More

    ಗಡಿಯಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೆಲಸವಾಗಲಿ

    ಸೇಡಂ ಕಲಬುರಗಿ: ತಾಲೂಕಿನ ಕೆಲ ಗ್ರಾಮಗಲ್ಲಿ ಅನ್ಯ ಭಾಷೆಯ ಪ್ರಭಾವ ಹೆಚ್ಚಾಗಿದ್ದು, ಗಡಿಯಲ್ಲಿನ ವಿದ್ಯಾರ್ಥಿಗಳು ಕನ್ನಡ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸಲಹೆ ನೀಡಿದರು.

    ಬಟಗೇರಾ(ಬಿ) ಗ್ರಾಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಸೃಷ್ಟಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ಉತ್ಸವ ಹಾಗೂ ವಿವಿಧ ಸಾಧಕರಿಗೆ ಸೃಷ್ಟಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಭೂಮಿಗೆ ತಾಯಿ ಸ್ಥಾನ ನೀಡಿದ ಜಗತ್ತಿನ ಏಕೈಕ ದೇಶ ಭಾರತ. ನಮ್ಮಲ್ಲಿ ಜಲ, ನೆಲ, ನಿಸರ್ಗ ಹೀಗೆ ಎಲ್ಲವನ್ನು ಪೂಜ್ಯ ಭಾವದಿಂದ ಕಾಣುತ್ತೇವೆ. ಶ್ರೀಮಂತ ಸಂಸ್ಕೃತಿಯನ್ನು ಅಳವಡಿಸಿಕೊಂಡ ಹೆಮ್ಮೆಯ ದೇಶ ನಮ್ಮದಾಗಿದೆ ಎಂದು ಹೇಳಿದರು.

    ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಸದೃಢವಾಗಿದೆ. ಆದರೆ ಪಟ್ಟಣ ಪ್ರದೇಶದ ಜನರು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಸಿಟಿ ಪ್ರದೇಶದಲ್ಲಿಯೇ ಭಾಷೆ ಉಳಿಸುವ ಕೆಲಸ ಆಗಬೇಕಿದೆ ಎಂದರು.

    ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ತೆಲ್ಕೂರ ಪಾಟೀಲ್ ಫೌಂಡೇಷನ್ ಮುಖ್ಯಸ್ಥೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ ಮಾತನಾಡಿದರು.

    ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪೂಜಾರಿ, ಪ್ರಮುಖರಾದ ಭೀಮರೆಡ್ಡಿ ಹಾಶನಪಲ್ಲಿ, ಅನವೇಶರೆಡ್ಡಿ, ವೀರಾರೆಡ್ಡಿ ಯಾನಾಗುಂದಿ, ರುದ್ರಗೌಡ ಪಾಟೀಲ್, ಮಹಾದೇವ ಗಂವ್ಹಾರ್, ರಾಜಶ್ರೀ ಗೌಡ್ಸ್, ಶಿವರಾಜ ಅಂಡಗಿ ಇತರರಿದ್ದರು.

    ಮಣಿಕಂಠ ಪ್ರಾರ್ಥಿಸಿದರು. ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಶಿಕ್ಷಕಿ ಪದ್ಮಾ ನಿರೂಪಣೆ ಮಾಡಿದರು.

    ನಾಲ್ವರು ಸಾಧಕರಿಗೆ ಪುರಸ್ಕಾರ : ಗಡಿನಾಡು ಕನ್ನಡ ಉತ್ಸವದಲ್ಲಿ ಗಣನೀಯ ಸಾಧನೆ ಮಾಡಿದ ತೆಲ್ಕೂರ ಫೌಂಡೇಷನ್ ಮುಖ್ಯಸ್ಥೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್, ರಂಗ ಮೇಷ್ಟ್ರು ಅಶೋಕ ತೊಟ್ನಳಿ, ಯುವ ಬರಹಗಾರ ವಿಜಯ ಭಾಸ್ಕರರಡ್ಡಿ ಅವರಿಗೆ ಸೃಷ್ಟಿ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಗಡಿ ಭಾಗದಲ್ಲಿ ಕನ್ನಡ ಭಾಷೆ ದುಸ್ಥಿತಿಗೆ ತಲುಪಿದೆ. ಹೀಗಾಗಿ ರಾಜ್ಯದ ಬಾರ್ಡರ್ನಲ್ಲಿ ಕನ್ನಡ ಶಾಲೆ ಉಳಿಸುವುದರ ಜತೆಗೆ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಂದ ಮಾತ್ರ ಸಮಾಜ ಹಾಗೂ ದೇಶಕ್ಕೆ ಅಮೂಲ್ಯ ಕೊಡುಗೆ ಸಿಕ್ಕಿದೆ.
    | ಶ್ರೀ ಸದಾಶಿವ ಸ್ವಾಮೀಜಿ, ಸೇಡಂ

    ನಾಡಿನ ಪ್ರತಿ ಪ್ರಜೆಯೂ ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಬೇಕು. ನೆಲ, ಜಲ, ಭಾಷೆಯ ವಿಷಯ ಬಂದಾಗ ಎಲ್ಲರೂ ಒಗ್ಗೂಡಿ ಹೋರಾಟಕ್ಕಿಳಿಯಬೇಕು. ಕನ್ನಡ ಉಳಿಸಿ, ಬೆಳೆಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ.
    | ರಾಜಕುಮಾರ ಪಾಟೀಲ್ ತೆಲ್ಕೂರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts