More

    ಖಾಸಗಿ ವಾಹನ ಸಂಚರಿಸಿದರೆ ಜಪ್ತಿ

    ಕಾರವಾರ: ಮೇ 10 ರಿಂದ ಜಾರಿಯಾಗುತ್ತಿರುವ ಲಾಕ್​ಡೌನ್​ನಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ವಾಹನಗಳ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಟ್ಟುನಿಟ್ಟಿನ ನಿಯಮ ಜಾರಿಗೆ ನಿರ್ಧರಿಸಲಾಗಿದೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆದರೆ, ವಾಹನವನ್ನು ತರುವುದಕ್ಕೆ ಅವಕಾಶವಿಲ್ಲ. ವಾಹನ ತಂದಲ್ಲಿ ಅದನ್ನು ಸೀಜ್ ಮಾಡಲಾಗುವುದು. ಇನ್ನೂ ಎರಡು ತಿಂಗಳವರೆಗೂ ಸೀಜ್ ಮಾಡಿದ ವಾಹನ ಬಿಡುವ ಸಾಧ್ಯತೆ ಕಡಿಮೆ ಎಂದರು.

    ನಡೆದುಕೊಂಡು ಬಂದು ತರಕಾರಿ, ಹಣ್ಣು, ಹಾಲು, ಮೀನು, ಮಾಂಸ, ದಿನಸಿಗಳನ್ನು ಖರೀದಿಸಬಹುದು. ಆ ಸಮಯದ ನಂತರವೂ ಈ ಅಗತ್ಯ ವಸ್ತುಗಳನ್ನು ತಳ್ಳು ಗಾಡಿಗಳ ಮೇಲೆ ಕೊಂಡೊಯ್ದು ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದರು.

    ಕ್ವಾರಂಟೈನ್ ಸೀಲ್:

    ಅಂತಾರಾಜ್ಯ ಹಾಗೂ ಅಂತರ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಸೀಲ್ ಹಾಕಲು ನಿರ್ಧರಿಸಲಾಗಿದೆ. ಸದ್ಯ ಗೋವಾ-ಮಾಜಾಳಿ ಗಡಿ ಹಾಗೂ ಅನಮೋಡ ಗಡಿಯಲ್ಲಿ ಮಾತ್ರ ಮೇ 10 ರಿಂದಲೇ ಕ್ವಾರಂಟೈನ್ ಸೀಲ್ ಹಾಕಲಾಗುವುದು. ಸೀಲ್ ಹಾಕುವ ಶಾಯಿ ಕೊರತೆ ಇದ್ದು, ಅದು ಪೂರೈಕೆಯಾಗುತ್ತಿದ್ದಂತೆ ಹೋಂ ಐಸೋಲೇಶನ್ ಹಾಗೂ ಅಂತರ ಜಿಲ್ಲೆಯಿಂದ ಬರುವ ಎಲ್ಲರ ಕೈಗೂ ಸೀಲ್ ಹಾಕಲಾಗುವುದು ಎಂದರು.

    ಪೂರ್ವ ನಿರ್ಧರಿತ ಮದುವೆಗೆ ಅವಕಾಶ:

    ಪೂರ್ವನಿರ್ಧರಿತ ಮದುವೆಗೆ ಅನುಮತಿ ಪಡೆದು ಮನೆಯಲ್ಲೇ ನೆರವೇರಿಸಲು ಅವಕಾಶ ನೀಡಲಾಗುವುದು. ಅನುಮತಿ ಪಡೆದು 40 ಜನ ಮಾತ್ರ ಸೇರಲು ಅವಕಾಶವಿದೆ. ಮದುವೆಗೆ ಓಡಾಲೂ ಅಗತ್ಯ ಪಾಸ್​ನ ಅವಶ್ಯಕತೆ ಇದೆ ಎಂದರು.

    19 ಚೆಕ್ ಪೋಸ್ಟ್

    ಲಾಕ್​ಡೌನ್ ನಿಯಮ ಕಟ್ಟುನಿಟ್ಟಿನ ಜಾರಿಗೆ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಅಂತರ ಜಿಲ್ಲಾ ಗಡಿಗಳಲ್ಲಿ 19 ಚೆಕ್ ಪೋಸ್ಟ್ ತೆರೆಯಲಾಗಿದೆ. ಅಲ್ಲದೆ, ಪ್ರತಿ ಪಟ್ಟಣಕ್ಕೆ ಪ್ರವೇಶಿಸುವಲ್ಲಿ ಚೆಕ್​ಪೋಸ್ಟ್ ತೆರೆಯಲಾಗಿದ್ದು, ವಾಹನ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts