More

    ಗದ್ದಿಕೆರೆ ನೀರು ನುಗ್ಗಿ ಬೆಳೆಹಾನಿ

    ಎಂ.ಕೆ.ಹುಬ್ಬಳ್ಳಿ: ಭಾರಿ ಮಳೆಯಿಂದ ಭರ್ತಿಯಾಗಿರುವ ಎಂ.ಕೆ. ಹುಬ್ಬಳ್ಳಿಯ ಗದ್ದಿಕೆರೆ ಉಕ್ಕಿಹರಿಯುತ್ತಿದ್ದು, ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಕಳೆದ ವರ್ಷವೂ ಸಹ ಮಹಾಮಳೆ ಅಬ್ಬರಕ್ಕೆ ಪ್ರವಾಹ ತಂದೊಡ್ಡಿದ್ದ ಕೆರೆ, ರೈತರ ಜಮೀನುಗಳಿಗೆ ನುಗ್ಗಿತ್ತು. ಈ ಬಾರಿಯೂ ಕೆರೆ ಉಕ್ಕಿ ಹರಿದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
    ಮೂರ‌್ನಾಲ್ಕು ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಗದ್ದಿಕೆರೆ ಭರ್ತಿಯಾಗಿದೆ. ಎರಡು ದಿನಗಳಿಂದ ಕೆರೆಯಿಂದ ಹೆಚ್ಚುವರಿ ನೀರು ಕಾಲುವೆ ಹಾಗೂ ಹಳ್ಳದ ಮೂಲಕ ಹರಿಯಲಾರಂಭಿಸಿದೆ. ಆದರೆ, ಕಾಲುವೆ ಬಹುತೇಕ ಕಡೆ ಒಡೆದಿದ್ದರಿಂದ ನೀರು ಪಕ್ಕದ ಜಮೀನುಗಳಿಗೆ ಹರಿಯತೊಡಗಿದೆ. ಇದರಿಂದಾಗಿ ಕಬ್ಬು ಹಾಗೂ ಭತ್ತದ ಬೆಳೆಗಳು ಜಲಾವೃತಗೊಂಡಿವೆ.

    ಕಾಲುವೆ ಶಿಥಿಲ: ಮಳೆ ಕೊರತೆಯಿಂದ ಹತ್ತಾರು ವರ್ಷಗಳಿಂದ ಗದ್ದಿಕೆರೆ ಭರ್ತಿಯಾಗಿರಲಿಲ್ಲ. ಕಳೆದ ವರ್ಷದಿಂದ ಮಳೆ ಪ್ರಮಾಣ ಹೆಚ್ಚಿದ್ದರಿಂದ ಕೆರೆ ಮೈದುಂಬಿಕೊಳ್ಳುತ್ತಿದೆ. ಆದರೆ, ಕೆರೆಯಿಂದ ಹೆಚ್ಚುವರಿಯಾದ ನೀರು ಹರಿಯಲು ಇರುವ ಕಾಲುವೆಗಳ ನಿರ್ವಹಣೆ ಮಾಡದ್ದರಿಂದ ಶಿಥಿಲಗೊಂಡಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ, ಕೆಲ ಸ್ಥಳೀಯರ ಸ್ವಾರ್ಥಕ್ಕಾಗಿ ಕಾಲುವೆ ನಾಶವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಿದೆ ಎನ್ನುತ್ತಾರೆ ರೈತರಾದ ಪ್ರಕಾಶ ಸಾಣಿಕೊಪ್ಪ, ಬಸವರಾಜ ಚಳ್ಳಮರದ.

    ಅತಿಕ್ರಮಣ ಆರೋಪ: 210 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ವ್ಯಾಪ್ತಿ ಬಹುತೇಕ ಕಡೆಗಳಲ್ಲಿ ಆತಿಕ್ರಮಣಕ್ಕೊಳಗಾಗಿದೆ ಎಂಬ ಆರೋಪ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಜತೆಗೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಮಟ್ಟವೂ ಕಡಿಮೆಯಾಗುತ್ತದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ, ಕರೆ ಪ್ರದೇಶ ಅತಿಕ್ರಮಣವಾಗಿದ್ದಲ್ಲಿ ತೆರವು ಮಾಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಣ್ಣ ನಿರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಎಂ.ಆರ್. ಪಾಟೀಲ ಮಾತನಾಡಿ, ಕಳೆದ ಸಾಲಿನ ಪ್ರವಾಹದಲ್ಲಿ ಹಾನಿಗೊಂಡ ಕೆರೆ ದಡದ ರಸ್ತೆ (ಒಡ್ಡು ರಸ್ತೆ) ಹಾಗೂ ಶಿಥಿಲಗೊಂಡ ಕಾಲುವೆ ದುರಸ್ತಿ ಕಾರ್ಯಕ್ಕೆ ಈಗಾಗಲೇ ಅನುದಾನ ಮಂಜೂರಾಗಿದೆ. ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕಾಲುವೆಯ ನಿರ್ಮಾಣದ ಕಾರ್ಯ ಈಗಾಗಲೇ ಪ್ರತ್ಯೇಕ ಅನುದಾನದಲ್ಲಿ ನಡೆದಿದೆ. ಮಳೆ ಕಡಿಮೆಯಾದ ನಂತರ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

    ಗಿಡ- ಗಂಟಿ ತೆರವಿಗೆ ಒತ್ತಾಯ

    ಕಾಲುವೆಯಲ್ಲಿ ಗಿಡ- ಗಂಟಿಗಳು ಬೆಳೆದಿದ್ದು, ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ನೀರಿನ ಒತ್ತಡ ತಾಳದೆ ಕಾಲುವೆಯ ಅಲ್ಲಲ್ಲಿ ನೀರು ರೈತರ ಜಮೀನುಗಳಿಗೆ ನುಗ್ಗತೊಡಗಿದೆ. ಇದರಿಂದ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗುತ್ತಿದೆ. ಇದರಿಂದ ಕಾಲುವೆ ಪಕ್ಕದ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಹೀಗಾಗಿ ಕಾಲುವೆ ದುರಸ್ತಿ ಮಾಡಿಸುವಂತೆ ಹಾಗೂ ಅಲ್ಲಲ್ಲಿ ಕೆಲ ರೈತರು ಹಾಕಿರುವ ತಡೆಗೋಡೆ ತೆಗೆದು ಕಾಲುವೆ ಸ್ವಚ್ಛಗೊಳಿಸಬೇಕು. ಮತ್ತೆ ರೈತರ ಜಮೀನುಗಳಿಗೆ ಕೆರೆ ನುಗ್ಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

    ಕೆರೆ ಭರ್ತಿಯಾಗಿ ಹರಿದು ಬರುತ್ತಿರುವ ಹೆಚ್ಚುವರಿ ನೀರು ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ. ಕಾಲುವೆಯಲ್ಲಿ ಗಿಡ-ಗಂಟಿ ಬೆಳೆದಿರುವುದು, ಹೂಳು ತುಂಬಿಕೊಂಡಿರುವುದು ಹಾಗೂ ಒತ್ತುವರಿ ಆಗಿರುವುದೇ ಕಾಲುವೆ ಶಿಥಿಲಾವಸ್ಥೆಗೆ ಕಾರಣ.
    | ಅರ್ಜುನ ಗಣಾಚಾರಿ ಕಾಲುವೆ ಪಕ್ಕದ ಹೊಲದ ರೈತ

    ಕೆರೆ ದಂಡೆಯ ರಸ್ತೆ ಹಾಗೂ ಶಿಥಿಲಗೊಂಡಿರುವ ಕಾಲುವೆ ಮರು ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ 3.5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಟೆಂಡರ್ ಕೂಡ ಆಗಿದೆ. ಮಳೆ ಮುಗಿದ ನಂತರ ಕಾಮಗಾರಿ ಆರಂಭವಾಗಲಿದೆ. ಈಗ ರೈತರ ಹೊಲಗಳಿಗೆ ನುಗ್ಗುತ್ತಿರುವ ನೀರು ತಡೆಯಲು ತಕ್ಷಣ ಅಲ್ಲಿಗೆ ಅಧಿಕಾರಿಗಳನ್ನು ಕಳಿಸಿ ಸೂಕ್ತಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.
    | ಮಹಾಂತೇಶ ದೊಡಗೌಡರ ಶಾಸಕ ಕಿತ್ತೂರು ವಿಧಾನಸಭಾ ಕ್ಷೇತ್ರ

    | ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts