More

    ಗಡಿಯನ್ನು ನಾವು ಹರಾಜಿಗಿಟ್ಟಿಲ್ಲ

    ಕಾರವಾರ: ಮಹಾರಾಷ್ಟ್ರ ಮತ್ತೆ ಗಡಿ ಕ್ಯಾತೆ ತೆಗೆದಿದೆ. ಅಲ್ಲಿನ ಸಿಎಂ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೀಡಿದ ಹೇಳಿಕೆ ಗಡಿ ಪ್ರದೇಶದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

    ‘ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಹಾಗೂ ಸಂಸ್ಕೃತಿ ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದು ಗಡಿ ವಿವಾದಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ನೀಡುವ ಗೌರವವಾಗಿದೆ’ ಎಂದು ಸಿಎಂಒ ಆಫ್ ಮಹಾರಾಷ್ಟ್ರ ಖಾತೆಯಲ್ಲಿ ಜ.17 ರಂದು ಮರಾಠಿ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ.

    ಅದಕ್ಕೆ ಕನ್ನಡದ ಹಲವು ನೆಟ್ಟಿಗರು ಕನ್ನಡದಲ್ಲೇ ಖಡಕ್ ಉತ್ತರ ಕೊಟ್ಟಿದ್ದಾರೆ. ಅದರ ಜತೆ ಈಗ ಜಿಲ್ಲೆಯ ಹಲ ಪ್ರಮುಖರೂ ಮಹಾರಾಷ್ಟ್ರ ಸಿಎಂ ಕಚೇರಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹರಾಜಿಗಿಟ್ಟಿಲ್ಲ: ಕರ್ನಾಟಕದ ಗಡಿ ಪ್ರದೇಶ ನಮ್ಮದು ಎಂದು ಕೂಗಲು ನಾವು ಆ ಪ್ರದೇಶಗಳನ್ನು ಹರಾಜಿಗಿಟ್ಟಿಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ತಿರುಗೇಟು ನೀಡಿದ್ದಾರೆ.

    ನಾನು ಕರ್ನಾಟಕದ ಗಡಿ ಪ್ರದೇಶವನ್ನು, ಮರಾಠಾ ಸಮುದಾಯವನ್ನು ಪ್ರತಿನಿಧಿಸಿ ಶಾಸಕಿಯಾಗಿದ್ದೇನೆ. ಆದರೆ, ಕರ್ನಾಟಕದ ನೆಲ, ಜಲವನ್ನು ಬಳಸಿಕೊಂಡು ಇಲ್ಲಿನವರಾಗಿಯೇ ಇದ್ದೇವೆ. ಉದ್ಧವ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದು, ಅಲ್ಲಿ ಅಭಿವೃದ್ಧಿ ಕೆಲಸ ಮಾಡಿ ಅಲ್ಲಿನ ಜನರ ವಿಶ್ವಾಸ ಗಳಿಸಲಿ. ಅದು ಬಿಟ್ಟು ಪದೇ ಪದೆ ನಮ್ಮ ತಂಟೆಗೆ ಬರಬೇಡಿ. ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಹೇಳಿಕೆ ನೀಡುವುದು ನ್ಯಾಯಾಂಗ ನಿಂದನೆಯಾಗಲಿದೆ. ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಸಾಂಗ್ಲಿ ಹೀಗೆ ಮಹಾರಾಷ್ಟ್ರದ 18 ವಿಧಾನಸಭಾ ಕ್ಷೇತ್ರದಗಳಲ್ಲಿ ಕನ್ನಡಿಗರೇ ನಿರ್ಣಾಯಕರಾಗಿದ್ದಾರೆ. ಹಾಗೆಂದು ಕರ್ನಾಟಕ ಈ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಪ್ರಯತ್ನ ಮಾಡಿಲ್ಲ. ಸಿಎಂ ಉದ್ಧವ ಠಾಕ್ರೆ ಈಗ ರಾಜಕೀಯ ಉದ್ದೇಶಕ್ಕಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

    ಕಸಾಪ ಖಂಡನೆ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗರಾಜ ಹರಪನಹಳ್ಳಿ, ಈ ಸಂಬಂಧ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರ ಸಿಎಂ ಕಚೇರಿಯ ಹೇಳಿಕೆಯನ್ನು ಕಸಾಪ ಬಲವಾಗಿ ಖಂಡಿಸುತ್ತದೆ. ಠಾಕ್ರೆ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಸಂವಿಧಾನ,ಭಾರತದ ಒಕ್ಕೂಟ ವ್ಯವಸ್ಥೆ ಅರ್ಥ ಮಾಡಿಕೊಂಡು ನಡೆಯಬೇಕು. ಭಾಷಾವಾರು ಪ್ರಾಂತಗಳ ರಚನೆ ಈಗ ಮುಗಿದ ಅಧ್ಯಾಯ.ಅದನ್ನು ಮತ್ತೆ ಕೆಣಕಬಾರದು. ಎಂಇಎಸ್ ನ್ನು ಖುಷಿಪಡಿಸಲು ಇಂತಹ ಹೇಳಿಕೆ ನೀಡಬಾರದು. ಇದು ರಾಜಪ್ರಭುತ್ವದ ಕಾಲವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ. ತಮ್ಮ ಸ್ಥಾನದ ಮಹತ್ವ ಅರಿತು ಮಾತಾಡಬೇಕು .ಮುಂಬಯಿನಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ಇದೇ ಈ ದೇಶದ ಸೌಂದರ್ಯ. ಇಷ್ಟು ಅರಿತರೆ ಸಾಕು. ಭಾಷೆಗಳು ಮನುಷ್ಯರ ಬೆಸೆಯಬೇಕು; ವಿಭಜಿಸಬಾರದು ಎಂದಿದ್ದಾರೆ.

    ಮೌನ ವಹಿಸಿದ ಎಂಪಿ: ಮಹಾರಾಷ್ಟ್ರ ಸಿಎಂ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಲು ಎಂಪಿ ಅನಂತಕುಮಾರ ಹೆಗಡೆ ನಿರಾಕರಿಸಿದ್ದಾರೆ. ದಿಶಾ ಸಭೆ ನಡೆಸುವ ಸಂಬಂಧ ಸೋಮವಾರ ಆಗಮಿಸಿದ್ದ ಅವರ ಬಳಿ ಮಾಧ್ಯಮ ಪ್ರತಿನಿಧಿಗಳು ಈ ಸಂಬಂಧ ಪ್ರಶ್ನಿಸಿದಾಗ, ನಮಸ್ಕಾರ ಎಂದಷ್ಟೇ ಹೇಳಿ ತೆರಳಿದರು.

    ಮಹಾರಾಷ್ಟ್ರ ಸಿಎಂಗೆ ಕೆಲಸವಿಲ್ಲ: ಉದ್ಧವ ಠಾಕ್ರೆಗೆ ಬೇರೆ ಕೆಲಸವಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಗಡಿ ವಿವಾದ ಕೆಣಕುತ್ತಿದ್ದಾರೆ ಎಂದು ಪ್ರಭು ಚೌಹಾಣ ಹೇಳಿದರು.

    ಮರಾಠಿ ಮಾತನಾಡುವ ಕರ್ನಾಟಕದ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಠಾಕ್ರೆ ಟ್ವೀಟ್​ಗೆ ಸಚಿವ ಚೌಹಾಣ ಪ್ರತಿಕ್ರಿಯೆ ನೀಡಿದರು.

    ‘ತೀನ್ ತಗಡಾ-ಕಾಮ್ ಬಿಗಡಾ’ (ಮೂರು ಅಬಲರು ಸೇರಿ ಕೆಲಸ ಕೆಡಿಸಿದರು) ಎಂಬಂತೆ ಮಹಾರಾಷ್ಟ್ರದಲ್ಲಿ ಎನ್​ಸಿಪಿ, ಶಿವಸೇನೆ, ಕಾಂಗ್ರೆಸ್ ಮೈತ್ರಿ ಸರ್ಕಾರದ ಪರಿಸ್ಥಿತಿಯಾಗಿದೆ. ಅವರ ಮಾತಿಗೆ ಮಹತ್ವ ವಿಲ್ಲ. ಕರ್ನಾಟಕ ಸರ್ಕಾರದ ಭಾಗವಾದ ನಾನು ಹೇಳುತ್ತಿದ್ದೇನೆ. ಕರ್ನಾಟಕದ 6 ಕೋಟಿ ಜನ ನಮ್ಮ ದೇವರು. ರಾಜ್ಯದ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts