More

    ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಉಚಿತ ನೆರವು

    ಧಾರವಾಡ: ಕೋವಿಡ್ ಸೋಂಕಿತರ ಸಾವಿನಿಂದ ತೊಂದರೆಯಲ್ಲಿರುವ ಕುಟುಂಬಗಳಿಗೆ ನೆರವಾಗಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾರ್ಗದರ್ಶನದಲ್ಲಿ ಮಹಾನಗರ ಪಾಲಿಕೆ ನಿರ್ಧರಿಸಿದೆ. ಸೋಂಕಿತರ ಮೃತ ದೇಹ ಸಾಗಿಸಲು ಉಚಿತ ವಾಹನ ಸೌಲಭ್ಯ, ಸಂಸ್ಕಾರದ ವೆಚ್ಚವನ್ನು ಪಾಲಿಕೆಯಿಂದ ಭರಿಸಿ ಉಚಿತವಾಗಿ ಶವಸಂಸ್ಕಾರ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಅವಳಿನಗರದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಸಾಗಿಸಲು ಆಂಬುಲೆನ್ಸ್ ಮಾಲೀಕರು ಹೆಚ್ಚಿನ ಹಣ ಸಂಗ್ರಹಿಸುತ್ತಿರುವುದರಿಂದ ಶವ ಸಂಸ್ಕಾರಕ್ಕೆ ಕಷ್ಟಪಡುವಂತಾಗಿದೆ. ಹೀಗಾಗಿ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಜನರ ತೊಂದರೆ ನಿವಾರಿಸಲು ಕೋವಿಡ್ ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಕಿಮ್್ಸ, ಜಿಲ್ಲಾಸ್ಪತ್ರೆ ಹಾಗೂ ಎಸ್​ಡಿಎಂ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಹೆಗ್ಗೇರಿ ಸ್ಮಶಾನಕ್ಕೆ ಸಾಗಿಸುವ ಕಾರ್ಯವನ್ನು ಹಾಗೂ ಮೃತ ದೇಹಗಳನ್ನು ಗೌರವಯುತವಾಗಿ ಕೋವಿಡ್-19 ನಿಯಮಾವಳಿ ಅನ್ವಯ ಅಂತ್ಯಸಂಸ್ಕಾರ ಮಾಡಲು ಕ್ರಮ ಜರುಗಿಸಲಾಗುತ್ತಿದೆ.

    ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆ, ಧಾರವಾಡದ ಜಿಲ್ಲಾಸ್ಪತ್ರೆ ಹಾಗೂ ಎಸ್​ಡಿಎಂ ಆಸ್ಪತ್ರೆಗಳಿಗೆ ಮೂರು ಪ್ರತ್ಯೇಕ ವಾಹನಗಳನ್ನು ಶವಗಳ ಸಾಗಾಣಿಕೆಗೆ ಮೀಸಲಿಟ್ಟಿದ್ದು, ನಿಧನರಾದ ಸೋಂಕಿತರ ಕುಟುಂಬದ ಸದಸ್ಯರು ಪಾಲಿಕೆಯ ಸಹಾಯವಾಣಿ 0836-2213888, 9141051611 ಹಾಗೂ 0836-2213898ಕ್ಕೆ ಕರೆ ಮಾಡಿ ತಿಳಿಸಿದರೆ ತಕ್ಷಣ ಆಯಾ ಆಸ್ಪತ್ರೆಗೆ ನೀಡಿರುವ ವಾಹನದಲ್ಲಿ ಸೋಂಕಿತರ ಮೃತ ದೇಹವನ್ನು ಹೆಗ್ಗೇರಿಯ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗುವುದು.

    ಸೋಂಕಿತರ ಶವ ಸಂಸ್ಕಾರವು ನಿರ್ದಿಷ್ಟ ಮಾರ್ಗಸೂಚಿ ಪ್ರಕಾರ ಮಾಡಬೇಕಿರುವುದರಿಂದ ಶವ ಸಂಸ್ಕಾರ ಮಾಡಲು ಐದು ಜನ ಸಿಬ್ಬಂದಿಗೆ ತರಬೇತಿ ನೀಡಿ, ಪಿಪಿಇ ಕಿಟ್ ಸೇರಿದಂತೆ ಎಲ್ಲ ಸುರಕ್ಷತಾ ಸಾಮಗ್ರಿ ನೀಡಲಾಗಿದೆ. ತರಬೇತಿ ಹೊಂದಿರುವ ಸಿಬ್ಬಂದಿ ಮೃತರಾಗಿರುವ ಸೋಂಕಿತನ ಸಂಪ್ರದಾಯದಂತೆ ಶವಸಂಸ್ಕಾರ ಮಾಡುತ್ತಾರೆ. ಇದಕ್ಕಾಗಿ ಪ್ರತಿ ಶವ ಸಂಸ್ಕಾರಕ್ಕೆ ಸುಮಾರು 6,000 ರೂಪಾಯಿ ಪಾಲಿಕೆಯಿಂದ ವೆಚ್ಚ ಮಾಡಲಾಗುತ್ತದೆ.

    ದುಃಖದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಹೊರೆಯಾಗದಂತೆ ಸಹಾಯ ನೀಡುವುದು ಜಿಲ್ಲಾಡಳಿತ ಮತ್ತು ಪಾಲಿಕೆ ಉದ್ದೇಶ. ಜನರು ಹಣ ನೀಡಬಾರದು. ಒಂದು ವೇಳೆ ಮೃತ ದೇಹಗಳನ್ನು ಸಾಗಿಸಲು ಹಾಗೂ ಅಂತ್ಯ ಸಂಸ್ಕಾರಕ್ಕೆ ಹಣ ಕೇಳಿದರೆ ಪಾಲಿಕೆ ಸಹಾಯವಾಣಿಗೆ ದೂರು ದಾಖಲಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts