More

    ಗಣೇಶ ಮೂರ್ತಿ ತಯಾರಿಕೆಗೂ ಕರೊನಾ ವಿಘ್ನ?

    ಬಸವರಾಜ ಇದ್ಲಿ ಹುಬ್ಬಳ್ಳಿ

    ಕರೊನಾ ಸೋಂಕು ಇಡೀ ಜಗತ್ತಿನ ನೆಮ್ಮದಿ ಕಸಿದು ಕೇಕೆ ಹಾಕುತ್ತಿದೆ. ಆದರೆ, ಭಾರತೀಯರಿಗೆ ಏನೇ ಆದರೂ ದೇವರ ಸ್ಮರಣೆ ಬಿಡುವುದಿಲ್ಲ. ಅದರಲ್ಲೂ ಪ್ರಥಮ ಪೂಜಿತನ ಹಬ್ಬದ ಸಂಭ್ರಮವೇ ಬೇರೆ. ಪ್ರತಿವರ್ಷದಂತೆ ಮೂರ್ತಿ ತಯಾರಿಕೆ ಕಾರ್ಯ ಈ ಭಾಗದಲ್ಲಿ 3-4 ತಿಂಗಳ ಮೊದಲೇ ಆರಂಭವಾಗಿದ್ದು, ಈ ಸಲ ಕೆಲವು ಸಮಸ್ಯೆಗಳು ಎದುರಾಗಿವೆ.

    ಮೂರ್ತಿ ತಯಾರಕರಿಗೆ ಮೊದಲು ಎದುರಾಗುವ ಸಮಸ್ಯೆ ಎಂದರೆ ಕಚ್ಚಾ ವಸ್ತು ಮಣ್ಣು. ಕೆಲವು ವರ್ಷ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಅಬ್ಬರ ಎಲ್ಲೆಡೆ ಸದ್ದು ಮಾಡಿದವು. ಇದೀಗ ಎಲ್ಲೆಡೆ ಪರಿಸರ ಜಾಗೃತಿ ಮೂಡುತ್ತಿದ್ದು, ಮಣ್ಣಿನ ಮೂರ್ತಿಗಳಿಗೆ ಮಹತ್ವ ಹೆಚ್ಚಾಗಿದೆ.

    ಮಹಾನಗರ ಪಾಲಿಕೆ, ಜಿಲ್ಲಾಡಳಿತ ಕೂಡ ಪಿಒಪಿ ಮೂರ್ತಿ ನಿಷೇಧಿಸಿದ್ದರಿಂದ ಮೊದಲಿನಿಂದಲೂ ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದವರಿಗೆ ಶುಕ್ರದೆಸೆ ಶುರುವಾದಂತಾಗಿದೆ.

    ಹುಬ್ಬಳ್ಳಿಯ ಅಕ್ಕಪಕ್ಕದ ಹಳ್ಳಿಗಳ ಕೆರೆ, ಮತ್ತಿತರ ಕಡೆಗಳಿಂದ ಮಣ್ಣು ತರಲಾಗುತ್ತದೆ. ಕರೊನಾ ಸೋಂಕು ಹರಡುವುದು ತಡೆಗಟ್ಟಲು ವಿಧಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಇದೀಗ ಮಣ್ಣು ಕೂಡ ಸುಲಭವಾಗಿ ಲಭ್ಯವಾಗುತ್ತಿಲ್ಲ.

    ಕಳೆದ ವರ್ಷಕ್ಕಿಂತ ಒಂದಿಷ್ಟು ದುಬಾರಿ ಕೂಡ ಆಗಿದೆ. ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗದೆ ಇರುವುದು, ಇತ್ಯಾದಿ ಕಾರಣಗಳಿಗೆ ಮೂರ್ತಿ ತಯಾರಿಸುವ ಮಣ್ಣು ಸಕಾಲಕ್ಕೆ ಸಿಗುತ್ತಿಲ್ಲ. ಹೆಚ್ಚು ವೆಚ್ಚ ಮಾಡಿ ತರಬೇಕಾಗಿದೆ ಎನ್ನುತ್ತಾರೆ ಕಲಾವಿದರು. ತಾಲೂಕಿನ ಅಂಚಟಗೇರಿ, ಪಿ.ಬಿ. ರಸ್ತೆಯಲ್ಲಿರುವ ಶಿಗ್ಗಾಂವಿ ಹಾಗೂ ಇತರೆಡೆಗಳಲ್ಲಿ ಗಣಪತಿ ಮೂರ್ತಿ ತಯಾರಿಸುವ ಮಣ್ಣು ತರಿಸಲಾಗುತ್ತದೆ. ಈ ಸಲ ಮಣ್ಣಿನ ದರ ಸ್ವಲ್ಪ ತುಟ್ಟಿಯಾಗಿದೆ. ಹಾಗೆಯೇ ಪುಣೆ, ಕೊಲ್ಲಾಪುರದಿಂದ ಪೂರೈಕೆಯಾಗುವ ಬಣ್ಣಗಳ ದರವೂ ಏರುವ ಸಾಧ್ಯತೆಯಿದೆ.

    ಏನೇ ಆದರೂ ವಿಘ್ನ ವಿನಾಶಕನಿಗೆ ಅಗ್ರ ಪೂಜೆ ಸಲ್ಲಿಸುವುದು ಭಕ್ತರ ಆಶಯ. ಮನುಕುಲಕ್ಕೆ ತಟ್ಟಿರುವ ಮಹಾವ್ಯಾಧಿ ಹೋಗಲಾಡಿಸಲು ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲು ಯಾವುದೇ ತೊಂದರೆ ಇಲ್ಲ. ಇದೇ ಭಾವನೆಯಿಂದ ಮೂರ್ತಿ ಕಲಾವಿದರು ಸಹ ಕಾರ್ಯ ನಿರತರಾಗಿದ್ದಾರೆ.

    ಹೆಚ್ಚೆಂದರೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮೇಲೆ ಒಂದಿಷ್ಟು ದುಷ್ಪರಿಣಾಮ ಬೀರಬಹುದು. ಹಾಗಾಗಿ ಗಣಪತಿ ಮೂರ್ತಿಗೆ ಬೇಡಿಕೆ ಕುಸಿಯುವ ಮಾತೇ ಇಲ್ಲ ಎನ್ನುತ್ತಾರೆ ಮೂರ್ತಿ ತಯಾರಕರು.

    ಹೊರಗಿನವರು ಬರಬಾರದು: ಪ್ರತಿ ವರ್ಷ ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕೋಲ್ಕತ ಸೇರಿ ಬೇರೆ ಬೇರೆ ಕಡೆಗಳಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಬರುತ್ತಾರೆ. ಅವಸರದಲ್ಲಿ ಪಿಒಪಿ ಮೂರ್ತಿಗೇ ಹೆಚ್ಚು ಪ್ರಾಶಸ್ಱ ಕೊಡುತ್ತಾರೆ. ಹಾಗಾಗಿ ಹೊರಗಿನವರಿಗೆ ಅವಕಾಶ ಕೊಡಬಾರದು. ಅದರಲ್ಲೂ ಕರೊನಾ ಭಯ ಇನ್ನೂ ದೂರವಾಗಿಲ್ಲ. ಇಂತಹ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ರೋಗ ಹರಡುವ ಭೀತಿ ಇದ್ದೇ ಇದೆ. ಈ ಬಗ್ಗೆ ಸ್ಥಳೀಯ ಆಡಳಿತ, ಅಧಿಕಾರಿಗಳು ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯ ಕಲಾವಿದರು.

    ಮಣ್ಣಿಗೇನೂ ಕೊರತೆ ಇಲ್ಲ. ಲಾಕ್​ಡೌನ್​ನಿಂದಾಗಿ ಅಗತ್ಯ ಕೆಲಸಗಾರರು ಸಿಗದೆ ಕೆರೆ, ಗದ್ದೆಯಿಂದ ಮಣ್ಣು ತರುವುದು ಕಷ್ಟಕರವಾಗಿದೆ. ಮಣ್ಣು, ಬಣ್ಣ ಇತ್ಯಾದಿ ಅಲಂಕಾರಿಕ ಸಾಮಗ್ರಿ ಬೆಲೆ ಮೇಲೆ ಗಣಪತಿ ಮೂರ್ತಿ ದರ ನಿಗದಿಯಾಗಲಿದೆ. ಬಹುತೇಕ ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ಕಳೆದ ವರ್ಷಕ್ಕಿಂತ 50- 100 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

    ನಮ್ಮ ತಂದೆ, ಅಜ್ಜನ ಕಾಲದಿಂದಲೂ ಪರಂಪರಾಗತವಾಗಿ ಮಣ್ಣಿನ ಮೂರ್ತಿಯನ್ನೇ ಮಾಡಿಕೊಂಡು ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ತಯಾರಿಕೆ ವೆಚ್ಚ ಹೆಚ್ಚಾಗುತ್ತಿದೆ. ಪುಣೆ, ಕೊಲ್ಲಾಪುರದಿಂದ ಬಣ್ಣ ತರುತ್ತಿದ್ದೆವು. ಲಾಕ್​ಡೌನ್​ನಿಂದಾಗಿ ಬೇರೆ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಇಲ್ಲ.

    | ನಾರಾಯಣ ಪೋನಾರಕರ, ಮೂರ್ತಿ ಕಲಾವಿದ, ಹೊಸೂರ

    ಮಣ್ಣಿನಿಂದ ಐದು- ಆರು ಅಡಿವರೆಗಿನ ಮೂರ್ತಿ ತಯಾರಿಸಬಹುದು. ಪಿಒಪಿ ಸಂಪೂರ್ಣ ನಿಷೇಧಿಸುವ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮೂರ್ತಿ ತಯಾರಿಕೆಗೆ ಬೇಕಾಗಿರುವ ವಸ್ತುಗಳ ದರ ಹೆಚ್ಚಾಗಿದ್ದು, ಸಹಜವಾಗಿ ಒಂದಿಷ್ಟು ಮೂರ್ತಿಗಳ ದರ ಹೆಚ್ಚಬಹುದು.

    | ವೀರೇಶ ಕಲಾವಿದ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts