More

    ಕ್ಷಯರೋಗಿಗಳ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಆದ್ಯತೆ

    ಆಲಮಟ್ಟಿ: ಕ್ಷಯ ರೋಗ ಗುಣಪಡಿಸುವ ಕಾಯಿಲೆಯಾಗಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯ ಇದೆ. 2025ರ ವೇಳೆಗೆ ಕ್ಷಯಮುಕ್ತ ಭಾರತ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಕಲಬುರ್ಗಿ ವಿಭಾಗದ ಡಬ್ಲುೃಎಚ್‌ಒ (ಕ್ಷಯ) ಸಲಹೆಗಾರ ಡಾ.ಸತೀಶ ಘಾಟಗೆ ಹೇಳಿದರು.

    ಇಲ್ಲಿನ ಸಮುದಾಯ ಭವನದಲ್ಲಿ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಹಮ್ಮಿಕೊಂಡಿದ್ದ ಸರ್ವ ಸಾಧಾರಣಾ ಸಭೆ, ಉತ್ತಮ ಔಷಧ ವ್ಯಾಪಾರಿಗಳ ಸನ್ಮಾನ, ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೇಂದ್ರದಿಂದ ರೂಪಿಸಲ್ಪಟ್ಟಿರುವ ನಿಕ್ಷಯ್ ತಂತ್ರಾಂಶದಿಂದ ಕ್ಷಯರೋಗ ಪತ್ತೆಗೆ ಒಳಪಡುವ ರೋಗಿಗಳು, ಕ್ಷಯರೋಗ ರೋಗಿಗಳ ಪರೀಕ್ಷೆ, ಚಿಕಿತ್ಸೆ, ಡಿಬಿಟಿ ಹಾಗೂ ರೋಗಿಗಳಿಗೆ ಸಂಬಂಧಪಟ್ಟ ಇತರ ವಿವರ ದಾಖಲಿಸಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

    ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ರೋಗ ಹರಡುವುದನ್ನು ತಡೆಗಟ್ಟಬಹುದು. ಇದು ಕೇವಲ ಶ್ವಾಸಕೋಶ ಮಾತ್ರವಲ್ಲ, ಕಣ್ಣು, ಕಿವಿ ಸೇರಿ ದೇಹದ ಎಲ್ಲ ಭಾಗಗಳಿಗೂ ಹರಡುತ್ತದೆ. ಹಾಗಾಗಿ ಸರಿಯಾದ ಚಿಕಿತ್ಸೆ ನೀಡುವುದರಿಂದ ಈ ರೋಗವನ್ನು ಗುಣಪಡಿಸಬಹುದು. ಕ್ಷಯ ರೋಗದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ. ಮಧುಮೇಹದಿಂದ ಬಳಲುತ್ತಿದ್ದವರಲ್ಲಿ ಕ್ಷಯ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

    ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಆರ್. ಪರಶುರಾಮ ಮಾತನಾಡಿ, ರೋಗದ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯ. ನಿರ್ಲಕ್ಷ್ಯ ತೋರಿದರೆ ಸಾವು ಸಂಭವಿಸುತ್ತದೆ. ಔಷಧ ವ್ಯಾಪಾರಿಗಳು ಕ್ಷಯ ರೋಗಿಗಳ ಮಾಹಿತಿಯನ್ನು ಸರ್ಕಾರಿ ಆಸ್ಪತ್ರೆಗಳ ಗಮನಕ್ಕೆ ತರಬೇಕು. ಒಂದು ಪ್ರಕರಣಕ್ಕೆ 500 ರೂ. ಗೌರವ ಧನ ನೀಡಲಾಗುತ್ತದೆ ಎಂದರು.

    ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಆರ್.ಎತ್ತಿನಮನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂತೋಷ ರಾಮದುರ್ಗ, ಆರ್.ಎಸ್. ಬಿರಾದಾರ ಮಾತನಾಡಿದರು. ರಮೇಶ ಯಳಮೇಲಿ, ಸಂಗಮೇಶ ಗುಡ್ಡೋಡಗಿ ಹಾಗೂ ಜಿಲ್ಲೆಯ ಔಷಧ ವ್ಯಾಪಾರಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts