More

    ಕ್ವಾರಂಟೈನ್ ಪೂರೈಸಿದ್ದರೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

    ಕೆ.ಆರ್.ಪೇಟೆ: ಕರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ವನವಾಸ ಕಳೆದರೂ ಬಿಡುಗಡೆ ಭಾಗ್ಯ ಕಲ್ಪಿಸದಿರುವ ಜಿಲ್ಲಾಡಳಿತದ ಕ್ರಮಕ್ಕೆ ಮುಂಬೈನಿಂದ ಪಟ್ಟಣಕ್ಕೆ ಆಗಮಿಸಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಮುಂಬೈನಿಂದ ಮೇ 9ರಂದು ಜಿಲ್ಲಾಡಳಿತದ ಪಾಸ್ ಪಡೆದು ತಾಲೂಕಿಗೆ ಆಗಮಿಸಿದ್ದವರನ್ನು ಜಿಲ್ಲಾಡಳಿತ ಆನೆಗೊಳ ಗ್ರಾಮದ ಗಡಿಯಲ್ಲಿ ತಡೆದು ವಿವಿಧ ಸರ್ಕಾರಿ ವಸತಿ ಶಾಲೆ ಮತ್ತು ನಿಲಯ ಮತ್ತು ಖಾಸಗಿ ವಿದ್ಯಾಸಂಸ್ಥೆ, ಲಾಡ್ಜ್ ಹಾಗೂ ಕಲ್ಯಾಣ ಮಂಟಪದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿತ್ತು. ಮುಂಬೈನಿಂದ 1137 ಜನ ಮೇ 22ರ ತನಕ ಆಗಮಿಸಿದ್ದಾರೆ.


    ಮುಂಬೈನಿಂದ ಬಂದವರಿಗೆ ಜಿಲ್ಲಾಡಳಿತ 14 ದಿನ ಕ್ವಾರಂಟೈನ್ ಎಂದು ತಿಳಿಸಿತ್ತು. ಆದರೀಗ 14 ದಿನ ಕಳೆದರೂ ಬಿಡುಗಡೆಯಿಲ್ಲ. ಮೇ 9ರಿಂದ 13ರ ತನಕ ಬಂದಿದ್ದ ಎಲ್ಲರೂ ಕ್ವಾರಂಟೈನಿನ ನಿಗದಿತ ದಿನವನ್ನು ಮುಗಿಸಿದ್ದಾರೆ. ಕ್ವಾರಂಟೈನ್‌ಗೆ ದಾಖಲಾದಾಗ ಮೊದಲು ಕರೊನಾ ಪರೀಕ್ಷೆಗೊಳಪಡಿಸಿದ್ದಾರೆ. ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ಜಿಲ್ಲಾ ಮಿಮ್ಸ್‌ಗೆ ಸ್ಥಳಾಂತರಿಸಿದ್ದಾರೆ. ನೆಗೆಟಿವ್ ಬಂದವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಮುಂದುವರಿಸಿ 14 ದಿನದೊಳಗೆ ಮೊತ್ತೊಮ್ಮೆ ಪರೀಕ್ಷೆಗೊಳಪಡಿಸಿ ನೆಗೆಟಿವ್ ಬಂದಾಗ ಬಿಡುಗಡೆಗೊಳಿಸಿ ಮತ್ತೆ 14 ದಿನ ಹೋಮ್ ಕ್ವಾರಂಟೈನ್‌ಗೆ ಕಳುಹಿಸಬೇಕು. ಕ್ವಾರಂಟೈನ್ ಮುಗಿಸಿದ್ದರೂ ಹೋಮ್ ಕ್ವಾರಂಟೈನ್‌ಗೆ ಕಳುಹಿಸದಿರುವುದಕ್ಕೆ ಕ್ವಾರಂಟೈನ್‌ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    14 ದಿನ ಸಾಂಸ್ಥಿಕ ಕ್ವಾರಂಟೈನ್ ಬುಧವಾರ ಮುಗಿಸಿದ್ದವರು 74 ಸೇರಿದಂತೆ ಈವರೆಗೆ 342, ಬಿಡುಗಡೆ ಪೂರ್ವ ಪರೀಕ್ಷೆಗೊಳಪಟ್ಟವರು 173 ಜನರಿದ್ದಾರೆ. ಅವರ ಫಲಿತಾಂಶವೂ ಬಂದಿಲ್ಲ. ಉಳಿದವರಿಗೆ ಪರೀಕ್ಷೆಯೇ ನಡೆದಿಲ್ಲ. ಅವರು ಪರೀಕ್ಷೆಗೊಳಪಟ್ಟು ಫಲಿತಾಂಶದ ನಂತರವೇ ಬಿಡುಗಡೆ ಭಾಗ್ಯ ಸಿಗಬೇಕಿದೆ. ತೃಪ್ತಿಕರವಲ್ಲದ ಸೌಲಭ್ಯದ ನಡುವೆಯೂ ಸಮಯ ಕಳೆದಿರುವ ಅವರು ಬಿಡುಗಡೆಗೆ ಕಾದು ಕುಳಿತಿದ್ದಾರೆ. ಫಲಿತಾಂಶ ತಡವಾಗಿರುವುದರಿಂದ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


    ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಹೋಮ್ ಕ್ವಾರಂಟೈನಲ್ಲಿರಿಸುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೋಮ್ ಕ್ವಾರಂಟೈನಲ್ಲೂ 14 ದಿನ ಇರಬೇಕು. ಸಾಂಸ್ಥಿಕ ಕ್ವಾರಂಟೈನಲ್ಲಿದ್ದವರ ಮೇಲೆ ಪೊಲೀಸರು ಮತ್ತು ಅಧಿಕಾರಿಗಳ ಹದ್ದಿನ ಕಣ್ಣು ಇತ್ತು. ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ಕ್ವಾರಂಟೈನ್‌ನಲ್ಲಿ ಇದು ಸಾಧ್ಯವಿಲ್ಲ. ಪ್ರತಿಯೊಬ್ಬರ ಮನೆ ಮೇಲೆ ನಿಗಾ ವಹಿಸಲು ಕಷ್ಟಸಾಧ್ಯ. ಕ್ವಾರಂಟೈನ್‌ನಲ್ಲಿರುವವರಿಗೆ 28 ದಿನದ ಮೇಲೂ ಪಾಸಿಟಿವ್ ಬರುತ್ತದೆ ಎನ್ನಲಾಗುತ್ತಿದೆ. ಹೋಮ್ ಕ್ವಾರಂಟೈನ್‌ಗೆ ಹೋಗುವವರ ಮೇಲೆ ಜಿಲ್ಲಾಡಳಿತ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದನೋಡಬೇಕಿದೆ.


    ಇನ್ನೊಂದಡೆ ಕ್ವಾರಂಟೈನ್ ಮುಗಿಸಿ ಗ್ರಾಮಕ್ಕೆ ಬರುವವರಿಂದ ಗ್ರಾಮಸ್ಥರು ಭಯಭೀತರಾಗುತ್ತಾರೆ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿವೆ. ಹೋಮ್ ಕ್ವಾರಂಟೈನ್‌ಗೊಳಪಡಿಸಿದರು ಅವರು ಸಮುದಾಯದ ಜತೆ ಸೇರಬಹುದು. ಇದರಿಂದ ಗ್ರಾಮದಲ್ಲಿ ಗಲಾಟೆ ನಡೆದು ಅಶಾಂತಿಗೆ ಕಾರಣವಾಗಬಹುದು ಎನ್ನಲಾಗತ್ತಿದೆ. ಇಷ್ಟು ದಿನ ಸುಮ್ಮನಿದ್ದ ಪಂಚಾಯಿತಿ ನೌಕರರ ಮೇಲೆ ಹೋಮ್ ಕ್ವಾರಂಟೈನ್‌ಗೊಳಪಡುವವರ ಮೇಲೆ ನಿಗಾ ವಹಿಸುವ ಜವಾಬ್ದಾರಿ ನೀಡುತ್ತಾರೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts