More

    ಗಂಗಾಜಲ ತಾಂಡಾದಲ್ಲಿ ಅಂತ್ಯಸಂಸ್ಕಾರಕ್ಕೆ ವಿರೋಧ

    ರಾಣೆಬೆನ್ನೂರ: ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನಗರದ ಹೊರವಲಯದ ಗಂಗಾಜಲ ತಾಂಡಾ ಬಳಿಯ ಸರ್ಕಾರಿ ಭೂಮಿಯಲ್ಲಿ ನಡೆಸಲು ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿ, ಮೇಡ್ಲೇರಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.

    ಕಳೆದ ವಾರ ಮಹಿಳೆಯೊಬ್ಬರು ಮೃತಪಟ್ಟಾಗ ಈ ಭಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ತಾಲೂಕು ಆಡಳಿತ ಮುಂದಾದಾಗ ಪ್ರತಿಭಟಿಸಿ ವಾಪಸ್ ಕಳುಹಿಸಿದ್ದೇವೆ. ಮತ್ತೆ ಮಂಗಳವಾರ ರಾತ್ರಿ ಏಕಾಏಕಿ ಬಂದು ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿರುವುದು ಖಂಡನೀಯ. ಇದರಿಂದ ತಾಂಡಾ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ವಣವಾಗಿದೆ. ಜಿಲ್ಲಾಡಳಿತ ಬೇರೆಡೆ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಬಂದು ನ್ಯಾಯ ಒದಗಿಸಿಕೊಡಬೇಕು. ಅಲ್ಲಿಯವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪಿಎಸ್​ಐ ಮೇಘರಾಜ ಹಾಗೂ ಶಹರ ಠಾಣೆ ಪಿಎಸ್​ಐ ಪ್ರಭು ಕೆಳಗಿನಮನಿ ಮಾತನಾಡಿ, ‘ಅಂತ್ಯ ಸಂಸ್ಕಾರ ಸ್ಥಳ ತಾಂಡಾ ಬಿಟ್ಟು 2-3 ಕಿ.ಮೀ. ದೂರವಿದೆ. ನಿಮಗೆ ತೊಂದರೆ ಆಗುತ್ತಿದ್ದರೆ, ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತದ ಬಳಿ ಹೋಗಿ ಮನವಿ ಮಾಡಿಕೊಳ್ಳಿ. ಅದನ್ನು ಬಿಟ್ಟು ಗಂಟೆಗಟ್ಟಲೆ ರಸ್ತೆ ಬಂದ್ ಮಾಡಿ, ಇತರರಿಗೆ ತೊಂದರೆ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಇದಕ್ಕೂ ಪ್ರತಿಭಟನಾಕಾರರು ಒಪ್ಪದಿದ್ದಾಗ, ಪೊಲೀಸರು ಲಾಠಿ ಬೀಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಪ್ರತಿಭಟನೆ ಹಿಂಪಡೆದುಕೊಂಡರು. ಗಂಗಾಜಲ, ಗೋವಿಂದ ಬಡಾವಣೆ, ಬಸಲಿಕಟ್ಟಿ ತಾಂಡಾಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಕಾನೂನು ಕ್ರಮಕ್ಕೆ ಒತ್ತಾಯ
    ಕರೊನಾ ತಡೆಯುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್ ತೆರವುಗೊಳಿಸಿದರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ. ಗುಂಪು ಕಟ್ಟಿ ನಿಲ್ಲುವುದನ್ನು ನಿಷೇಧಿಸಿದೆ. ಆದರೆ, ತಾಂಡಾ ಬಳಿ ಪ್ರತಿಭಟನೆ ನಡೆಸಿದ ನಿವಾಸಿಗಳು ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆಯಿಂದಾಗಿ ಗಂಟೆಗಟ್ಟಲೇ ಕಾಯ್ದುನಿಂತಿದ್ದ ವಾಹನ ಸವಾರರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts