More

    ಕ್ಷೇತ್ರದ ಅಭಿವೃದ್ಧಿಗಾಗಿ 541 ಕೋಟಿ ರೂ. ಅನುದಾನ

    ಕೊಳ್ಳೇಗಾಲ: ಐದು ವರ್ಷದ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳಿಂದ 541 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
    ಪಟ್ಟಣದ ಹೊಸ ಹಂಪಾಪುರ ಗ್ರಾಮದಲ್ಲಿ ಸೋಮವಾರ ಹರಳೆ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
    2018-19 ರಿಂದ 2022-23ನೇ ಸಾಲಿನವರೆಗೆ ಎಸ್‌ಇಪಿ, ಟಿಎಸ್‌ಪಿ, ಇತರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಯೋಜನೆ, ಸಮುದಾಯ ಭವನಗಳು ಇತ್ಯಾದಿ ಯೋಜನೆಗಳಿಂದ ಕೊಳ್ಳೇಗಾಲ ಹಾಗೂ ಯಳಂದೂರು ಪಟ್ಟಣ ಮತ್ತು 30 ಪಂಚಾಯಿತಿಗಳ ಅಭಿವೃದ್ಧಿಗಾಗಿ 541 ಕೋಟಿ ರೂ. ಅನುದಾನ ತಂದಿದ್ದೇನೆ. ಹರಳೆ ಪಂಚಾಯಿತಿಗೆ 9.40 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕೆಲಸವಾಗಬೇಕಿದೆ ಎಂದರು.
    ಕಳೆದ ಬಾರಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ವೇಳೆ ಹರಳೆ ಪಂಚಾಯಿತಿಯಲ್ಲಿ ನನಗೆ 2721 ಮತ ದೊರೆತಿತ್ತು. ಕಾಂಗ್ರೆಸ್‌ಗೆ 1019, ಬಿಜೆಪಿಗೆ 744 ಮತ ಬಂದಿತ್ತು. ಇದೀಗ ಬಿಎಸ್ಪಿ ಹಾಗೂ ಬಿಜೆಪಿ ಮತ ಸೇರಿ 3465 ಮತ ಬರಬೇಕು. ಆ ರೀತಿಯಲ್ಲಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
    ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್‌ನಲ್ಲಿ 200 ಯೂನಿಟ್ ಉಚಿತ ಕರೆಂಟ್ ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ. ಆದರೆ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಪೂರ್ಣ ಸರ್ಕಾರ ಇದ್ದಾಗ ಏಕೆ ಇದನ್ನು ಮಾಡಲಿಲ್ಲ. ಈ ಭರವಸೆ ಜನರನ್ನು ಸೆಳೆಯಲು ಮಾಡಿದ ತಂತ್ರವಾಗಿದೆ ಎಂದು ಟೀಕಿಸಿದರು.
    ಈಗಾಗಲೇ ಎಸ್ಸಿ-ಎಸ್ಟಿಗಳಿಗೆ 75 ಯೂನಿಟ್ ಉಚಿತ ಎಂಬ ನಿರ್ಣಯ ಬಿಜೆಪಿ ಬಜೆಟ್‌ನಲ್ಲಿ ಪಾಸಾಗಿದೆ. ಇದಕ್ಕೆ ಟಕ್ಕರ್ ನೀಡಲು ಕಾಂಗ್ರೆಸ್ ಭರವಸೆ ನೀಡಿದೆ. ಬಡ ಕುಟುಂಬದ ಮಹಿಳೆಗೆ 2 ಸಾವಿರ ರೂ. ಕೊಡುತ್ತೇವೆ ಅಂತಿದ್ದಾರೆ. ಆದರೆ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಬಡ ಕುಟುಂಬವಿದೆ. ಇವೆಲ್ಲರಿಗೂ ಪ್ರತಿ ತಿಂಗಳೂ ಹಣ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
    ಗ್ರಾಮಾಂತರ ಮಂಡಲ ಅಧ್ಯಕ್ಷ ಲೋಕೇಶ್ ಮಾತನಾಡಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸವಲತ್ತು ಪ್ರತಿ ಮನೆ ಮನೆಗೂ ತಲುಪಿದೆ. ಶಾಸಕ ಎನ್.ಮಹೇಶ್ ಸಾಕಷ್ಟು ಕೆಲಸ ಮಾಡಿದ್ದಾರೆ. ಪ್ರತಿ ಬೂತ್‌ಗೂ ಅಭಿವೃದ್ಧಿ ವಿಸ್ತರಿಸಿದ್ದಾರೆ. ಬೂತ್ ಮಟ್ಟದ ಬಿಜೆಪಿ ಶಕ್ತಿ ಕೇಂದ್ರದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮೈಮರೆಯದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
    ಗ್ರಾಮಾಂತರ ಮಂಡಲ ಅಧ್ಯಕ್ಷ ಲೋಕೇಶ್, ಒಬಿಸಿ ಮೋರ್ಚಾ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಕುಂತೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಭುಸ್ವಾಮಿ, ಸಿದ್ದರಾಜು, ಹಿತ್ತಲದೊಡ್ಡಿ ಮರಿಸ್ವಾಮಿ, ಟಗರಪುರ ರೇವಣ್ಣ, ನಗರಸಭೆ ಸದಸ್ಯ ಕವಿತಾ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts