More

    ಗಂಟೆಗೂ ಹೆಚ್ಚು ಸುರಿದ ಭಾರಿ ಮಳೆ

    ಹುಬ್ಬಳ್ಳಿ: ಶುಕ್ರವಾರ ಸಂಜೆ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿಯಿತು. ಇದರಿಂದ ಜನಜೀವನದಲ್ಲಿ ತೀವ್ರ ವ್ಯತ್ಯಯ ಉಂಟಾಯಿತು.

    ಬೆಳಗ್ಗೆ ಎಂದಿನಂತೆ ಬಿಸಿಲಿತ್ತು. ಮಧ್ಯಾಹ್ನದ ನಂತರ ವಾತಾವರಣ ಬದಲಾಗಿ, ಮಳೆ ಬರುವ ಮುನ್ಸೂಚನೆ ಸಿಕ್ಕಿತ್ತು. ಸಂಜೆ ಹೊತ್ತಿಗೆ ಮೋಡ ಮುಸುಕಿ, ಧೋ ಎಂದು ಆಲಿಕಲ್ಲು ಸಹಿತ ಮಳೆಯಾಯಿತು. ಭಾರಿ ಪ್ರಮಾಣದಲ್ಲಿ ಗಾಳಿಯೂ ಬೀಸಿದ್ದರಿಂದ ದೇಶಪಾಂಡೆ ನಗರ, ಗೋಕುಲ ರಸ್ತೆ, ಸೆಟ್ಲಮೆಂಟ್ ಪ್ರದೇಶದಲ್ಲಿ ಮರಗಳು ಕಿತ್ತು ಬಿದ್ದಿವೆ. ಅಲ್ಲಲ್ಲಿ ಮರದ ಟೊಂಗೆಗಳು ಸಹ ಮುರಿದುಬಿದ್ದು, ಮೇಲಿಂದ ಮೇಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

    ವಾರಾಂತ್ಯದ ಲಾಕ್​ಡೌನ್ ನಿಮಿತ್ತ ಶನಿವಾರ ಮತ್ತು ಭಾನುವಾರ ಹೊರಗೆ ಬರುವುದು ಕಷ್ಟವಾಗಬಹುದು ಎಂದು ಅಗತ್ಯ ವಸ್ತುಗಳನ್ನು ಖರೀದಿಸದಲು ಸಾರ್ವಜನಿಕರು ಮಾರುಕಟ್ಟೆಗೆ ಬಂದಿದ್ದರು. ಇದೇ ವೇಳೆಯಲ್ಲಿ ಜೋರಾಗಿ ಮಳೆ ಸುರಿದಿದ್ದರಿಂದ ಬೇರೆ ಬೇರೆ ಭಾಗದಲ್ಲಿ ಒಟ್ಟು ಸಾವಿರಾರು ಜನರು ಗಂಟೆಗಟ್ಟಲೇ ಸಂಚಾರ ಸಾಧ್ಯವಾಗದೇ ಅವಕಾಶ ಸಿಕ್ಕಲ್ಲೇ ನಿಲ್ಲುವಂತಾಗಿತ್ತು. ನಗರದ ಹಲವಾರು ರಸ್ತೆಗಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಯಿತು.

    ತಗ್ಗು ಪ್ರದೇಶದ ಕೆಲವು ಬಡಾವಣೆಗಳಲ್ಲಿ ಮನೆ ಆವರಣಕ್ಕೂ ನೀರು ನುಗ್ಗಿತ್ತು. ಹವಾಮಾನ ಮುನ್ಸೂಚನೆಗಳ ಪ್ರಕಾರ ಶನಿವಾರವೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

    ಕಟ್ಟಡ ಕುಸಿದು ಹಾನಿ : ಮಳೆ ಸುರಿಯುತ್ತಿದ್ದಾಗ ಹಳೇ ಕಟ್ಟಡದ ಗೋಡೆ ಕುಸಿದು ಎರಡು ಕಾರುಗಳಿಗೆ ಹಾನಿಯಾದ ಘಟನೆ ಕಾರವಾರ ರಸ್ತೆಯ ಇಎಸ್​ಐ ಆಸ್ಪತ್ರೆ ಸಮೀಪದಲ್ಲಿ ಸಂಭವಿಸಿದೆ.

    ನಿತಿನ್ ಮೊಹಾಂಕ್ ಎಂಬುವರಿಗೆ ಸೇರಿದ ಕಾರುಗಳು ಜಖಂಗೊಂಡಿವೆ. ಇವರ ಪಕ್ಕದ ಕಾಂಪೌಂಡ್​ನ ಹಳೇ ಕಟ್ಟಡದ ಗೋಡೆ ಕುಸಿದಿದೆ. ಸುದೈವದಿಂದ ಪ್ರಾಣಹಾನಿಯಂಥ ಅನಾಹುತ ಸಂಭವಿಸಿಲ್ಲ. ಕಟ್ಟಡದ ಗೋಡೆ ಹಳೆಯದಾಗಿದ್ದು, ಕುಸಿಯುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ತೆಗೆಸಲು ನಿತಿನ್ ಮೊಹಾಂಕ್ ಕುಟುಂಬದವರು ಹೇಳಿದ್ದರಂತೆ. ಆದರೆ ಸಂಬಂಧಪಟ್ಟವರು ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts