More

    ಗದಗ ಜಿಲ್ಲೆಯ ಜನರಲ್ಲಿ ಹೆಚ್ಚಿದ ನಿರೀಕ್ಷೆ

    ಗದಗ: ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ ಅವರಿಗೆ ಲೋಕೋಪಯೋಗಿ ಖಾತೆ ಸಿಕ್ಕಿರುವುದು ಜಿಲ್ಲೆಯ ಜನರಲ್ಲಿ ಸಂತಸ ಉಂಟು ಮಾಡಿದೆ. ಜತೆಗೆ ಅಪಾರ ನಿರೀಕ್ಷೆಗಳು ಗರಿಗೆದರಿವೆ. ಪ್ರಥಮ ಬಾರಿಗೆ ಇಂತಹ ಪ್ರಮುಖ ಜವಾಬ್ದಾರಿ ಜಿಲ್ಲೆಯ ಪಾಲಾಗಿದ್ದು, ಇದನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು ಎಂಬ ಒತ್ತಾಸೆ ಕೇಳಿಬರುತ್ತಿದೆ.

    ಇಲ್ಲಿಯವರೆಗೆ ದಿ. ಅಂದಾನಪ್ಪ ದೊಡ್ಡಮೇಟಿ, ದಿ. ಕೆ.ಎಚ್. ಪಾಟೀಲ, ಎಸ್.ಎಸ್. ಪಾಟೀಲ, ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಬಿ.ಆರ್. ಯಾವಗಲ್ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಅವರಾರಿಗೂ ಲೋಕೋಪಯೋಗಿ ಖಾತೆ ಸಿಕ್ಕಿರಲಿಲ್ಲ. ಹೀಗಾಗಿ, ರೈತ ಬಂಡಾಯದ ನೆಲದಿಂದ ರಾಜಕೀಯ ಭವಿಷ್ಯ ರೂಪಿಸಿಕೊಂಡಿರುವ ಸಿ.ಸಿ. ಪಾಟೀಲ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಮಹತ್ವದ ಖಾತೆ ದಕ್ಕಿದ್ದು ವಿಶೇಷ ಎನಿಸಿದೆ.

    ಶಾಸಕ ಸಿ.ಸಿ. ಪಾಟೀಲ ಅವರು ಜಿಪಂ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ (2008-2010), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿಯಾಗಿ (2010-2012) ಕಾರ್ಯನಿರ್ವಹಿಸಿದ್ದಾರೆ. 2019ರಲ್ಲಿ ಪುನಃ ಯಡಿಯೂರಪ್ಪ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ.

    ಜಿಲ್ಲೆಯಲ್ಲಿ ರೋಣ ಮತಕ್ಷೇತ್ರದ ಶಾಸಕರಾಗಿದ್ದ ದಿ. ಅಂದಾನಪ್ಪ ದೊಡ್ಡಮೇಟಿ ಅವರು ನೀರಾವರಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಗದಗ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದಿ. ಕೆ.ಎಚ್. ಪಾಟೀಲ ಅವರು ನಾಲ್ಕು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಹುಲಕೋಟಿ ಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಉತ್ತಮ ಕರ್ನಾಟಕದ ಜನಪ್ರತಿನಿಧಿಗಳ ಪೈಕಿ ದಿ. ಕೆ.ಎಚ್. ಪಾಟೀಲ ಬಲಾಢ್ಯ ಹಾಗೂ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಅವರ ರಾಜಕೀಯ ಸೇವಾ ಅವಧಿಯಲ್ಲಿ ಅರಣ್ಯ, ಸಹಕಾರ, ಕಾರ್ವಿುಕ ಮತ್ತು ಕಂದಾಯ ಖಾತೆ ನಿಭಾಯಿಸಿದ್ದಾರೆ.

    ಕೆ.ಎಚ್. ಪಾಟೀಲ ಅವರ ಪುತ್ರ ಎಚ್.ಕೆ. ಪಾಟೀಲ ಅವರು ಸಹ ಜವಳಿ ಮತ್ತು ಆಹಾರ ಸಂಸ್ಕರಣೆ, ಜಲಸಂಪನ್ಮೂಲ, ಕೃಷಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನಿಭಾಯಿಸಿದ್ದಾರೆ.

    ಮುಂಡರಗಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಎಸ್.ಎಸ್. ಪಾಟೀಲ ಅವರು ದಿ. ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಸಕ ಕಳಕಪ್ಪ ಬಂಡಿ ಅವರು 2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಗದೀಶ ಶೆಟ್ಟರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಗದಗ, ರೋಣ, ನರಗುಂದ ಹಾಗೂ ಈ ಹಿಂದೆ ವಿಧಾನಸಭೆ ಕ್ಷೇತ್ರವಾಗಿದ್ದ ಮುಂಡರಗಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿರುವ ಶಾಸಕರು ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

    —ಬಾಕ್ಸ್—–

    ಗದಗ ಅಭಿವೃದ್ಧಿಗೆ ಬೇಕು ಆದ್ಯತೆ

    ದಿ. ಕೆ.ಎಚ್. ಪಾಟೀಲ ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಗಮನ ಹರಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪಿಸಿದರು. ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರದಲ್ಲಿದ್ದಾಗ ಸಿ.ಸಿ. ಪಾಟೀಲ ಅವರು ಹೆಚ್ಚು ಅವಧಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ಅವರ ಮೇಲೆ ಗುರುತರ ಜವಾಬ್ದಾರಿ ಇದೆ. ಅಧಿಕಾರವಧಿಯಲ್ಲಿ ಜಿಲ್ಲೆಗೊಂದು ವಿಶೇಷ ಕೊಡುಗೆ ನೀಡಬೇಕು. ಹೊಸ ಯೋಚನೆಯೊಂದಿಗೆ ಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

    ಬಿಎಸ್​ವೈ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಿ.ಸಿ. ಪಾಟೀಲ ಅವರ ಬಹುತೇಕ ಸಮಯ ಪ್ರವಾಹ, ಕರೊನಾ ಸೋಂಕು ನಿಯಂತ್ರಣದಲ್ಲಿಯೇ ಕಳೆಯಿತು. ಇದೀಗ ಹೊಸ ಸರ್ಕಾರದಲ್ಲಿ ಪ್ರಮುಖ ಖಾತೆ ಸಿಕ್ಕಿದ್ದು, ಜಿಲ್ಲೆಯನ್ನು ಮಾದರಿಯಾಗಿಸಬೇಕು ಎಂಬ ಆಶಯ ಜನರಲ್ಲಿದೆ. ಮುಖ್ಯವಾಗಿ ಜಿಲ್ಲಾ ಕೇಂದ್ರದಲ್ಲಿ ಜನ ಮೂಲಸೌಕರ್ಯಗಳಿಲ್ಲದೆ ನರಳುವಂತಾಗಿದೆ. ಗದಗ-ಬೆಟಗೇರಿ ನಗರ ಸೇರಿ ಜಿಲ್ಲೆಯ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ನೀಡಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

    ——–ಬಾಕ್ಸ್———-

    ಬೇಕು ಕೈಗಾರಿಕೆ

    ಜಿಲ್ಲೆಯಲ್ಲಿ ಅಪಾರ ಸಂಪನ್ಮೂಲವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಯೋಜನೆ ರೂಪಿಸಬೇಕಿದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಲು ಸಚಿವ ಸಿ.ಸಿ. ಪಾಟೀಲ ಅವರು ಕಾರ್ಯಪ್ರವೃತ್ತರಾಗಬೇಕು. ಸಂಸದ ಶಿವಕುಮಾರ ಉದಾಸಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರ ಪಡೆದು ದಿಟ್ಟ ನಿರ್ಣಯದೊಂದಿಗೆ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ಜಿಲ್ಲೆಯಲ್ಲಿರುವ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಿದರೆ ಯಾವುದೇ ತೊಂದರೆ ಎದುರಾಗಲಾರದು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

    —-ಕೋಟ್ ——

    ಲೋಕೋಪಯೋಗಿ ಇಲಾಖೆ ನನಗೆ ಹೊಸದು. ಇಲಾಖೆಯ ಬಗ್ಗೆ ಅಧ್ಯಯನ ನಡೆಸಬೇಕಿದ್ದು, ಅಭಿವೃದ್ಧಿಪರ ಕೆಲಸ ಮಾಡಲಾಗುವುದು. ಗದಗ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು.

    | ಸಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts