More

    ಗಣೇಶನ ಬರಮಾಡಿಕೊಳ್ಳಲು ಸಿದ್ಧತೆ

    ಗದಗ: ಕರೊನಾ ವೈರಸ್ ಅಟ್ಟಹಾಸ ಹಾಗೂ ನೆರೆ ಹಾವಳಿ ನಡುವೆಯೂ ಗಣೇಶನ ಹಬ್ಬಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಮನೆಗಳಲ್ಲಿ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಶನಿವಾರ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ.

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆಸಿರುವ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಜನತೆ ಮಾರುಕಟ್ಟೆಗೆ ಧಾವಿಸಿ ಅಲಂಕಾರಿಕ ಹಾಗೂ ಪೂಜಾ ಸಾಮಗ್ರಿಗಳ ಖರೀದಿಸಿದರು.

    ಕರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿವುಳ್ಳರು ಮಾಸ್ಕ್ ಧರಿಸಿ ಮಾರುಕಟ್ಟೆಗೆ ಆಗಮಿಸಿದ್ದರೆ, ಕರೊನಾ ಏನು ಮಾಡುತ್ತೆ ನೋಡೇ ಬಿಡೋಣ ಎಂಬ ಹುಂಬುತನ ಪ್ರದರ್ಶನ ಮಾಡುವಂತವರು ಮಾಸ್ಕ್ ಧರಿಸಿದೆ ಮಾರುಕಟ್ಟೆಯಲ್ಲಿ ಬಂದು ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಶುಕ್ರವಾರ ಸಂಜೆ ನಗರದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

    ನಗರದ ಗ್ರೇನ್ ಮಾರುಕಟ್ಟೆ, ಬ್ಯಾಂಕ್ ರಸ್ತೆ, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತದಲ್ಲಿ ಗಣೇಶ ಪೂಜೆ, ವೇದಿಕೆ ಅಲಂಕಾರಕ್ಕೆ ಅಗತ್ಯವಾದ ಬಾಳೆ ದಿಂಡುಗಳು, ಕಬ್ಬು, ಸೇವಂತಿಗೆ, ಮಲ್ಲಿಗೆ, ಚೆಂಡು ಸೇರಿ ವಿವಿಧಬಗೆಯ ಹೂ-ಹಣ್ಣುಗಳು, ಮಾವಿನ ತಳಿರು-ತೋರಣಗಳ ವಹಿವಾಟು ಜೋರಾಗಿತ್ತು. ಜೋಡಿ ಬಾಳೆ ದಿಂಡಿಗೆ 30ರಿಂದ 60 ರೂ, ಐದು ಬಗೆಯ ಹಣ್ಣುಗಳ ಗುಂಪಿಗೆ 100ರಿಂದ 150 ರೂ., ಅಲಂಕಾರಿಕ ವಸ್ತುಗಳಾದ ಜೂಮರ್, ಬಲೂನ್, ವಿದ್ಯುತ್ ದೀಪಗಳ ಸರಮಾಲೆಗೆ 100ರಿಂದ 500 ರೂ. ವರೆಗೆ ಮಾರಾಟವಾದವು.

    ಸೇವಂತಿ ಕೆಜಿಗೆ 250 ರೂ., ಸುಗಂಧಿ ಕೆಜಿಗೆ 250 ರೂ. ಆಬಾಲಿ ಕೆಜಿಗೆ 2 ಸಾವಿರ ರೂ., ಚೆಂಡು ಹೂವು ಕೆಜಿ ಗೆ 50 ರೂ., ಸೇಬು ಕೆಜಿಗೆ 140 ರೂ., ಚಿಕ್ಕು ಕೆಜಿ ಗೆ 60 ರೂ., ದಾಳಿಂಬೆ ಕೆಜಿ ಗೆ 40 ರೂ., ಮೊಸಂಬಿಗೆ 60ರಿಂದ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಕರೊನಾ ಹಾಗೂ ನೆರೆಯಿಂದ ವ್ಯಾಪಾರ ಸಂಪೂರ್ಣ ಕುಸಿದಿದೆ. ಜನರು ಮಾರುಕಟ್ಟೆಗೆ ಬಂದರೂ ಖರೀದಿಸಲು ಮುಂದಾಗುತ್ತಿಲ್ಲ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ವ್ಯಾಪಾರ ವಹಿವಾಟು ಮತ್ತಷ್ಟು ಇಳಿಮುಖ ಕಂಡಿದೆ ಎನ್ನುತ್ತಾರೆ ಹೂವು ಹಣ್ಣು ವ್ಯಾಪಾರಿ ಓಮರ್ ಫಾರೂಕ್ ಹುಬ್ಬಳ್ಳಿ.

    ಮೂರ್ತಿ ಖರೀದಿ ಇಳಿಕೆ

    ಕರೊನಾ ಕರಿನೆರಳು ಗಣೇಶ ಮೂರ್ತಿ ವ್ಯಾಪಾರದ ಮೇಲೂ ಬಿದ್ದಿದ್ದು, ಮೂರ್ತಿ ಖರೀದಿಸಲು ಜನರು ಬರುತ್ತಿಲ್ಲ ಎಂದು ಮೂರ್ತಿ ತಯಾರಕರು ಗೋಳಾಡುತ್ತಿರುವುದು ಕಂಡುಬಂದಿತು. ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗಣೇಶ ಮೂರ್ತಿ ಮಾರಾಟ ಮಾಡಲು ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ. 20ಕ್ಕೂ ಅಧಿಕ ಮೂರ್ತಿಕಾರರು ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದು, ಪ್ರತಿ ಮಾರಾಟಗಾರರಲ್ಲಿ 180 ರಿಂದ 400 ಮೂರ್ತಿಗಳಿವೆ. 150 ರೂ.ದಿಂದ 2500 ರೂ. ವರೆಗೆ ದರ ನಿಗದಿಪಡಿಸಲಾಗಿದೆ.

    ಕರೊನಾ ಹಾವಳಿಯಿಂದ ಗಣೇಶ ಮೂರ್ತಿ ಖರೀದಿಗೂ ಜನರು ಬರುತ್ತಿಲ್ಲ. ಶುಕ್ರವಾರ ಸಂಜೆವರೆಗೂ 1500 ಮೂರ್ತಿ ಮಾರಾಟ ಮಾಡಲಾಗಿದೆ. ನಾಳೆ ಸಂಜೆಯವರೆಗೆ ಜನರು ಮೂರ್ತಿಗಳನ್ನು ಖರೀದಿ ಮಾಡುತ್ತಾರೆ. ಆದರೆ, ಕಳೆದ ವರ್ಷ ಈ ದಿನದಂದು 3 ಸಾವಿರಕ್ಕೂ ಮೂರ್ತಿಗಳು ಮಾರಾಟ ಆಗಿದ್ದವು ಎಂದು ಗಣೇಶ ಮೂರ್ತಿ ತಯಾರಕರ ಸಂಘದ ಜಿಲ್ಲಾಧ್ಯಕ್ಷ ಮುತ್ತಣ್ಣ ಭರಡಿ ತಿಳಿಸಿದರು. ಅಲ್ಲದೆ, ವ್ಯಾಪಾರ ಸಂಪೂರ್ಣ ಮಂದಗತಿಯಲ್ಲಿದ್ದು, ಶನಿವಾರ ಇದೇ ಸ್ಥಿತಿ ಮುಂದುವರಿದರೆ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts