More

    ಕ್ವಾರಂಟೈನ್ ಉಲ್ಲಂಘಿಸಿದರೆ ಪಾಸ್​ಪೋರ್ಟ್ ರದ್ದು

    ಸಾಗರ: ಹೋಮ್ ಕ್ವಾರಂಟೈನ್​ನಲ್ಲಿ ಇರುವ ವಿದೇಶದಿಂದ ಬಂದವರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು, ಸಾರ್ವಜನಿಕರ ಜತೆಗೆ ಬೆರೆಯುವುದು ಮಾಡಿದರೆ ಅವರ ಪಾಸ್​ಪೋರ್ಟ್ ರದ್ದು ಮಾಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಎಚ್ಚರಿಕೆ ನೀಡಿದರು.

    ಪ್ರವಾಸಿ ಮಂದಿರದಲ್ಲಿ ಭಾನುವಾರ ಶಾಸಕ ಹರತಾಳು ಹಾಲಪ್ಪ ಜತೆಗಿನ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹೋಮ್ ಕ್ವಾರಂಟೈನ್​ನಲ್ಲಿ ಇರುವವರಿಗೆ ಮನೆಯಿಂದ ಹೊರಗೆ ಬರಬೇಡಿ ಎಂದು ಸೂಚನೆ ನೀಡಲಾಗಿದೆ. ಅವರಿಗೆ ಬೇಕಾದ ದಿನಸಿ, ತರಕಾರಿ, ಹಾಲು ಇನ್ನಿತರೆ ಸಾಮಗ್ರಿ ಮನೆಗೆ ತಲುಪಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದನ್ನು ಮೀರಿಯೂ ಕೆಲವರು ಹೊರಗೆ ಬರುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

    ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಜತೆಗೆ ಶುಂಠಿ, ಅನಾನಸ್, ಪಪ್ಪಾಯಿ ಇನ್ನಿತರೆ ಮಾರಾಟ ಮಾಡುವವರು ಎಪಿಎಂಸಿಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ನಗರ ವ್ಯಾಪ್ತಿಯಲ್ಲಿ ಕರೊನಾ ವೈರಾಣು ನಿಮೂಲನೆ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಒಂದೊಮ್ಮೆ ಅಗತ್ಯ ಇದ್ದರೆ ಮುಹೂರ್ತ ಸಂದರ್ಭದಲ್ಲಿ ಮದುವೆ ಮುಗಿಸಿಕೊಳ್ಳಬೇಕು. ಮದುವೆಯಲ್ಲಿ ಕಡಿಮೆ ಜನರು ಇರಬೇಕು ಎಂದು ಹೇಳಿದರು.

    ನಿರಾಶ್ರಿತರಿಗೆ, ಭಿಕ್ಷುಕರಿಗೆ, ಕಾರ್ವಿುಕರು ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕೆ ತಾತ್ಕಾಲಿಕ ಶೆಡ್ ಸಾಗರದಲ್ಲಿ ನಿರ್ವಿುಸಲಾಗುತ್ತಿದೆ. ಈ ಶೆಡ್​ನಲ್ಲಿ ಆರೋಗ್ಯ ತಪಾಸಣೆ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಆಹಾರ ಸಮಸ್ಯೆಯಿಂದ ಬಳಲಬಾರದು ಎನ್ನುವ ಕಾರಣಕ್ಕೆ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಉದ್ದೇಶ ಹೊಂದಲಾಗಿದ್ದು, ದಾನಿಗಳು ಅಕ್ಕಿ, ಬೆಳೆ, ದಿನಸಿ ಇನ್ನಿತರೆ ವಸ್ತುಗಳನ್ನು ನಗರಸಭೆಯಲ್ಲಿ ಪ್ರಾರಂಭಿಸಲಾಗುವ ಕೌಂಟರ್​ನಲ್ಲಿ ನೀಡಬಹುದು ಎಂದರು.

    ಡಿವೈಎಸ್​ಪಿ ವಿನಾಯಕ್ ಎಸ್.ಶೆಟ್ಟಿಗಾರ್ ಮಾತನಾಡಿ, ಈಗಾಗಲೆ ನಗರ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು ಜನರು ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಒಂದೊಮ್ಮೆ ಹೋಮ್ ಕ್ವಾರಂಟೈನ್​ನಲ್ಲಿರುವ ಕರೊನಾ ಶಂಕಿತರು ಮನೆಯಿಂದ ಹೊರಗೆ ಬಂದು ಸಾರ್ವಜನಿಕರ ಜೊತೆ ಬೆರೆತರೆ ಅವರ ವಿರುದ್ಧ ಮತ್ತು ಅನಗತ್ಯವಾಗಿ ಓಡಾಡುವವರ ವಿರುದ್ಧ ಸೆಕ್ಷನ್ 188, 269, 270 ಮತ್ತು 271 ಕಲಂ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಲಾಕ್​ಡೌನ್​ಗೆ ಪ್ರತಿಯೊಬ್ಬರೂ ಸ್ಪಂದಿಸಿ: ಲಾಕ್​ಡೌನ್ ಘೊಷಣೆ ಮಾಡಿರುವುದು ನಮ್ಮ ಒಳಿತಿಗಾಗಿ. ಸಂಕಷ್ಟ ಎದುರಿಸಬೇಕಾಗಿರುವುದರಿಂದ ಸರ್ಕಾರ ತೆಗೆದುಕೊಂಡಿರುವ ಅಗತ್ಯ ಕ್ರಮಗಳಿಗೆ ಪ್ರತಿಯೊಬ್ಬ ನಾಗರೀಕರು ಸ್ಪಂದಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಮನವಿ ಮಾಡಿದರು. ಎಲ್ಲರೂ ಮನೆಯಲ್ಲೆ ಇದ್ದು ತಾವು ಆರೋಗ್ಯದಿಂದ ಇರುವ ಜತೆಗೆ ಜನರು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಸಣ್ಣ ತಪ್ಪಿನಿಂದ ಇಡೀ ಸಮುದಾಯ ಸಂಕಷ್ಟ ಎದುರಿಸುವ ಸ್ಥಿತಿಗೆ ಯಾರೂ ಕಾರಣವಾಗಬಾರದು ಎಂದರು. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಬಂದಿಲ್ಲ. ಆದರೂ ನಾವು ಮೈಮರೆತು ಕುಳಿತುಕೊಳ್ಳಬಾರದು. ಜನರು ಸ್ವಯಂನಿರ್ಬಂಧ ಹಾಕಿಕೊಳ್ಳುವುದು ಇಂತಹ ತುರ್ತು ಸಂದರ್ಭದಲ್ಲಿ ಅನಿವಾರ್ಯ. ಮೊಂಡುತನ ತೋರಿದರೆ ಜನರು ಹೊರಗೆ ಬರದಂತೆ ತಡೆಯಲು ಪೊಲೀಸ್ ಬಳಕೆ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts