More

    ಗಡಿಯಲ್ಲೇ ಹುಬ್ಬಳ್ಳಿ ವ್ಯಕ್ತಿಯ ಅಂತ್ಯಕ್ರಿಯೆ

    ನಿಪ್ಪಾಣಿ (ಬೆಳಗಾವಿ): ಮಹಾರಾಷ್ಟ್ರದಿಂದ ರಾಜ್ಯಕ್ಕೆ ತರುತ್ತಿದ್ದ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಚೆಕ್​ಪೋಸ್ಟ್​ನಲ್ಲಿ ಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕೊಗನೋಳಿ ಗ್ರಾಮ ವ್ಯಾಪ್ತಿಯ ಸರ್ಕಾರಿ ಜಾಗ(ಗೋಮಾಳ)ದಲ್ಲೇ ಅಂತ್ಯಕ್ರಿಯೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

    ಮುಂಬೈ ನಗರದಲ್ಲಿ ನೆಲೆಸಿದ್ದ ಹುಬ್ಬಳ್ಳಿ ಮೂಲದ ವಿಜಯಕುಮಾರ ಕಾಳಗೆ (63) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಹುಬ್ಬಳ್ಳಿಯಲ್ಲಿ ನೆರವೇರಿಸಲು ನಿರ್ಣಯಿಸಿದ್ದ ಕುಟುಂಬಸ್ಥರು, ಮೃತದೇಹವನ್ನು ಹುಬ್ಬಳ್ಳಿಗೆ ತರುತ್ತಿದ್ದರು. ಮಂಗಳವಾರ ನಸುಕಿನ ಜಾವ 3 ಗಂಟೆಗೆ ನಿಪ್ಪಾಣಿಯ ಕೊಗನೋಳಿ ಚೆಕ್​ಪೋಸ್ಟ್ ಬಳಿ ಮೃತದೇಹವಿರುವ ವಾಹನವನ್ನು ಸಿಬ್ಬಂದಿ ತಡೆದರು. ಕುಟುಂಬದವರು ಪೊಲೀಸರಿಗೆ ಪರಿಪರಿಯಾಗಿ ಕೇಳಿಕೊಂಡರು. ಆದರೆ, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸಲು ಅನುಮತಿ ಇಲ್ಲದ್ದರಿಂದ ಪೊಲೀಸರು ಗಡಿ ದಾಟಲು ಅವಕಾಶ ನೀಡಲಿಲ್ಲ. ಆದರೆ, ರಾಜ್ಯದ ಗಡಿಭಾಗದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲು ಅನುಮತಿ ನೀಡಿದರು.

    ಅಂತ್ಯಕ್ರಿಯೆಯಲ್ಲಿ ಮೃತರ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಚಿಕ್ಕೋಡಿ ಡಿವೈಎಸ್ಪಿ ಮನೋಜಕುಮಾರ ನಾಯಿಕ, ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ ಸತ್ಯನಾಯಿಕ, ತಾಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್​ಐ ಬಿ.ಎಸ್. ತಳವಾರ ಇತರರು ಇದ್ದರು.

    ನಾಲ್ಕನೇ ಅಂತ್ಯಕ್ರಿಯೆ ಪ್ರಕರಣ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಇನ್ನೂ ಪ್ರವೇಶ ನಿರಾಕರಿಸಲಾಗುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದವರಾಗಿದ್ದು ಮಹಾರಾಷ್ಟ್ರದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಈ ರೀತಿ ಗಡಿಯಲ್ಲೇ ನೆರವೇರಿಸಿದ್ದು ಇದು ನಾಲ್ಕನೇಯ ಘಟನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts