More

    ಕ್ಷಯರೋಗಕ್ಕೆ ಇದೆ ಸೂಕ್ತ ಚಿಕಿತ್ಸೆ

    ಚಿತ್ರದುರ್ಗ:ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯ ರೋಗವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನದ ಅಂಗವಾಗಿ ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಕ್ಷಯರೋಗ ಕುರಿತ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸೂಕ್ತ ಚಿಕಿತ್ಸೆ ರೋಗವನ್ನು ಗುಣಪಡಿಸುವುದರೊಂದಿಗೆ, ಜಿಲ್ಲೆಯನ್ನು ಕ್ಷಯದಿಂದ ಮುಕ್ತಗೊಳಿಸಬೇಕಿದೆ. ವೈದ್ಯರು ಮತ್ತು ಆರೋಗ್ಯ ಇಲಾಖೆ ಕಾರ್ಯಕರ್ತರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕ್ಷಯರೋಗದೆಡೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸೂಕ್ಷ್ಮಹಂತದಲ್ಲಿ ಕ್ಷಯ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕೆಂದರು.
    ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಕ್ಷಯ ರೋಗಿಗಳನ್ನು ಶೀಘ್ರ ಪತ್ತೆ ಹಚ್ಚಿ ತ್ವರಿತ ಚಿಕಿತ್ಸೆ ಮುಖಾಂತರ 2025ಕ್ಕೆ ಕ್ಷಯ ರೋಗವನ್ನು ಜಿಲ್ಲೆ ಮತ್ತು ರಾಜ್ಯದಿಂದ ಹೊಡೆದೋಡಿಸಬೇಕಿದೆ. ಚಿಕಿತ್ಸೆ ಮುನ್ನ ರೋಗಿಗೆ ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸದಂತೆ ಮಾಹಿತಿ ನೀಡಬೇಕು. ಒಂದು ವೇಳೆ ರೋಗಿ ಕಾರಣಾಂತರದಿಂದ ಚಿಕಿತ್ಸೆ ಸ್ಥಗಿತಗೊಳಿಸಿದರೆ ರೋಗಿಗೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
    ಈ ನಿಟ್ಟಿನಲ್ಲಿ ವೈದ್ಯರು ಮತ್ತು ಕಾರ್ಯಕರ್ತರು ನಿಗಾ ವಹಿಸಬೇಕು. ಚಿತ್ರದುರ್ಗ ತಾಲೂಕಿನಲ್ಲಿ 256, ಹೊಳಲ್ಕೆರೆ 98, ಹೊಸದುರ್ಗ 92, ಹಿರಿಯೂರು 160, ಚಳ್ಳಕೆರೆ 292, ಮೊಳಕಾಲ್ಮೂರು ತಾಲೂಕಿನ 147 ಸೇರಿ ಜಿಲ್ಲೆಯಲ್ಲಿ 1016 ಜನ ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
    ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ ಮಾತನಾಡಿ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಸೌಲಭ್ಯವಿದೆ ಎಂದು ಹೇಳಿದರು.
    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿದರು.
    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಕೆಎಚ್‌ಪಿಟಿ ಜಿಲ್ಲಾ ಸಂಯೋಜಕಿ ವೀಣಾ, ಕ್ಷಯರೋಗ ನಿಯಂತ್ರಣ ಕಚೇರಿ ಸಿಬ್ಬಂದಿ ಎಸ್‌ಟಿಎಲ್‌ಎಸ್.ಮಾರುತಿ, ವಿಶ್ವನಾಥ, ಮಧುಸೂದನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿಪ್ರಸಾದ್, ಗುರುಮೂರ್ತಿ, ಕಾಂತಪ್ಪ, ಪ್ರಭಾಕರ್ ಆರಾಧ್ಯ, ಹನುಮಂತರೆಡ್ಡಿ, ಯತೀಶ್, ಪೃಥ್ವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts