More

    ಖಾದ್ಯ ತೈಲದ ಕೊರತೆ ನೀಗಿಸಿದ ಬಂದರು

    ಕಾರವಾರ: ರಾಜ್ಯದಲ್ಲಿ ಲಾಕ್​ಡೌನ್ ಅವಧಿಯಲ್ಲಿ ಖಾದ್ಯ ತೈಲದ ಕೊರತೆ ಉಂಟಾಗದಂತೆ ವ್ಯವಸ್ಥೆ ಮಾಡುವಲ್ಲಿ ಕಾರವಾರ ಬಂದರು ಮಹತ್ವದ ಪಾತ್ರ ವಹಿಸಿದೆ.

    ಲಾಕ್​ಡೌನ್ ಅವಧಿಯಲ್ಲಿ ಮಲೇಷ್ಯಾದಿಂದ ಎರಡು ಹಡಗುಗಳು ಬಂದು ಖಾದ್ಯ ತೈಲ ಖಾಲಿ ಮಾಡಿದ್ದು, ಒಟ್ಟು 8 ಸಾವಿರ ಮೆಟ್ರಿಕ್ ಟನ್​ಗೂ ಅಧಿಕ ಪ್ರಮಾಣದ ಅಡುಗೆ ಎಣ್ಣೆಯನ್ನು ರಾಜ್ಯದ ವಿವಿಧೆಡೆ ಕಳಿಸಿಕೊಡಲಾಗಿದೆ.

    ಕಾರವಾರದಲ್ಲಿ ಎರಡು ಕಂಪನಿಗಳ ಖಾದ್ಯ ತೈಲ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ತಲಾ 3,200 ಮೆಟ್ರಿಕ್ ಟನ್ ಸಾಮರ್ಥ್ಯದ ನಾಲ್ಕು ಸಂಗ್ರಹಾಗಾರಗಳಿವೆ. ಹಡಗಿನಿಂದ ಪೈಪ್​ಗಳ ಮೂಲಕ ತೈಲ ಖಾಲಿ ಮಾಡಿ ಅಲಿಗದ್ದಾದಲ್ಲಿರುವ ಕಂಪನಿಗಳ ಸಂಗ್ರಹಾಗಾರದಲ್ಲಿ ತುಂಬಿಸಲಾಗುತ್ತದೆ. ನಂತರ ಅದನ್ನು ಟ್ಯಾಂಕರ್​ಗಳ ಮೂಲಕ ವಿವಿಧೆಡೆ ಕಳಿಸಲಾಗುತ್ತದೆ.

    ರಾಜ್ಯಕ್ಕೆ ಬೇಕಾಗುವ ಖಾದ್ಯ ತೈಲದ ಬಹುತೇಕ ಭಾಗ ಹೊರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. ಸಂಸ್ಕರಿತ ತಾಳೆ ಎಣ್ಣೆ ಮಲೇಷ್ಯಾದಿಂದ ಬಂದರೆ, ಸನ್ ಫ್ಲವರ್ ಎಣ್ಣೆ ಉಕ್ರೇನ್​ನಿಂದ, ಕಚ್ಚಾ ಎಣ್ಣೆ ಇಂಡೋನೇಷ್ಯಾದಿಂದ ಆಮದಾಗುತ್ತದೆ.

    ರಾಜ್ಯದಲ್ಲಿ ಕಾರವಾರ ಹಾಗೂ ಮಂಗಳೂರು ಎನ್​ಎಂಪಿಟಿ ಎರಡೇ ಬಂದರುಗಳ ಮೂಲಕ ಎಣ್ಣೆ ಆಮದಾಗುತ್ತದೆ. ಮಂಗಳೂರಿನ ಎನ್​ಎಂಪಿಟಿ ಮಹತ್ವದ ಪಾತ್ರ ವಹಿಸಿದರೆ, ಕಾರವಾರವೂ ತನ್ನ ಸಾಮರ್ಥ್ಯದಷ್ಟು ಜವಾಬ್ದಾರಿ ನಿಭಾಯಿಸಿದೆ.

    ಸಾಮಾನ್ಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ 2,100 ರಿಂದ 2,200 ಮೆಟ್ರಿಕ್ ಟನ್ ಖಾದ್ಯ ತೈಲ ಮಾರಾಟವಾಗುತ್ತಿತ್ತು. ಅದರಲ್ಲಿ ಸುಮಾರು 1 ಸಾವಿರ ಟನ್ ಬೆಂಗಳೂರಿನಲ್ಲೇ ಮಾರಾಟವಾಗುತ್ತಿತ್ತು. ಲಾಕ್​ಡೌನ್ ಘೊಷಣೆಯಾದಾಗ ರಾಜ್ಯದಲ್ಲಿ ಕೇವಲ 13 ಸಾವಿರ ಮೆಟ್ರಿಕ್ ಟನ್ ಮಾತ್ರ ತೈಲ ಸಂಗ್ರಹವಿತ್ತು. ಇದರಿಂದ ಅಗತ್ಯ ವಸ್ತು ಪೂರೈಕೆ ವಿಭಾಗದ ನೋಡಲ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ನೇತೃತ್ವದ ತಂಡ ಪೂರೈಕೆದಾರರ ಸಭೆ ಮಾಡಿ ಖಾದ್ಯ ತೈಲ ಆಮದಿಗೆ ವ್ಯವಸ್ಥೆ ಮಾಡಿತ್ತು.

    ಒಂದು ಬಂದರು ಬಿಟ್ಟ ನಂತರ ಇನ್ನೊಂದು ಬಂದರಿನಲ್ಲಿ ಇಳಿಯಲು 14 ದಿನ ಕಾಲಾವಕಾಶ ಇರಬೇಕು ಎಂಬ ನಿಯಮಾವಳಿಯಿದ್ದ ಕಾರಣ ಕೆಲವು ಹಡಗುಗಳು ಸಮುದ್ರ ಮಧ್ಯೆ ನಿಂತಿದ್ದವು. ಆದರೆ, ವಿಶೇಷ ಅನುಮತಿ ಪಡೆದು ಮಂಗಳೂರಿನಲ್ಲಿ ತೈಲ ಖಾಲಿ ಮಾಡಿದ ನಂತರ ಕಾರವಾರದಲ್ಲಿ ಖಾಲಿ ಮಾಡಲು 14 ದಿನ ಕಾಯುವ ಅವಶ್ಯಕತೆಯಿಲ್ಲ ಎಂಬ ವಿಶೇಷ ಅವಕಾಶ ನೀಡಿ ತೈಲವನ್ನು ಖಾಲಿ ಮಾಡಿಸಲಾಗಿದೆ. ಎರಡು ದಿನಗಳ ಹಿಂದೆ ಮಂಗಳೂರಿ ಎನ್​ಎಂಪಿಟಿಯಿಂದ ಆಗಮಿಸಿದ ಹಡಗು 4 ಸಾವಿರ ಮೆಟ್ರಿಕ್ ಟನ್ ಖಾದ್ಯ ತೈಲವನ್ನು ಖಾಲಿ ಮಾಡಿದೆ ಎಂದು ಬಂದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಲಾಕ್​ಡೌನ್ ಆದರೂ ಬಂದರು ಚಟುವಟಿಕೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಕರೊನಾ ಸುರಕ್ಷತೆಯ ದೃಷ್ಟಿಯಿಂದ ಒಂದು ಬಂದರು ಬಿಟ್ಟ ನಂತರ ಇನ್ನೊಂದು ಬಂದರಿನಲ್ಲಿ ಲಂಗರು ಹಾಕುವ ಮೊದಲು 14 ದಿನ ಕಳೆಯ ಬೇಕು ಎಂಬ ನಿಯಮ ರೂಪಿಸಲಾಗಿದೆ. ಹಡಗಿನ ಸಿಬ್ಬಂದಿಗೆ ಕೆಳಗಿಳಿಯಲು ಅವಕಾಶ ನೀಡುವುದಿಲ್ಲ. ಪ್ರತಿ ಹಡಗಿನಲ್ಲಿ ಬಂದ ಎಲ್ಲರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ಮಂಗಳೂರಿನಲ್ಲಿ ಹಡಗೊಂದು ಪ್ರಮಾಣಪತ್ರ ಪಡೆದು ಸರಕು ಖಾಲಿ ಮಾಡಿದರೆ ಕಾರವಾರಕ್ಕೆ ಬರುವಾಗ 14 ದಿನ ಕಳೆಯಬೇಕು ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ. ಕ್ಯಾ. ಸ್ವಾಮಿ ಬಂದರು ಇಲಾಖೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts