ಮೆರುಗು: ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಡೊಳ್ಳು, ಜಾನಪದ ನೃತ್ಯ, ನಗಾರಿ, ಬ್ಯಾಂಡ್ ವಾದ್ಯ ಮತ್ತಿತರ ತಂಡಗಳು ಪಾಲ್ಗೊಂಡು ಮಾರಿಕಾಂಬೆಯ ರಥೋತ್ಸವಕ್ಕೆ ಮೆರುಗು ತಂದುಕೊಟ್ಟವು. ಹಿಂದಿನ ಜಾತ್ರೆಗೆ ಹೋಲಿಸಿದಲ್ಲಿ ಪ್ರಸಕ್ತ ಸಾಲಿನ ರಥೋತ್ಸವದ ವೇಳೆ ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕಲಾ ತಂಡಗಳ ಜತೆ ಅನೇಕರು ಸೆಲ್ಪಿ ತೆಗೆಸಿಕೊಂಡರು.

    ಅಗ್ಗೇರಿ ಮಾರಿಕಾಂಬೆ ಮೂರ್ತಿ ವಿಸರ್ಜನೆ:

    ಸಿದ್ದಾಪುರ: ತಾಲೂಕಿನ ಅಗ್ಗೇರಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ಸಂಪನ್ನಗೊಂಡಿದ್ದು, ಬುಧವಾರ ದೇವಿ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

    ಜಾತ್ರಾ ಗದ್ದುಗೆಯಿಂದ ಗೊದ್ಲಬೀಳ ಗ್ರಾಮದ ಗಡಿಯ ಅಡವಿಯವರೆಗೂ ಮೆರವಣಿಗೆ ಮೂಲಕ ತಂದು ಸ್ಥಳೀಯ ಅಡವಿಯಲ್ಲಿ ಸಂಪ್ರದಾಯದಂತೆ ವಿಸರ್ಜನೆ ಮಾಡಲಾಯಿತು. ಡೊಳ್ಳುಕುಣಿತ, ವಾದ್ಯ ಮೇಳ ಆಕರ್ಷಣೆಯಾಗಿತ್ತು. ಜಾತ್ರಾ ಕಮಿಟಿ, ಅಗ್ಗೇರಿ ಮಾರಿಕಾಂಬಾ ದೇವಾಲಯ ಕಮಿಟಿ ಸದಸ್ಯರು, ಗ್ರಾಮಸ್ಥರು ವಿಸರ್ಜನೆ ಮೆರವಣಿಗೆಯಲ್ಲಿದ್ದರು.

    ಮರು ಪ್ರತಿಷ್ಠಾ ಉತ್ಸವ

    ಭಟ್ಕಳ: ತಾಲೂಕಿನ ಪ್ರಸಿದ್ಧ ಶ್ರೀಮಾರಿಕಾಂಬಾ ದೇವಿಯ ಮರು ಪ್ರತಿಷ್ಠಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ಹೊನ್ನಾವರದ ವೆ.ಮೂ. ಕುಮಾರಶಾಸ್ತ್ರಿ, ಭಟ್ಕಳದ ಪ್ರಧಾನ ಅರ್ಚಕ ಶ್ರೀಧರ ಪಿ. ಭಟ್ ನೇತೃತ್ವದಲ್ಲಿ 5 ವೈದಿಕರು ಧಾರ್ವಿುಕ ಕಾರ್ಯಕ್ರಮ ನೆರವೇರಿಸಿದರು. ಬೆಳಗ್ಗೆ 7.45ಕ್ಕೆ ದೇವಿಯ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ನಂತರ 9 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಪಟ್ಟಣದ ಹನುಮಂತ ದೇವಸ್ಥಾನದ ಆವರಣದಲ್ಲಿ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ ರಂಗಪೂಜೆ, ಅಷ್ಟಾವಧಾನ ಸೇವೆ ನಡೆದವು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಎನ್.ಡಿ. ಖಾರ್ವಿ, ಶಂಕರ ಶೆಟ್ಟಿ, ನರೇಂದ್ರ ನಾಯಕ, ಶ್ರೀಧರ ನಾಯ್ಕ ಆಸರಕೇರಿ, ಸುರೇಂದ್ರ ಭಟ್ಕಳ, ಶ್ರೀಪಾದ ಕಂಚುಗಾರ, ಸುರೇಶ ಆಚಾರ್ಯ, ವಾಮನ ಎಸ್. ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts