More

    ಗಡಿನಾಡು ಕನ್ನಡ ಉತ್ಸವ ಅರ್ಥಪೂರ್ಣ

    ಹನೂರು: ರಾಜ್ಯ ಸರ್ಕಾರಿ ನೌಕರರ ಸಂಘ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮವನ್ನು ಮಾದಪ್ಪನ ಸನ್ನಿಧಿಯಲ್ಲಿ ಆಯೋಜಿಸಿರುವುದು ಮೆಚ್ಚುವ ಸಂಗತಿ ಎಂದು ಜಿಲ್ಲೆ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಣ್ಣಿಸಿದರು.

    ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ಬಯಲು ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶನಿವಾರ ಅಯೋಜಿಸಿದ್ದ ಗಡಿನಾಡು ಉತ್ಸವ ಕಾರ್ಯಕ್ರಮವನ್ನು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳದ ಗಡಿಯಾಗಿದೆ. ಇಂತಹ ಗಡಿ ಜಿಲ್ಲೆಯಲ್ಲಿ ಗಡಿನಾಡು ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಸಂಘವು ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ, ಸ್ಥಳೀಯ ಸಂಸ್ಕೃತಿ ಹಾಗೂ ಜನರ ಜೀವನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ವಿಚಾರ. ಜತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಗಳು ಇನ್ನಷ್ಟು ಹೆಚ್ಚಾಗಬೇಕು. ಅಲ್ಲದೆ ನಾಡು, ನುಡಿ, ಭಾಷೆಯ ಸಂರಕ್ಷಣೆ ವಿಷಯದಲ್ಲೂ ಸರ್ಕಾರದ ಜತೆಯು ಸಂಘವು ಕೈಜೋಡಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.

    ಮಹದೇಶ್ವರನನ್ನು ಪ್ರಾರ್ಥಿಸೋಣ: ಬೇಸಿಗೆಗೆ ಮುನ್ನವೇ ಅತಿಯಾದ ಬಿಸಿಲಿನ ವಾತಾವರಣದಿಂದ ಪೂರ್ಣ ಬೇಸಿಗೆಯನ್ನು ಅನುಭವಿಸುವಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಆದ್ದರಿಂದ ಆದಷ್ಟು ಬೇಗ ಮಳೆಯಾಗಿ ನಾಡು ಸಮೃದ್ಧಿಯಿಂದ ಕೂಡಿರಲಿ ಎಂದು ಎಲ್ಲರೂ ಮಹದೇಶ್ವರನನ್ನು ಪ್ರಾರ್ಥಿಸೋಣ. ಜತೆಗೆ ಮ. ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಕರ್ಯಗಳು ಸಿಗಲಿ ಎಂದು ಬೇಡಿಕೊಳ್ಳೋಣ ಎಂದು ತಿಳಿಸಿದರು.

    ಸಾಹಿತ್ಯಕ್ಕೆ ಜಿಲ್ಲೆ ಕೊಡುಗೆ ಅಪಾರ: ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ ಜಿಲ್ಲೆ ಚಾಮರಾಜನಗರ. ಇಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಜಪ್ಪಾಜಿ, ಮಹದೇಶ್ವರರು ಹಾಗೂ ಇನ್ನು ಅನೇಕ ಪವಾಡ ಪುರುಷರ ನೆಲೆ ಬೀಡಾಗಿದ್ದು, ಮಂಟೇಸ್ವಾಮಿ ಮಹಾಕಾವ್ಯ ವಿಶ್ವದ 2ನೇ ಮಹಾಕಾವ್ಯವಾಗಿ ಹೊರ ಹೊಮ್ಮಿರುವುದು ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತದೆ. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಅಕಾಡೆಮಿ ಪ್ರಶಸ್ತಿಗಳು ನಿರಂತರವಾಗಿ ಪಡೆದುಕೊಳ್ಳುತ್ತಿರುವುದು ಜಿಲ್ಲೆಗೆ ಸಂದ ಗೌರವ. ಹಾಗಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಕೊಡುಗೆ ಅಪಾರ ಎಂದು ತಿಳಿಸಿದರು.

    ಮುಚ್ಚುವ ಸ್ಥಿತಿಗೆ ಕನ್ನಡ ಶಾಲೆಗಳು: ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ಮಾತನಾಡಿ, ಚಾಮರಾಜನಗರ ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಇಲ್ಲಿ ಗೋಪಾಲಸ್ವಾಮಿ, ಚಾಮರಾಜೇಶ್ವರ, ಬಿಳಿಗಿರಿ ರಂಗನಾಥ ಸ್ವಾಮಿ, ಮಹದೇಶ್ವರ ಸ್ವಾಮಿ ದೇಗುಲಗಳ ಜತೆಗೆ ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹೊಂದಿರುವುದರ ಮೂಲಕ ನೈಸರ್ಗಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಕರ್ನಾಟಕ ನಾಮಕರಣವಾದ ಬಳಿಕ ಕನ್ನಡ ರಾಜ್ಯೋತ್ಸವ, ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದ್ದು, ಕೆಲವು ಶಾಲೆಗಳು ಮುಚ್ಚುವ ಹಂತವನ್ನು ತಲುಪಿರುವುದು ನಿಜಕ್ಕೂ ವಿಷಾದನೀಯ. ಹಾಗಾಗಿ ಈ ಬಗ್ಗೆ ಚಿಂತನೆ ನಡೆಸಿ ಯೋಜನೆಯನ್ನು ರೂಪಿಸಿಕೊಳ್ಳುವುದು ಅಗತ್ಯವೂ, ಅನಿವಾರ್ಯವೂ ಆಗಿದೆ ಎಂದರು.

    ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಂಜುಂಡಪ್ಪ ವರದಿ ಅನ್ವಯ ಚಾ.ನಗರ ಜಿಲ್ಲೆಯನ್ನು ತೀರಾ ಹಿಂದುಳಿದ ಜಿಲ್ಲೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಜತೆಗೆ ಶೈಕ್ಷಣಿಕವಾಗಿ 15ನೇ ಸ್ಥಾನದಲ್ಲಿದ್ದ ಜಿಲ್ಲೆ 7ನೇ ಸ್ಥಾನಕ್ಕೆ ಜಿಗಿದಿರುವುದು ಅಭಿವೃದ್ಧಿಯ ಸಂಕೇತ ಎಂದು ಹೇಳಿದರು.

    ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಸಿ.ನಾಗಣ್ಣ, ಗೋಪಾಲ್ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ, ಗೌರವಾಧ್ಯಕ್ಷ ವೆಂಕಟೇಶಯ್ಯ, ಖಜಾಂಚಿ ಸಿದ್ದರಾಮಣ್ಣ, ಜಿಲ್ಲಾಧ್ಯಕ್ಷ ಚಂದ್ರಶೇಖರ್ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್, ಕೊಳ್ಳೇಗಾಲ ತಹಸೀಲ್ದಾರ್ ಮಂಜುಳಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts