More

    ಖೋಟಾ ನೋಟು ಜಾಲದ ಇಬ್ಬರ ಸೆರೆ 

    ದಾವಣಗೆರೆ: ಕಲರ್ ಜೆರಾಕ್ಸ್ ಯಂತ್ರದಿಂದ ಖೋಟಾ ನೋಟುಗಳನ್ನು ತಯಾರಿಸಿ, ಚಲಾವಣೆ ಮಾಡುತ್ತಿದ್ದ ಜಾಲವೊಂದರ ಇಬ್ಬರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು, 1,20,700 ರೂ. ಮೊತ್ತದ ನಕಲಿ ನೋಟುಗಳ ಜತೆ ಒಂದು ಜೆರಾಕ್ಸ್ ಯಂತ್ರ, 2 ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

    ದಾವಣಗೆರೆ ಯಲ್ಲಮ್ಮನಗರದ ಎಸ್. ಅಶೋಕ ಹಾಗೂ ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದ ಹಾಲೇಶಿ ಆಲಿಯಾಸ್ ಅರಸನಾಳು ಹಾಲೇಶಿ ಬಂಧಿತ ಆರೋಪಿಗಳು ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಯಲ್ಲಮ್ಮನಗರದ 4ನೇ ಮುಖ್ಯರಸ್ತೆ, 6ನೇ ಕ್ರಾಸ್‌ನಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಈ ದಾಳಿ ನಡೆಸಿದ್ದು, 100 ರೂ. ಮುಖಬೆಲೆಯ 26, 200 ರೂ. ಮುಖಬೆಲೆಯ 133, 500 ರೂ. ಮುಖಬೆಲೆಯ 183 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
    ಮರಳು ವ್ಯಾಪಾರ ನಡೆಸುವ ಆರೋಪಿಗಳು ಎರಡು ತಿಂಗಳ ಹಿಂದಷ್ಟೆ ಕಲರ್ ಜೆರಾಕ್ಸ್ ಯಂತ್ರವನ್ನು ಖರೀದಿಸಿದ್ದರು. ಇದರಿಂದ ದಪ್ಪ ಕಾಗದದಲ್ಲಿ ನೋಟಿನ ಜೆರಾಕ್ಸ್ ಪ್ರತಿ ತೆಗೆದು, ಮಧ್ಯದ ಗೆರೆಗೆ ಬಣ್ಣ ಹಾಕುತ್ತಿದ್ದರು.
    ಆರೋಪಿ ಹಾಲೇಶಿ 2019ರಲ್ಲಿ ಹರಪನಹಳ್ಳಿಯಲ್ಲಿ ಮೂರು ನೋಟುಗಳನ್ನು ಚಲಾವಣೆ ಮಾಡಿದ್ದರ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ತಂಡ ತಯಾರಿಸಿದ ನೋಟುಗಳಲ್ಲಿ 4-5 ನೋಟುಗಳು ಚಲಾವಣೆ ಆಗಿರಬಹುದು. ಆದರೆ ದೊಡ್ಡ ಮೊತ್ತದ ಹಣ ಚಲಾವಣೆ ಆಗಿದೆಯೆ ಎಂಬುದರ ತನಿಖೆ ನಡೆಯಬೇಕಿದೆ ಎಂದು ಹೇಳಿದರು.
    ಐದಕ್ಕೂ ಹೆಚ್ಚು ಖೋಟಾ ನೋಟುಗಳು ಪತ್ತೆಯಾದಲ್ಲಿ ಆರ್‌ಬಿಐಗೆ ಮಾಹಿತಿ ನೀಡುವುದು ಕಡ್ಡಾಯ. ಹೀಗಾಗಿ ಇದನ್ನು ಆರ್‌ಬಿಐ ಗಮನಕ್ಕೆ ತರಲಾಗುವುದು. ಪ್ರಕರಣವನ್ನು ಸಿಇಎನ್ ಠಾಣೆಗೆ ವಹಿಸಲಾಗುವುದು. ಡಿಸಿಆರ್‌ಬಿ ಘಟಕದ ಡಿವೈಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದಲ್ಲಿ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ರಾಮಗೊಂಡ ಬಸರಗಿ, ಬಿ.ಎಸ್.ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts